ಕಡಲಲ್ಲಿ ತೇಲಿ ಬರುತ್ತಿದೆ ಡಾಂಬರು!

*

ಲೋಕೇಶ್ ಸುರತ್ಕಲ್

ಬೈಕಂಪಾಡಿ, ಹೊಸಬೆಟ್ಟು, ಗುಡ್ಡೆಕೊಪ್ಲ, ಸಸಿಹಿತ್ಲು ಬಳಿ ಸಮುದ್ರದಲ್ಲಿ ಕಳೆದ ಕೆಲ ದಿನಗಳಿಂದ ಡಾಂಬರು ತೇಲಿ ಬರುತ್ತಿದ್ದು, ತೀರದಲ್ಲಿ ಉಂಡೆ ರೂಪದಲ್ಲಿ ಸಂಗ್ರಹವಾಗುತ್ತಿದೆ. ಇದು ಮೀನುಗಾರರನ್ನು ತೀವ್ರ ಆತಂಕಕ್ಕೆ ಈಡು ಮಾಡಿದೆ.

ಸಮುದ್ರದಲ್ಲಿ ಯಾವುದೋ ತೈಲ ಸಾಗಾಟ ಹಡಗನ್ನು ನಿಯಮ ಉಲ್ಲಂಘಿಸಿ ಶುದ್ದಗೊಳಿಸಿರುವುದು ಅಥವಾ ಉದ್ಯಮಗಳ ತ್ಯಾಜ್ಯ ನೀರು ವಿಸರ್ಜನೆ ಇದಕ್ಕೆ ಕಾರಣವಿರಬೇಕು ಎಂದು ಕುಳಾಯಿ ಮೀನುಗಾರ ಶ್ರೀನಿವಾಸ್ ಶಂಕೆ ವ್ಯಕ್ತಪಡಿಸಿದ್ದಾರೆ. ಬೈಕಂಪಾಡಿ ಬಳಿ ಕೆಲ ದಿನದ ಹಿಂದೆ ಈ ಸಮಸ್ಯೆ ಅತಿಯಾಗಿದ್ದು, ಈಗ ಕಡಿಮೆಯಾಗಿದೆ ಎಂದು ಬೈಕಂಪಾಡಿಯ ಮೀನುಗಾರ ನಾಗೇಶ್ ಸಾಲ್ಯಾನ್ ತಿಳಿಸಿದ್ದಾರೆ.

ಕರಾವಳಿಯಲ್ಲಿ ಸಿಗದ ಮೀನು: ಇತ್ತೀಚೆಗೆ ಕರಾವಳಿಯಲ್ಲಿ ಸಿಗುವ ಮೀನಿನ ಪ್ರಮಾಣ ಕಡಿಮೆಯಾಗಿದೆ. ಸಮುದ್ರ ನೀರಿನಲ್ಲಿ ಡಾಂಬರು ಅಂಶ ಮಿಶ್ರವಾಗಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಡಾಂಬರು ವಾಸನೆ ಹಾಗೂ ತೈಲದ ಅಂಶವೂ ಹೊಂದಿರುವ ಕಾರಣ ಮೀನುಗಾರರಿಗೆ, ಮೀನುಗಾರಿಕೆಗೂ ಸಮಸ್ಯೆಯಾಗಿದೆ. ಮೀನು ಕೊರತೆಯಿಂದ ಮೀನುಗಾರರು ಕಂಗಾಲಾಗಿದ್ದು, ಮಾಲಿನ್ಯ ತಡೆಗೆ ಪ್ರತಿಭಟನೆ ಸಿದ್ಧತೆ ನಡೆಸಲಾಗಿದೆ. ಕರಾವಳಿಯಲ್ಲಿ ಮಲ್ಪೆವರೆಗೂ ಮೀನೇ ಸಿಗುತ್ತಿಲ್ಲ. ಮೀನೆಲ್ಲಿ ಹೋಯಿತು ಎಂಬುದು ಗುಡ್ಡೆಕೊಪ್ಲದ ಮೀನುಗಾರ ಉದಯ ಎಸ್.ಅಮೀನ್ ಪ್ರಶ್ನೆ.

ಜಲಚರಗಳಿಗೆ ಮಾರಕ: ಸಮುದ್ರದಲ್ಲಿ ತೇಲಿ ಬರುವ ಡಾಂಬರು ಅಂಶ ಮೀನುಗಾರಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಜಲಚರಗಳು ಸಾವನ್ನಪ್ಪುತ್ತದೆ. ಪ್ರತಿ ವರ್ಷವೂ ಸಮುದ್ರ ತೀರದಲ್ಲಿ ಇದೇ ರೀತಿ ಡಾಂಬರು ಸಂಗ್ರಹವಾಗುತ್ತಿದ್ದು, ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನಿರ್ಲಕ್ಷೃ ವಹಿಸುತ್ತಿದ್ದಾರೆ ಎಂದು ಮೀನುಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಮುದ್ರದ ಅಲೆಯಲ್ಲಿ ಡಾಂಬರು ಅಂಶ ತೇಲಿ ಬರುತ್ತಿರುವ ಬಗ್ಗೆ ತಮ್ಮ ಕಚೇರಿ ಗಮನಕ್ಕೆ ಬಂದಿಲ್ಲ. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
ರಾಜಶೇಖರ್ ಪುರಾಣಿಕ್,
ಅಧಿಕಾರಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ

ಸಮುದ್ರದಲ್ಲಿ ಡಾಂಬರು ಅಂಶ ಕಂಡುಬರುತ್ತಿರುವ ಕುರಿತು ಯಾವುದೇ ಮಾಹಿತಿಯಿಲ್ಲ. ಬಹುಶಃ ಯಾವುದಾದರೂ ಹಡಗಿನ ಆಯಿಲ್ ಲೀಕ್ ಆಗಿರಹುದು ಅಥವಾ ಫ್ಯಾಕ್ಟರಿಯ ನೀರು ಬಂದಿರಬಹುದು. ಸ್ಥಳೀಯ ಮೀನುಗಾರರಿಂದ ಈ ಕುರಿತು ಮಾಹಿತಿ ಪಡೆಯುತ್ತೇನೆ.
ನಿತಿನ್ ಕುಮಾರ್
ಅಧ್ಯಕ್ಷ, ಮಂಗಳೂರು ಟ್ರಾಲ್‌ಬೋಟ್ ಮೀನುಗಾರರ ಸಂಘ

Leave a Reply

Your email address will not be published. Required fields are marked *