ಕಿರಿದಾಗುತ್ತಿದೆ ಕಡಲ ತೀರ

ಭರತ್‌ರಾಜ್ ಸೊರಕೆ ಮಂಗಳೂರು

ವರ್ಷದಿಂದ ವರ್ಷಕ್ಕೆ ಕರಾವಳಿಯ ಸಮುದ್ರ ತೀರ ಕಿರಿದಾಗುತ್ತಿದೆ. ಕಡಲು ಭೂಭಾಗವನ್ನು ಕಬಳಿಸುತ್ತಿದೆ ಎಂಬ ಆತಂಕಕಾರಿ ಮಾಹಿತಿ ಬಯಲಾಗಿದೆ.

ಮಂಗಳೂರು ವಿಶ್ವವಿದ್ಯಾಲಯದ ಸಾಗರ ಭೂಗರ್ಭ ಶಾಸ್ತ್ರ ವಿಭಾಗ ಮತ್ತು ಗೋವಾದ ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆ ಜಂಟಿಯಾಗಿ ಸಮುದ್ರ ತೀರದ ಬಗ್ಗೆ ಅಧ್ಯಯನ ನಡೆಸಿದೆ. 1990ರಿಂದ 2016ರ ನಡುವೆ ಕರಾವಳಿ ಕಡಲ ತೀರದಲ್ಲಿ ಆಗಿರುವ ಬದಲಾವಣೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಕರ್ನಾಟಕ ಕರಾವಳಿ ತೀರದ ಪೈಕಿ ಮಂಗಳೂರಿನ ಉಳ್ಳಾಲ ಕೋಟೆಕಾರು ತೀರ ಅತಿ ಹೆಚ್ಚು ನಾಶವಾಗಿದೆ. 30 ವರ್ಷ ಹಿಂದೆ ಕೋಟೆಕಾರು ಸಮುದ್ರ ತೀರ ಸುಮಾರು 1.5 ಕಿ.ಮೀ.ನಷ್ಟು ಅಗಲವಿದ್ದರೆ ಪ್ರಸ್ತುತ 30 ಮೀಟರ್‌ನಷ್ಟು ಮಾತ್ರ ಉಳಿದುಕೊಂಡಿದೆ.

1990ರಿಂದ 2016ರ ನಡುವಿನ ಅಂದಾಜು ಲೆಕ್ಕಾಚಾರದ ಪ್ರಕಾರ ಉಳ್ಳಾಲದಲ್ಲಿ ವರ್ಷಕ್ಕೆ ಸರಾಸರಿ 1 ಮೀ. ಸಮುದ್ರ ತೀರ ಮಾಯವಾಗುತ್ತಿದೆ. ನಗರದ ಮೂಳೂರು, ಉಚ್ಚಿಲದಲ್ಲೂ ಇದೇ ಸ್ಥಿತಿ. ಉಳ್ಳಾಲದ ಜತೆ ಜತೆಗೆ ತೀರ ನಾಶವಾಗುತ್ತಿರುವ ಸಮುದ್ರದ ಪೈಕಿ ಉತ್ತರ ಕನ್ನಡದ ಭಾವಿಕೇರಿ ಬೀಚ್ ಇದೆ.

ಕಾರಣವೇನು?: ಕಡಲ ತೀರದಲ್ಲಿ ಈ ಮಹತ್ತರ ಬದಲಾವಣೆಗೆ ಮಾನವ ನಿರ್ಮಿತ ಮತ್ತು ಪ್ರಕೃತಿಯ ಸಹಜ ಪ್ರಕ್ರಿಯೆ ಕಾರಣ ಎಂದು ಹೇಳುತ್ತಾರೆ ಅಧ್ಯಯನಕಾರರು. ಮಳೆಗಾಲದಲ್ಲಿ ಸಮುದ್ರ ತೀರದಲ್ಲಿ ಮರಳು ಜಾರುವುದು ಮತ್ತು ಮಳೆಗಾಲದ ಬಳಿಕ ಮತ್ತೆ ಸಂಗ್ರಹವಾಗುವುದು ಸಹಜ ಪ್ರಕ್ರಿಯೆ.
ಸಮುದ್ರಕ್ಕೆ ನದಿ ಸೇರುವಲ್ಲಿ ಅನಿಯಮಿತ ಮರಳುಗಾರಿಕೆ ಮತ್ತು ನದಿಗಳಿಗೆ ವೆಂಟೆಡ್ ಡ್ಯಾಂ ರಚನೆ ಹೆಚ್ಚು ಪರಿಣಾಮ ಬೀರುತ್ತಿದೆ. ನದಿಗೆ ಅಲ್ಲಲ್ಲಿ ಡ್ಯಾಂ ನಿರ್ಮಾಣವಾಗಿರುವ ಪರಿಣಾಮ ತೀರದಲ್ಲಿ ನಿಲ್ಲುವಂಥ ಕೆಸರು ಮಿಶ್ರಿತ ಮರಳು ಹರಿದುಬರುತ್ತಿಲ್ಲ. ಪ್ರಸ್ತುತ ನೇತ್ರಾವತಿ, ಸ್ವರ್ಣ ನದಿಗಳಿಗೆ ನೂರಾರು ವೆಂಟೆಡ್ ಡ್ಯಾಂ ರಚನೆಯಾಗಿದ್ದು ಮರಳು ಹರಿವಿಗೆ ಹೆಚ್ಚು ತಡೆಯಾಗಿದೆ ಎನ್ನುತ್ತಾರೆ ಮಂಗಳೂರು ವಿಶ್ವವಿದ್ಯಾಲಯದ ಸಾಗರ ಭೂಗರ್ಭ ಶಾಸ್ತ್ರ ವಿಭಾಗದ ಪ್ರೊ.ಜಯಪ್ಪ.

ತಡೆಯಿಂದ ಇನ್ನೊಂದೆಡೆ ಪರಿಣಾಮ: ಸಮುದ್ರ ತೀರದಲ್ಲಿ ಮಾನವ ನಿರ್ಮಿತ ಯಾವುದೇ ಕೆಲಸಗಳು ನಡೆದರೂ ಇನ್ನೊಂದು ಕಡೆ ಪರಿಣಾಮ ಬೀರುತ್ತದೆ. ಹೀಗಾಗಿ ಒಂದು ಕಡೆ ತೀರವನ್ನು ಕಳೆದುಕೊಂಡರೆ ಮತ್ತೆ ಕೆಲವು ಕಡೆ ಬೀಚ್‌ನ ಅಗಲ ಜಾಸ್ತಿಯಾಗುತ್ತಿದೆ. ಬೆಂಗ್ರೆ ಬ್ರೇಕ್ ವಾಟರ್ ನಿರ್ಮಾಣವಾದ ಬಳಿಕ ಬೆಂಗ್ರೆ ತೀರ ಅಗಲವಾಗಿದೆ. ಇದರಿಂದ ಸಮುದ್ರದ ಅಲೆ ಪರಿಣಾಮ ಕೋಟೆಪುರಕ್ಕೆ ಹೆಚ್ಚಿದೆ. ಆದರೆ ಪಡುಬಿದ್ರಿ ಎರ್ಮಾಳು ಮತ್ತು ಉತ್ತರ ಕನ್ನಡದ ದೇವಭಾಗ್ ಸಮುದ್ರ ತೀರದ ಪ್ರತಿವರ್ಷ 3.1 ಮೀಟರ್‌ನಷ್ಟು ಅಗಲವಾಗುತ್ತಿದೆ. ಇಲ್ಲಿ ಸರ್ಕಾರ ತಡೆಗೋಡೆ ಕಟ್ಟಿದ ಪರಿಣಾಮ ತೀರ ರಕ್ಷಣೆಯಾಗಿದೆ. ಇದು ತಾತ್ಕಾಲಿಕ. ತೀರ ರಕ್ಷಣೆಗೆ ಮರೀನಾ ಬೀಚ್‌ನಲ್ಲಿ ಕಟ್ಟಿದಂತೆ ಸುಧಾರಿತ ತಡೆಗೋಡೆಗಳನ್ನು ನಿರ್ಮಿಸಬೇಕು. ಇಲ್ಲವಾದಲ್ಲಿ ಅಪ್ರಯೋಜಕ. ಉತ್ತರ ಕನ್ನಡದ ಸಮುದ್ರ ತೀರದಲ್ಲಿ ಕೆಲವೆಡೆ ದ್ವೀಪದಂತಿರುವ ಪರಿಣಾಮ ಸಮುದ್ರ ಅಲೆ ನೇರವಾಗಿ ತೀರಕ್ಕೆ ಹೊಡೆಯುವುದಿಲ್ಲ. ಬೃಹತ್ ಬಂಡೆಗಳು ತೀರವನ್ನು ರಕ್ಷಣೆ ಮಾಡುತ್ತವೆ ಎನ್ನುವುದು ಅಧ್ಯನಕಾರರ ಮಾತು.

ಸಮುದ್ರ ತೀರದಲ್ಲಿ ಆಗಿರುವ ಈ ಬದಲಾವಣೆಗೆ ಮಾನವ ಮತ್ತು ಪ್ರಕೃತಿ ಸಹಜ ಪ್ರಕ್ರಿಯೆ ಕಾರಣ. ಹಡಗು, ಬೋಟ್‌ಗಳ ಪ್ರವೇಶಕ್ಕೆ ಅನುಕೂಲವಾಗುವಂತೆ ಬಂದರು ಪ್ರದೇಶದಲ್ಲಿ ಬ್ರೇಕ್ ವಾಟರ್ ನಿರ್ಮಿಸಲಾಗಿರುತ್ತದೆ. ಇದು ಕೆಸರು ಮರಳಿನ ಚಲನೆಗೆ ಅಡ್ಡಿ ಉಂಟು ಮಾಡುತ್ತದೆ. ಇದರ ಪರಿಣಾಮ ಇನ್ನೊಂದು ಕಡೆ ಕಾಣಿಸಿಕೊಳ್ಳುತ್ತದೆ. ವೆಂಟೆಡ್ ಡ್ಯಾಂ ಪರಿಣಾಮದಿಂದ ತೀರ ರಕ್ಷಣೆಗೆ ಸಹಕಾರಿಯಾಗುವ ಕೆಸರು ಸಮುದ್ರಕ್ಕೆ ಸೇರುತ್ತಿಲ್ಲ.
|ಕೆ.ಎಸ್.ಜಯಪ್ಪ, ಮಂಗಳೂರು ವಿಶ್ವವಿದ್ಯಾಲಯ ಸಾಗರ ಭೂಗರ್ಭ ಶಾಸ್ತ್ರ ವಿಭಾಗ ಪ್ರೊಪೆಸರ್