ಜ್ಞಾನ ಸಂಪಾದನೆಯೇ ಆದ್ಯತೆಯಾಗಲಿ

ಚಿಕ್ಕಮಗಳೂರು: ಯಾವುದೆ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿದರೂ ಮೊದಲು ಜ್ಞಾನ ಸಂಪಾದಿಸುವ ಕಡೆಗೆ ವಿದ್ಯಾರ್ಥಿಗಳ ಗುರಿ ಇರಬೇಕು ಎಂದು ಡ್ರೋಣ್ ಕ್ಯಾಮರಾ ತಂತ್ರಜ್ಞಾನ ಆವಿಷ್ಕರಿಸಿದ ಯುವ ವಿಜ್ಞಾನಿ ಎನ್.ಎಂ.ಪ್ರತಾಪ್ ಅಭಿಪ್ರಾಯಪಟ್ಟರು.

ನಗರ ಹೊರವಲಯದ ಸಿರಗಾಪುರ ಸಾಯಿ ಏಂಜೆಲ್ಸ್ ಪದವಿಪೂರ್ವ ಕಾಲೇಜಿಗೆ ಆಗಮಿಸಿದ್ದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಹೀಗಾಗಿ ಕರ್ನಾಟಕದಲ್ಲಿರುವ ಯಾವುದೆ ಶಿಕ್ಷಣ ಸಂಸ್ಥೆಗೆ ಹೋದರೂ ನಾನು ಕನ್ನಡದಲ್ಲೇ ಮಾತನಾಡಲು ಇಷ್ಟಪಡುವುದಾಗಿ ಹೇಳಿದರು.

ಅಂಕ ಗಳಿಕೆಗಿಂತ ಹೆಚ್ಚಾಗಿ ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗೆ ಆದ್ಯತೆ ನೀಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ತಲೆಯಲ್ಲಿ ಒಂದು ಪ್ರತಿಭೆ ಹುಟ್ಟಬೇಕು. ಕನಿಷ್ಠ ಪ್ರತಿಭಾವಂತ ವ್ಯಕ್ತಿಯಾದರೂ ದೇಶಕ್ಕೆ ಏನಾದರೂ ಕೊಡುಗೆ ಕೊಟ್ಟು ಹೋಗಬೇಕು. ರೈತರಾಗಿ, ಗಡಿ ಕಾಯುವ ಯೋಧನಾಗಿಯೇ ಕೊಡುಗೆ ನೀಡಬೇಕೆಂದೇನಿಲ್ಲ. ಒಂದು ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತ ಸಮರ್ಪಕವಾಗಿ ತೆರಿಗೆ ಪಾವತಿಸುವುದೂ ಒಂದು ರೀತಿ ದೇಶ ಸೇವೆಯೇ ಎಂದು ಪ್ರತಿಪಾದಿಸಿದರು.

ಮುಂದೆ ರೈತರಿಗೆ ಉಪಯುಕ್ತವಾಗುವ ಯೋಜನೆ ಕೈಗೆತ್ತಿಕೊಳ್ಳಬೇಕು ಎನ್ನುವುದು ನನ್ನ ಗುರಿ. ಹಾಗೆಂದು ವ್ಯವಸ್ಥೆಯಲ್ಲಿ ಬಹಳ ದೊಡ್ಡ ಬದಲಾವಣೆ ತರುತ್ತೇನೆ ಎಂದೇನೂ ಹೇಳುವುದಿಲ್ಲ. ನನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಕೊಡುಗೆ ನೀಡುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ನನ್ನ ದೇಶ ಬೇರೆ ದೇಶಗಳ ಎದುರು ತಲೆ ಎತ್ತಿ ನಿಲ್ಲುವಂತಾಗಬೇಕು. ಈಗಲೂ ನಮ್ಮ ದೇಶದ ವ್ಯವಸ್ಥೆ ಇತರೆ ದೇಶಗಳಿಗೆ ಹೋಲಿಸಿದರೆ ಚೆನ್ನಾಗಿದೆ. ಆದರೆ ಫ್ರಾನ್ಸ್, ಅಮೆರಿಕದಂಥ ದೇಶಗಳಿಗೆ ಹೋಲಿಸಿದರೆ ಇನ್ನಷ್ಟು ಸಾಧನೆ ಮಾಡಬೇಕಿದೆ. 130 ಕೋಟಿ ಜನಸಂಖ್ಯೆ ಇರುವ ಭಾರತ ಅತೀ ದೊಡ್ಡ ಮಾನವ ಸಂಪನ್ಮೂಲ ಹೊಂದಿದ ರಾಷ್ಟ್ರ. ದೇಶ ಇನ್ನಷ್ಟು ಕೌಶಲ್ಯ ಪೂರ್ಣವಾಗಿ ಅಭಿವೃದ್ಧಿ ಹೊಂದಬೇಕಿದೆ ಎಂದರು.

ಯಾವುದೆ ಭಾಷೆಯಲ್ಲಿ ಕಲಿತರೂ ಕೌಶಲ್ಯಾಭಿವೃದ್ಧಿ ಸಾಧ್ಯವಿದೆ. ಸರ್ಕಾರಗಳು ಇಂಗ್ಲಿಷ್ ಭಾಷೆಯನ್ನು ಒಂದು ಪಾಂಡಿತ್ಯದ ರೀತಿ ಪರಿಗಣಿಸುತ್ತಿವೆ. ಕನ್ನಡದಲ್ಲೂ ವಿಜ್ಞಾನವನ್ನು ಹೇಳಬಹುದು. ಅದೊಂದು ತುಂಬ ಕ್ಲಿಷ್ಟಕರ ಸವಾಲೇನಲ್ಲ ಎಂದು ಹೇಳಿದರು.

ಪ್ರತಿ ವರ್ಷ ಬದಲಾಗಬೇಕು ಪಠ್ಯ: ಕೇವಲ ಕಾಲೇಜುಗಳನ್ನು ಆರಂಭಿಸಿದರೆ ಸಾಲದು. ಅಲ್ಲಿ ಉತ್ತಮ ಸಂಶೋಧನಾ ಪ್ರಯೋಗಾಲಯ ಇರಬೇಕು ಎಂದು ಎನ್.ಎಂ.ಪ್ರತಾಪ್ ಹೇಳಿದರು. ಪ್ರತಿವರ್ಷ ಪಠ್ಯಪುಸ್ತಕಗಳಲ್ಲಿ ಬೋಧನಾ ವಿಷಯ ಬದಲಾಗಬೇಕು. ಅದು ಇನ್ನಷ್ಟು ಮುಂದುವರಿದ ವಿಷಯಗಳಾಗಿರಬೇಕು. ವಿದ್ಯಾರ್ಥಿಗಳಿಗೆ ಈ ಪ್ರಶ್ನೆ ಪತ್ರಿಕೆಯಲ್ಲಿರುವ ಸವಾಲು ನನಗೆ ಸಾಕಾಗುವುದಿಲ್ಲ. ಇನ್ನೂ ಹೆಚ್ಚಿನ ಸವಾಲಿನದ್ದಾಗಿರಬೇಕು ಎಂಬ ಭಾವನೆ ಮಕ್ಕಳಲ್ಲಿ ಮೂಡಬೇಕು ಎಂದರು. ಹಾಗೆಯೇ ಸರ್ಕಾರಗಳು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಚಟುವಟಿಕೆ ಉತ್ತೇಜಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರಗಳಿಂದ ಪ್ರೋತ್ಸಾಹವಿಲ್ಲ:  ನನ್ನ ಸಾಧನೆಗೆ ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದಾಗಲಿ ಯಾವುದೆ ಪ್ರೋತ್ಸಾಹ ಸಿಗಲಿಲ್ಲ ಎಂದು ಎನ್.ಎಂ.ಪ್ರತಾಪ್ ಹೇಳಿದರು. ತಂದೆ, ತಾಯಿ ಹಾಗೂ ಸುತ್ತೂರು ಸ್ವಾಮೀಜಿ ಬೆಂಬಲ ಮತ್ತು ನನ್ನ ಸ್ವಂತ ಪರಿಶ್ರಮದಿಂದ ಸಾಧನೆ ಮಾಡಿದ್ದೇನೆ. ಕಾಲೇಜಿನಲ್ಲಿ ಕೆಲಸ ಮಾಡುವ ಮಧ್ಯಮ ವರ್ಗದ ಜನ, ಪ್ರೊಫೆಸರ್​ಗಳು ಪ್ರೋತ್ಸಾಹಿಸಿದ್ದಾರೆ. ಅದನ್ನು ಹೊರತುಪಡಿಸಿದರೆ ಶ್ರೀಮಂತರ್ಯಾರೂ ನನಗೆ ಸಹಾಯ ಮಾಡಿಲ್ಲ ಎಂದರು.

ವಿಜಯವಾಣಿ, ದಿಗ್ವಿಜಯಕ್ಕೆ ಚಿರರುಣಿ: ನನ್ನ ಸಾಧನೆ ಬಳಿಕ ಸಾರ್ವಜನಿಕವಾಗಿ ನನಗೆ ಅಷ್ಟಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮೊಟ್ಟ ಮೊದಲು ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ವಾಹಿನಿ ಮಾಲೀಕರಾದ ವಿಜಯ ಸಂಕೇಶ್ವರ್ ಹಾಗೂ ಆನಂದ್ ಸಂಕೇಶ್ವರ್ ಅವರು ತಮ್ಮ ಮಾಧ್ಯಮಗಳಲ್ಲಿ ವೇದಿಕೆ ಕಲ್ಪಿಸಿದರು. ಆ ಮೂಲಕ ನನ್ನ ಸಾಧನೆ ಮೇಲೆ ಬೆಳಕು ಚೆಲ್ಲಿದರು ಎಂದು ಯುವ ವಿಜ್ಞಾನಿ ಎನ್.ಎಂ.ಪ್ರತಾಪ್ ಹೇಳಿದರು.

===========