ಎಸ್‌ಡಿಎಂ ವಿವಿ ಮಂಜೂರು

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಗಳಲ್ಲಿ ಹೆಗ್ಗಡೆ ಅವರದು ಅಪಾರ ಸಾಧನೆ. ಮುಖ್ಯಮಂತ್ರಿ ಸೂಚನೆಯಂತೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗೆ ವಿಶ್ವವಿದ್ಯಾಲಯ ಮಂಜೂರು ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಸದಸ್ಯರ ಮಕ್ಕಳಿಗೆ ರಾಜ್ಯಮಟ್ಟದಲ್ಲಿ ನೀಡಲಾಗುವ ವಿದ್ಯಾರ್ಥಿವೇತನ (ಸುಜ್ಞಾನ ನಿಧಿ) ವಿತರಿಸಿ ಮಾತನಾಡಿದರು.

ಸರ್ಕಾರ ಹಾಗೂ ಸಂಘಟನೆಗಳು ಮಾಡಬೇಕಾದ ಕಾರ್ಯವನ್ನು ಡಾ.ಹೆಗ್ಗಡೆ ಮಾಡುತ್ತಿದ್ದಾರೆ. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ಗುಣಮಟ್ಟ ಹಾಗೂ ಮೌಲ್ಯಾಧರಿತ ಶಿಕ್ಷಣ ನೀಡುತ್ತಿದ್ದು, ವಿದ್ಯಾರ್ಥಿಗಳು ಸಮಾಜಮುಖಿ ಚಿಂತನೆ ಹೊಂದಿದ್ದಾರೆ. ಇದಕ್ಕೆ ಹೆಗ್ಗಡೆ ಅವರ ಸಮಾಜಮುಖಿ ಚಿಂತನೆ ಕಾರಣ. ಇಂತಹ ಸಂಸ್ಥೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಧರ್ಮಸ್ಥಳದ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ಹೆಗ್ಗಡೆ, ಅಜ್ಞಾನ ಹಾಗೂ ಬಡತನ ತೊಲಗಿಸುವ ಕಾರ್ಯಕ್ರಮ ಸುಜ್ಞಾನ ನಿಧಿ. ಸ್ವಸಹಾಯ ಸಂಘದ ಸದಸ್ಯರ ಮಕ್ಕಳು ಸುಜ್ಞಾನ ನಿಧಿಯನ್ನು ಸಮಪರ್ಕವಾಗಿ ಬಳಸಿ ಉನ್ನತ ಹುದ್ದೆ ಪಡೆದಿದ್ದಾರೆ. ಫಲ ಪಡೆದವರು ಮುಂದಿನ ಬಡ ಕುಟುಂಬಗಳ ಮಕ್ಕಳಿಗೂ ಉಪಕಾರವಾಗುವ ದೃಷ್ಟಿಯಿಂದ ತಮ್ಮ ಸಂಪಾದನೆಯ ಅಲ್ಪಾಂಶ ನೀಡಲು ಮುಂದಾಗಿದ್ದು, ಸುಜ್ಞಾನ ವೃದ್ಧಿ ಕಾರ್ಯಕ್ರಮವಾಗಿ ಮಾಡಲಾಗುವುದು ಎಂದರು.

ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ವಿಜಯಕುಮಾರ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿದರು. ಜಿಪಂ ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ.ಸದಸ್ಯೆ ಧನಲಕ್ಷ್ಮೀ ಜನಾರ್ದನ್, ಧರ್ಮಸ್ಥಳ ಗ್ರಾ.ಪಂ.ಸದಸ್ಯ ಚಂದನ್ ಪ್ರಸಾದ್ ಕಾಮತ್ ಉಪಸ್ಥಿತರಿದ್ದರು. ಧ.ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಸ್ವಾಗತಿಸಿದರು. ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಬಿ.ಜಯರಾಮ್ ನೆಲ್ಲಿತ್ತಾಯ ವಂದಿಸಿದರು. ಧ.ಗ್ರಾ. ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ದೇಶದಲ್ಲೇ ಪ್ರಥಮ ಪ್ರಯತ್ನ: ಬಡ ಕುಟುಂಬದ ಮಕ್ಕಳು ಶಿಕ್ಷಣ ಪಡೆದರೆ ಮಾತ್ರ ಕುಟುಂಬ ಅಭಿವೃದ್ಧಿ ಸಾಧ್ಯ. ಈ ಚಿಂತನೆಯಿಂದ ಬಡ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಎಂಬ ಯೋಜನೆ ಮೂಲಕ 40 ಕೋಟಿ ರೂ. ಶಿಕ್ಷಣಕ್ಕೆ ನೀಡುತ್ತಿರುವುದು ಧಾರ್ಮಿಕ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಥಮ. ಕೃಷಿಕರ ಅಭಿವೃದ್ಧಿ ಚಿಂತನೆ ಹಾಗು ಕಲುಷಿತ ನೀರನ್ನು ಬಳಸುತ್ತಿರುವ ಕುಟುಂಬಗಳ ಬಗ್ಗೆ ಚಿಂತಿಸಿದ ಹೆಗ್ಗಡೆ, ಕೆರೆಗಳ ಅಭಿವೃದ್ಧಿ ಹಾಗೂ ಶುದ್ಧ ಕುಡಿಯುವ ನೀರಿನ ಯೋಜನೆ ಹಮ್ಮಿಕೊಳ್ಳುವ ಮೂಲಕ ಕೃಷಿಕರ ಹಾಗೂ ಸಮಾಜದ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವುದು ಅಭಿನಂದನೀಯ ಎಂದು ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.

ಶ್ರಮದ ಸಾಧನೆಗೆ ದೇವರ ಅನುಗ್ರಹ: ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಶ್ರಮದಿಂದ ಸಾಧನೆ ಮಾಡಿದವರಿಗೆ ಮಾತ್ರ ದೇವರ ಅನುಗ್ರಹ ಇರುತ್ತದೆ. ಶ್ರಮವಿಲ್ಲದೆ ದೇವರನ್ನು ಪ್ರಾರ್ಥಿಸಿದರೆ ದೇವರು ಅನುಗ್ರಹಿಸಲಾರ. ಗುರಿ ಇಟ್ಟುಕೊಳ್ಳುವುದು ನಮ್ಮ ಕೆಲಸ. ಸಾಧನೆಯಿಂದ ಮುಂದುವರಿದಾಗ ಗುರಿ ತಲುಪಿಸುವುದು ಭಗವಂತನ ಕೆಲಸ. ಹಿಂದೆ ಉನ್ನತ ಶಿಕ್ಷಣ ಪಡೆಯಲು ವಿವಿಧ ರಾಜ್ಯ, ವಿದೇಶಗಳಿಗೆ ಸುತ್ತಾಡುವ ಅನಿವಾರ್ಯತೆಯಿತ್ತು. ಇದೀಗ ಸರ್ಕಾರ ಕೂಡ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸ್ಥಳೀಯವಾಗಿಯೇ ಉನ್ನತ ಶಿಕ್ಷಣ ನೀಡಲು ಮುಂದಾಗಿರುವುದು ಇಂದಿನ ಮಕ್ಕಳ ಹಾಗೂ ಪಾಲಕರ ಭಾಗ್ಯ ಎಂದರು. ವಿದ್ಯಾರ್ಥಿಗಳು ಉತ್ತಮ ಆಸಕ್ತಿ ಹೊಂದಬೇಕು, ದುಶ್ಚಟಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.

39 ಕೋಟಿ ರೂ. ಶಿಷ್ಯ ವೇತನ: ಧ. ಗ್ರಾ.ಯೋಜನೆ ಫಲಾನುಭವಿಗಳ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ 34 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ 39 ಕೋಟಿ ರೂ. ಶಿಷ್ಯ ವೇತನ ನಿಡಲಾಗಿದೆ. ಇದನ್ನು ವಿದ್ಯಾರ್ಥಿಗಳ ಅಂಕ, ಕುಟುಂಬದ ವಾರ್ಷಿಕ ಆದಾಯ, ಶಿಕ್ಷಣದ ಮಿತಿಯನ್ನು ಕೇಂದ್ರ ಕಚೇರಿಯಲ್ಲಿ ತೀರ್ಮಾನಿಸಿ ನೀಡಲಾಗುತ್ತಿದೆ. 2018-19ನೇ ಸಾಲಿನಲ್ಲಿ 8000 ಬೇಡಿಕೆ ಬಂದಿದ್ದು ಅದರಲ್ಲಿ 4000 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ವರ್ಷ 2700 ಕಾಲೇಜಿನ ವಿದ್ಯಾರ್ಥಿಗಳಿಗೆ 6.50 ಕೋಟಿ ರೂ. ಶಿಷ್ಯ ವೇತನ ನೀಡಲಾಗುತ್ತಿದ್ದು ಇದುವರೆಗೆ 10000 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್ ಮಂಜುನಾಥ್ ತಿಳಿಸಿದರು.

ಡಾ.ಹೆಗ್ಗಡೆ ನೇತೃತ್ವದಲ್ಲಿ ಸ್ವಸಹಾಯ ಸಂಘ ಅದ್ಭುತ ಸಾಧನೆ ಮಾಡಿದೆ. 6 ಲಕ್ಷ ಸ್ವಸಹಾಯ ಸಂಘಗಳನ್ನು ನಡೆಸಿ 8700 ಕೋಟಿ ರೂ. ಸಾಲ ನೀಡುವ ಮೂಲಕ ಸದಸ್ಯರ ಕುಟುಂಬದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಇದರಿಂದ ಅಭಿವೃದ್ಧಿಯಾದ ಸದಸ್ಯರೇ 1400 ಕೋಟಿ ರೂ. ಠೇವಣಿ ಇಟ್ಟಿರುವುದು ಧರ್ಮಸ್ಥಳ ಯೋಜನೆಯ ಪ್ರಾಮಾಣಿಕ ವ್ಯವಹಾರಕ್ಕೆ ಸಾಕ್ಷಿ.
– ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ