ನವದೆಹಲಿ: ದೇಶಾದ್ಯಂತ ಕರೊನಾ ಮಣಿಸಲು ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಮಹಿಳಾ ಖಾತೆದಾರರಿಗೆ ಎರಡನೇ ಹಂತದ 500 ರೂಪಾಯಿ ಮೇ 4ರಿಂದ ಹಂತಹಂತವಾಗಿ ಜಮೆಯಾಗಲಿದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ 3 ತಿಂಗಳು ತಲಾ 500 ರೂಪಾಯಿ ಜಮಾ ಮಾಡುವುದಾಗಿ ಮಾರ್ಚಿ 26ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದರು. ಅದರಂತೆ ಮಹಿಳಾ ಖಾತೆದಾರರಿಗೆ ಈಗಾಗಲೇ ಏಪ್ರಿಲ್ ತಿಂಗಳ 500 ರೂ. ವರ್ಗಾವಣೆಯಾಗಿದೆ. ಮೇ ತಿಂಗಳ ಹಣ ಸೋಮವಾರದಿಂದ ಬಿಡುಗಡೆಯಾಗಲಿದ್ದು, ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಜನದಟ್ಟಣೆ ತಪ್ಪಿಸಲು ಮೇ 11ರವರೆಗೆ ಹಂತಹಂತವಾಗಿ ಗ್ರಾಹಕರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಖಾತೆದಾರರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಹಣ ಪಡೆಯಬಹುದು ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ದೇಬಸಿಶ್ ಪಾಂಡ ಶನಿವಾರ ಟ್ವೀಟ್ ಮಾಡಿದ್ದಾರೆ.
ಯಾರಿಗೆ, ಯಾವಾಗ ಹಣ ಬರುತ್ತೆ?:
ವೇಳಾಪಟ್ಟಿ ಪ್ರಕಾರ, ಪಿಎಂಜೆಡಿವೈ ಅಡಿಯಲ್ಲಿ ಮಹಿಳಾ ಖಾತೆದಾರರ ಬ್ಯಾಂಕ್ ಖಾತೆ ಸಂಖ್ಯೆ ಕೊನೆಯಲ್ಲಿ 0 ಮತ್ತು 1 ಆಗಿದ್ದರೆ ಮೇ 4ರಂದು, ಹಾಗೇ ಕೊನೆಯ ಅಂಕಿ 2 ಅಥವಾ 3 ಇದ್ದಲ್ಲಿ ಮೇ 5 ರಂದು, 4 ಅಥವಾ 5 ಸಂಖ್ಯೆಯೊಂದಿಗೆ ಕೊನೆಗೊಳ್ಳುವ ಖಾತೆಗಳಿಗೆ ಮೇ 6ಕ್ಕೆ ಹಣ ಜಮೆ ಆಗಲಿದೆ. ಇನ್ನು 6 ಅಥವಾ 7 ರೊಂದಿಗೆ ಕೊನೆಗೊಳ್ಳುವ ಖಾತೆಗಳಿಗೆ ಮೇ 8ರಂದು, 8 ಅಥವಾ 9 ಸಂಖ್ಯೆಯೊಂದಿಗೆ ಕೊನೆಗೊಳ್ಳುವ ಖಾತೆಗಳಿಗೆ ಮೇ 11ಕ್ಕೆ ತಲಾ 500 ರೂ. ಬರಲಿದೆ ಎಂದು ದೇಬಸಿಶ್ ಪಾಂಡ ತಿಳಿಸಿದ್ದಾರೆ.
ಹಣ ಜಮೆಯಾದ ದಿನವೇ ಫಲಾನುಭವಿಗಳು ಹಣ ಪಡೆಯಲು ಬ್ಯಾಂಕ್, ಎಟಿಎಂಗಳ ಬಳಿ ಮುಗಿಬೀಳಬಾರದು. ತುತಾರ್ಗಿ ಹಣ ಬೇಕಿದ್ದವರೂ ಕರೊನಾ ಮುಂಜಾಗ್ರತೆ ಮರೆಯುವಂತಿಲ್ಲ. ಮೇ 11ರ ನಂತರ ಎಲ್ಲ ಫಲಾನುಭವಿಗಳೂ ಹಣ ಪಡೆಯಲು ಅವಕಾಶವಿದೆ ಎಂದು ಅವರು ವಿವರಿಸಿದ್ದಾರೆ. (ಏಜೆನ್ಸೀಸ್)
ದುಬೈ ಮಾಲ್ ಮತ್ತೆ ಆರಂಭ, ವಿಶ್ವದ ಅತ್ಯಂತ ದೊಡ್ಡ ಮಾಲ್ ಸ್ಥಗಿತಗೊಂಡಿದ್ದಾದರೂ ಏಕೆ?