ಕರಾವಳಿಯಲ್ಲಿ ಎಸ್‌ಡಿಆರ್‌ಎಫ್ ಸಿದ್ಧತೆ

< ಬಡಗ ಎಕ್ಕಾರಿನಲ್ಲಿ 10 ಎಕರೆ ಜಾಗ ಮಂಜೂರು * ದ.ಕ. ಉಡುಪಿ, ಉ.ಕ. ಕಾರ್ಯಾಚರಣೆ ಜವಾಬ್ದಾರಿ>

ಭರತ್ ಶೆಟ್ಟಿಗಾರ್ ಮಂಗಳೂರು

ಪ್ರಾಕೃತಿಕ ವಿಕೋಪಗಳು, ದೊಡ್ಡ ಅನಾಹುತಗಳು ಸಂಭವಿಸಿದಾಗ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ನೆನಪಾಗುವ ಹೆಸರು ಎನ್‌ಡಿಆರ್‌ಎಫ್(ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳ). ಆದರೆ ಎಲ್ಲ ಸಂದರ್ಭ, ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ಸಹಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಅದೇ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣೆ ಪಡೆ) ಕೇಂದ್ರವನ್ನು ರಾಜ್ಯ ಸರ್ಕಾರ ಕರಾವಳಿಗೆ ಮಂಜೂರು ಮಾಡಿದೆ.

ಕಟೀಲು ಬಳಿಯ ಬಡಗ ಎಕ್ಕಾರಿನ ಅರಸುಲಪದವಿನಲ್ಲಿ 10 ಎಕರೆ ಜಾಗವನ್ನು ಕೇಂದ್ರದ ಉಸ್ತುವಾರಿ ವಹಿಸಿಕೊಂಡಿರುವ ಅಗ್ನಿಶಾಮಕ ದಳಕ್ಕೆ ಹಸ್ತಾಂತರಿಸಲಾಗಿದೆ. ಜಾಗದಲ್ಲಿ ಕೇಂದ್ರದ ಸುಸಜ್ಜಿತ ಕಟ್ಟಡ ಸಹಿತ ತರಬೇತಿ ವಿಭಾಗ ನಿರ್ಮಾಣವಾಗಲಿದ್ದು, ಶೀಘ್ರ ಈ ಕುರಿತ ಕೆಲಸಗಳು ಆರಂಭವಾಗಲಿವೆ. ದ.ಕ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ತಂಡ ಕೆಲಸ ಮಾಡಲಿದೆ. ಕರಾವಳಿಯ ಭೌಗೋಳಿಕ, ಪ್ರಾಕೃತಿಕ ಹಿನ್ನೆಲೆಯಲ್ಲಿ ಇಂತಹ ಕೇಂದ್ರವೊಂದು ಅಗತ್ಯವಾಗಿ ಬೇಕಾಗಿದೆ.

ಏನಿದು ಎಸ್‌ಡಿಆರ್‌ಎಫ್?: ದುರ್ಘಟನೆಗಳ ಸಂದರ್ಭ ಎನ್‌ಡಿಆರ್‌ಎಫ್ ಮಾದರಿಯಲ್ಲಿ ಕಾರ್ಯಾಚರಣೆ ನಡೆಸುವ ರಾಜ್ಯಮಟ್ಟದ ಸಂಸ್ಥೆ ಎಸ್‌ಡಿಆರ್‌ಎಫ್. ರಾಜ್ಯದಲ್ಲಿ ಬೆಂಗಳೂರನ್ನು ಕೇಂದ್ರವಾಗಿಸಿ ಎಸ್‌ಡಿಆರ್‌ಎಫ್ ಕಾರ್ಯಾಚರಿಸುತ್ತಿದೆ. 100-200 ತರಬೇತಿ ಪಡೆದ ಸಿಬ್ಬಂದಿ ಇದರಲ್ಲಿ ಕಾರ್ಯನಿರ್ವಹಿಸುತ್ತಾರೆ. ಕಲಬುರಗಿ, ಬೆಳಗಾವಿ ಮತ್ತು ಮಂಗಳೂರಿಗೆ ಎಸ್‌ಡಿಆರ್‌ಎಫ್ ಕೇಂದ್ರವನ್ನು ರಾಜ್ಯ ಸರ್ಕಾರ ಎರಡು ವರ್ಷಗಳ ಹಿಂದೆ ಮಂಜೂರು ಮಾಡಿತ್ತು. ಇದರಲ್ಲಿ ಕಲಬುರಗಿ, ಬೆಳಗಾವಿ ಜಿಲ್ಲೆಗಳ ಕೇಂದ್ರ ಕಾರ್ಯಾಚರಣೆಗೆ ಸಿದ್ಧವಾಗಿದೆ. ಆದರೆ ದ.ಕ.ಜಿಲ್ಲೆಯಲ್ಲಿ ಸುಸಜ್ಜಿತ ಕೇಂದ್ರ ನಿರ್ಮಾಣಕ್ಕೆ ಜಮೀನಿನ ಕೊರತೆಯಿಂದಾಗಿ ಪ್ರಕ್ರಿಯೆ ವಿಳಂಬವಾಗಿತ್ತು.

ಸಿಬ್ಬಂದಿ ನೇಮಕ, ತರಬೇತಿ:ಮಂಗಳೂರು ಕೇಂದ್ರಕ್ಕೆ ಪ್ರಸ್ತುತ ಮೀಸಲು ಪೊಲೀಸ್ ಪಡೆಯ ಇಬ್ಬರು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಇವರು ಪಾಂಡೇಶ್ವರದಲ್ಲಿರುವ ಅಗ್ನಿಶಾಮಕ ದಳ ಪ್ರಧಾನ ಕಚೇರಿಯಲ್ಲಿ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರಕ್ಕೆ ಕನಿಷ್ಠ 120 ಸಿಬ್ಬಂದಿ ಅವಶ್ಯಕತೆಯಿದ್ದು, ಇದಕ್ಕಾಗಿ ಹೊಸ ನೇಮಕಾತಿ ನಡೆಯುವುದಿಲ್ಲ. ಬದಲಾಗಿ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಆಂತರಿಕ ಭದ್ರತಾ ಪಡೆ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಯನ್ನೇ ನಿಯೋಜನೆ ಮಾಡಲಾಗುತ್ತದೆ. ಹೀಗೆ ನೇಮಕಗೊಂಡ ಸಿಬ್ಬಂದಿಗೆ ಬೆಂಗಳೂರಿನ ಅಕಾಡೆಮಿ, ನಾಗಪುರದ ನ್ಯಾಷನಲ್ ಸಿವಿಲ್ ಡಿಫೆನ್ಸ್ ಕಾಲೇಜು, ಹೈದರಾಬಾದ್ ಮೊದಲಾದೆಡೆಗಳಲ್ಲಿ ತರಬೇತಿ ನೀಡಲಾಗುತ್ತದೆ.

ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಎನ್‌ಡಿಆರ್‌ಎಫ್‌ಗೆ ಕರೆ ಹೋಗುತ್ತದೆ. ವಿಜಯವಾಡದಿಂದ ತಂಡ ಇಲ್ಲಿಗೆ ಬರಲು ಹಲವು ಗಂಟೆಗಳು ಬೇಕು. ಜತೆಗೆ ಪ್ರತೀ ಸಲವೂ ಎನ್‌ಡಿಆರ್‌ಎಫನ್ನೇ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಎಸ್‌ಡಿಆರ್‌ಎಫ್ ರಾಜ್ಯಮಟ್ಟದ ತಂಡವಾಗಿದ್ದು, ನಮ್ಮಲ್ಲೇ ಆರಂಭವಾದರೆ ಹೆಚ್ಚು ಅನುಕೂಲ.
– ವಿಜಯ್ ಕುಮಾರ್, ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ

ಎಸ್‌ಡಿಆರ್‌ಎಫ್‌ಗೆ ಜಿಲ್ಲೆಯಲ್ಲಿ 10 ಎಕರೆ ಭೂಮಿ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಪೂರ್ಣ ಪ್ರಮಾಣದಲ್ಲಿ ಇಲ್ಲೇ ಇದ್ದು ತಂಡ ಕಾರ್ಯನಿರ್ವಹಿಸಲಿದೆ. ಅಗ್ನಿಶಾಮಕ ದಳ ಇಲಾಖೆಯೂ ತುರ್ತು ಸಂದರ್ಭಗಳಲ್ಲಿ ಸ್ಪಂದಿಸುತ್ತಿದ್ದು, ಎಲ್ಲ ರೀತಿಯ ಉಪಕರಣಗಳು, ನುರಿತ ಸಿಬ್ಬಂದಿ ಇಲಾಖೆಯಲ್ಲಿದ್ದಾರೆ.
ಟಿ.ಎನ್.ಶಿವಶಂಕರ್, ಚೀಫ್ ಫೈರ್ ಆಫೀಸರ್

Leave a Reply

Your email address will not be published. Required fields are marked *