ಮುಂಡರಗಿ: ಉತ್ತಮ ಬದುಕು ಮತ್ತು ಆರೋಗ್ಯಕರ ಸಮಾಜ ಕಟ್ಟುವಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿಸ್ತು, ಸಂಯಮ, ಸಹಬಾಳ್ವೆ, ಕೌಶಲದ ಮಹತ್ವವನ್ನು ಕಲಿಸಿಕೊಡುತ್ತವೆ. ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉತ್ತಮ ವಿಚಾರ ಅರಿತುಕೊಂಡು ಸಮಾಜಕ್ಕೆ ಮಾದರಿಯಾಗುವಂತೆ ಬದುಕು ರೂಪಿಸಿಕೊಳ್ಳಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಇಟಗಿ ಹೇಳಿದರು.
ಪಟ್ಟಣದ ಎಸ್.ಎಂ. ಭೂಮರಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧಾರವಾಡ ಜಿಲ್ಲೆಯ ದಡ್ಡಿಕಮಲಾಪುರನಲ್ಲಿ ನಡೆಯಲಿರುವ ಕಿತ್ತೂರು ಕರ್ನಾಟಕ ಭಾಗದ ಜಾಂಬೂರೇಟ್ ಕಾರ್ಯಕ್ರಮಕ್ಕೆ ತಾಲೂಕಿನಿಂದ ಪಾಲ್ಗೊಳ್ಳಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಬೀಳ್ಕೊಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಂಗಾಧರ ಅಣ್ಣಿಗೇರಿ ಮಾತನಾಡಿ, ಜಾಂಬೂರೇಟ್ನಲ್ಲಿ ಭಾಗವಹಿಸಲು ಎಲ್ಲ ಮಕ್ಕಳಿಗೆ ಅವಕಾಶವಿದ್ದು, ನಮ್ಮ ತಾಲೂಕಿನಿಂದ 24 ಮಕ್ಕಳು ಭಾಗವಹಿಸುತ್ತಿದ್ದಾರೆ. ಅಲ್ಲಿ ನಡೆಯುವ ಸಾಂಸ್ಕೃತಿಕ, ಶ್ರಮದಾಯಕ, ಸಿಹಿ ತಿಂಡಿಗಳ ವಸ್ತು ಪ್ರದರ್ಶನ, ವೈಜ್ಞಾನಿಕ ಮನೋಭಾವನೆ ಬೆಳೆಸುವ ಕಾರ್ಯಾಗಾರ ಸೇರಿ ಇತರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹೆಚ್ಚು ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಘಟಕದ ಉಪಾಧ್ಯಕ್ಷ ವೀರಣ್ಣ ಮಡಿವಾಳರ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ವಿರೂಪಾಕ್ಷಪ್ಪ ಬಾರಕೇರ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಎ.ಡಿ. ಬಂಡಿ, ಆರ್.ಬಿ. ಕವಲೂರ, ಜಗದೀಶ ಗುಳಾರಿ, ಎಂ.ಬಿ. ಮೇಟಿ, ಎಸ್.ಬಿ. ಗದಗ, ಜಿ.ಎಂ. ಚನ್ನಳ್ಳಿ, ವೈ.ಎಚ್. ವಾಲಿಕಾರ, ಇತರರಿದ್ದರು. ಭಾರತ್ ಸ್ಕೌಟ್ಸ್ ಜಿಲ್ಲಾ ತರಬೇತಿ ಸಲಹೆಗಾರ ಎಂ.ಪಿ. ಶೀರನಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.