More

    ಶೇಂಗಾ ಬೀಜ ಪಡೆಯಲು ನೂಕುನುಗ್ಗಲು

    ರಟ್ಟಿಹಳ್ಳಿ: ಪಟ್ಟಣದ ರೈತ ಸಂಪರ್ಕ ಕಚೇರಿಯಲ್ಲಿ ಶೇಂಗಾ ಬಿತ್ತನೆ ಬೀಜ ಪಡೆಯಲು ಗುರುವಾರ ನೂಕುನುಗ್ಗಲು ಉಂಟಾಯಿತು.

    ಬಿತ್ತನೆ ಬೀಜ ಪಡೆಯಲು ಬೆಳ್ಳಂಬೆಳಗ್ಗೆಯೇ ನೂರಾರು ರೈತರು ಸರತಿಯಲ್ಲಿ ನಿಂತಿದ್ದರು. ಆದರೆ, ಎಲ್ಲರಿಗೂ ಸಾಕಾಗುವಷ್ಟು ಬೀಜ ಸಂಗ್ರಹ ಇರಲಿಲ್ಲ. ಸರತಿಯಲ್ಲಿ ನಿಂತ ಎಲ್ಲರಿಗೂ ಶೇಂಗಾ ಬೀಜಗಳನ್ನು ವಿತರಿಸಬೇಕು ಎಂದು ರೈತರು ಆಗ್ರಹಿಸಿದರು. ಇದರಿಂದಾಗಿ ಕೆಲಕಾಲ ಗೊಂದಲ ಉಂಟಾಗಿತ್ತು.

    ಬೆಳಗ್ಗೆ 11 ಗಂಟೆಗೆ ಕಚೇರಿಗೆ ಆಗಮಿಸಿದ ಶಾಸಕ ಯು.ಬಿ. ಬಣಕಾರ, ಅಧಿಕಾರಿಗಳಿಂದ ಮಾಹಿತಿ ಪಡೆದು ರೈತರಿಗೆ ಸಮರ್ಪಕವಾಗಿ ಬೀಜ ವಿತರಣೆ ಕ್ರಮ ಕೈಗೊಳ್ಳಲಾಗುವುದು ಎಂದು ಪರಿಸ್ಥಿತಿ ತಿಳಿಗೊಳಿಸಿದರು. ತಾಲೂಕಿನಲ್ಲಿ ಶೇಂಗಾ ಬೆಳೆ ಹೆಚ್ಚು ಬೆಳೆಯಲಾಗುತ್ತಿದ್ದು, ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜಗಳನ್ನು ಹಂತಹಂತವಾಗಿ ರೈತ ಸಂಪರ್ಕ ಕಚೇರಿಗೆ ಪೂರೈಕೆ ಮಾಡಲಾಗುತ್ತದೆ. ಸದ್ಯ ಶೇಂಗಾ ಬೀಜ 63 ಕ್ವಿಂಟಾಲ್ ಪೂರೈಕೆಯಾಗಿದೆ. ಹೆಚ್ಚು ರೈತರು ಆಗಮಿಸಿರುವುದರಿಂದ ಸಮಸ್ಯೆಯಾಗಿದೆ. ಮೊದಲು ಬಂದ ಎಲ್ಲ ರೈತರಿಗೆ ಬೀಜಗಳನ್ನು ವಿತರಿಸಿ, ಬಾಕಿ ಉಳಿದ ರೈತರಿಗೆ ಚೀಟಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.

    ತಾಲೂಕಿಗೆ ಅವಶ್ಯವಿರುವ ಉಳಿದ 87 ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜ ಪೂರೈಕೆಯಾಗಲಿದೆ. ಎಲ್ಲ ರೈತರಿಗೆ ಸಮರ್ಪಕವಾಗಿ ವಿತರಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತರು ಸರತಿಯಲ್ಲಿ ನಿಂತು ಬಿತ್ತನೆ ಬೀಜ ಪಡೆದರು.

    ರಟ್ಟಿಹಳ್ಳಿ ತಾಲೂಕಿಗೆ ಜಿಪಿಬಿಡಿ-4 ಶೇಂಗಾ ತಳಿ 150 ಕ್ವಿಂಟಾಲ್ ಮತ್ತು ಪಿಎಂವಿ-2 ತಳಿ 50 ಕ್ವಿಂಟಾಲ್ ಪೂರೈಕೆಯಾಗಬೇಕು. ಸದ್ಯ ಜಿಪಿಬಿಡಿ-4 ತಳಿ 63 ಕ್ವಿಂಟಾಲ್ ಪೂರೈಕೆಯಾಗಿದ್ದು, ಉಳಿದ 87 ಕ್ವಿಂಟಾಲ್ ಶುಕ್ರವಾರ ಬರಲಿದೆ. ಪಿಎಂವಿ-2 ತಳಿ 50 ಕ್ವಿಂಟಾಲ್ ಎರಡು ದಿವಸದಲ್ಲಿ ಪೂರೈಕೆಯಾಗುತ್ತಿದ್ದು, ಎಲ್ಲಾ ರೈತರಿಗೆ ಬಿತ್ತನೆ ಬೀಜ ಸಮರ್ಪಕವಾಗಿ ದೊರೆಯುತ್ತದೆ. ರೈತ ಸಂಪರ್ಕ ಕೇಂದ್ರದಲ್ಲಿ ಸದ್ಯ ವಿವಿಧ ಕಂಪನಿಯ ಗೋವಿನಜೋಳ, ತೊಗರಿ ಮತ್ತು ಸೋಯಾಬೀನ್ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದ್ದು ರೈತರು ಪಡೆದುಕೊಳ್ಳಬಹುದಾಗಿದೆ.
    I ಎಂ.ವಿ. ಮಂಜುನಾಥ, ಸಹಾಯಕ ಕೃಷಿ ನಿರ್ದೇಶಕ ಹಿರೇಕೆರೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts