ಬೆಂಗಳೂರು: ಇಂಜಿನಿಯರಿಂಗ್ ಸೀಟು ಬ್ಲಾಕಿಂಗ್ ಹಗರಣವು ತನಿಖಾ ಹಂತದಲ್ಲಿರುವ ನಡುವೆಯೇ ಹಿಂದಿನ ವರ್ಷಗಳಲ್ಲಿ ಹಗರಣ ನಡೆದಿದೆಯೇ? ಯಾವಾಗ ಈ ಹಗರಣ ಆರಂಭವಾಗಿದೆ? ಕಿಂಗ್‌ಪಿನ್ ಯಾರು ಎಂದು ವಿಚಾರಣೆಗೆ ಒಳಪಡಿಸುವಂತೆ ಉನ್ನತ ಶಿಕ್ಷಣ ಇಲಾಖೆಯು ತನಿಖಾಧಿಕಾರಿಗಳಿಗೆ ಮನವಿ ಮಾಡಿದೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಕೆಇಎಯ ಹೊರಗುತ್ತಿಗೆ ನೌಕರ ಸೇರಿ ಕನಿಷ್ಠ 10 ಜನರನ್ನು ಬಂಧಿಸಲಾಗಿದೆ. ಇದರ ಹಿಂದೆ ದೊಡ್ಡ ಮಟ್ಟದಲ್ಲಿ ಹಲವು ವರ್ಷಗಳಿಂದ ದಂಧೆ ನಡೆಸುತ್ತಿರುವ ಶಂಕೆ ಇದೆ. ಹೀಗಾಗಿ, ವಿಚಾರಣೆಯ ಸಮಯದಲ್ಲಿ ಹಿಂದಿನ ವರ್ಷಗಳಲ್ಲಿ ಮಾಡಿದ ಸೀಟು ಹಂಚಿಕೆಗಳನ್ನು ಪರಿಗಣಿಸಲು ಮನವಿ ಮಾಡಿದ್ದೇವೆ ಎಂದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (ಕೆಇಎ) ಈ ವರ್ಷ ಇಂಜಿನಿಯರಿಂಗ್ ಕೋರ್ಸ್‌ಗಳ ಸೀಟು ಹಂಚಿಕೆ ಸಂದರ್ಭದಲ್ಲಿ ವರದಿಯಾದ ಸುಮಾರು 2,525 ಸೀಟು ತಡೆ ಹಗರಣದ ತನಿಖೆ ನಡೆಸಲಾಗುತ್ತಿದೆ. ಹಗರಣದಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಕೈವಾಡದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ವಿವರಗಳನ್ನು ಬಹಿರಂಗಪಡಿಸಲು ಸರ್ಕಾರವು ತನಿಖೆಗಾಗಿ ಕಾಯುತ್ತಿದೆ. ತನಿಖೆ ನಡೆಯುತ್ತಿರುವುದರಿಂದ ಈ ಹಂತದಲ್ಲಿ ಸಂಸ್ಥೆಗಳ ಪಾತ್ರದ ಬಗ್ಗೆ ನಾವು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.
ಸೀಟು ಆಯ್ಕೆ ಮಾಡಿಕೊಂಡ ನಂತರ ವಿದ್ಯಾರ್ಥಿಗಳು ಆಯಾ ಕಾಲೇಜುಗಳಿಗೆ ವರದಿ ಮಾಡದೇ ಇರಲು ನಿಜವಾದ ಕಾರಣವಿದ್ದಲ್ಲಿ ಕ್ಷಮೆ ನೀಡಬಹುದು. ಆದರೆ, ಉದ್ದೇಶಪೂರ್ವಕ ಆಯ್ಕೆಯನ್ನು ತಡೆಯುವ ಉದ್ದೇಶದಿಂದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಈ ಹಿಂದೆ ವೈದ್ಯಕೀಯ ಕೋರ್ಸ್‌ಗಳಲ್ಲಿ ಸೀಟ್ ಬ್ಲಾಕಿಂಗ್ ಹಗರಣವು ವ್ಯಾಪಕವಾಗಿತ್ತು. ನೀಟ್ ಪರಿಚಯಿಸಿದ ನಂತರ ಅಂತಹ ಚಟುವಟಿಕೆಗಳಿಗೆ ಅವಕಾಶವಿಲ್ಲ, ಆದ್ದರಿಂದ ವಂಚಕರು ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಸ್ಥಳಾಂತರಗೊಂಡಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದರು.