ಕೊನೆಗೂ ಬಗೆಹರೀತಾ ಬರ್ಮುಡಾ ಟ್ರಯಾಂಗಲ್​ ಮಿಸ್ಟರಿ?

>

| ಚಂದ್ರ ಮೋಹನ್​, ದಿಗ್ವಿಜಯ ನ್ಯೂಸ್​

ವಿಜ್ಞಾನಿಗಳಿಗೆ ಅಕ್ಷರಶಃ ತಲೆ ನೋವಾಗಿ ಪರಿಣಮಿಸಿದ್ದ ಹಾಗೂ ಇದುವರೆಗೂ 75ಕ್ಕೂ ಹೆಚ್ಚು ವಿಮಾನಗಳು, ಸಾವಿರಾರು ಜನ ನಾಪತ್ತೆಯಾಗಿರುವ ಬರ್ಮುಡಾ ಟ್ರಯಾಂಗಲ್​ ಮಿಸ್ಟರಿಗೆ ಕಾರಣ ದೊರೆತಿದೆ.

ಹೌದು, ಬರ್ಮುಡಾ ಟ್ರಯಾಂಗಲ್​ ಮಿಸ್ಟರಿಯನ್ನು ಹುಡುಕುತ್ತಾ ಹೊರಟ ಎಷ್ಟೋ ಮಂದಿ ಇಲ್ಲಿಯವರೆಗೆ ನಾಪತ್ತೆಯಾಗಿದ್ದರೂ, ಕೆಲ ವಿಜ್ಞಾನಿಗಳು ಅಲ್ಲಿ ವಿಮಾನಗಳು, ಹಡಗುಗಳು ನಾಪತ್ತೆಯಾಗಿರುವುದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಬರ್ಮುಡಾ ಟ್ರಯಾಂಗಲ್​ನಲ್ಲಿ ನಾಪತ್ತೆಯಾದ ವಿಮಾನಗಳು ಮತ್ತು ಮುಳುಗುವ ಹಡಗುಗಳ ಅವಶೇಷಗಳು ಇದುವರೆಗೆ ಪತ್ತೆಯಾಗಿರುವುದು ಅಪರೂಪವಾಗಿದ್ದು, ಇದಕ್ಕೆಲ್ಲಾ 100 ಅಡಿಯ ರಕ್ಕಸ ಅಲೆಗಳೇ ಕಾರಣ ಎಂದು ಸೌತಾಂಪ್ಟನ್​ ಮೂಲದ ಸಂಶೋಧಕರು ಹೇಳಿದ್ದಾರೆ.

100 ಅಡಿ ಬಂದರೆ ಹಡಗು ಮುಳುಗುತ್ತೆ!
ಈ ಸಂಶೋಧಕರು 1918ರ ವಿಶ್ವ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಅಮೆರಿಕ ಸೇನೆಗೆ ತೈಲ ಪೂರೈಸುತ್ತಿದ್ದ ಯುಎಸ್​ಎಸ್​​ ಸೈಕ್ಲೋಪ್ಸ್​ ಹಡಗಿನ ಮಾದರಿಯನ್ನ ನಿರ್ಮಾಣ ಮಾಡಿದ್ದರು. ಈ ಹಡಗನ್ನ ಒಳಾಂಗಣ ಸಿಮ್ಯುಲೇಟರ್​ ಹೊಂದಿರೋ ಬೃಹತ್​ ನೀರಿನಲ್ಲಿ ಚಲಿಸುವಂತೆ ಮಾಡಿದ್ರು. ಸಿಮ್ಯುಲೇಟರ್​ಗಳನ್ನ ಬಳಸಿ 100 ಅಡಿ ಎತ್ತರದ ಅಲೆಗಳನ್ನ ಸೃಷ್ಟಿಸಿದ್ರು. ಆಗ ಹಡಗು ಮುಳುಗಿ ಹೋಗಿದೆ ಅಂತಾ ಸಂಶೋಧಕರು ಹೇಳಿದ್ದಾರೆ.

ಇದಕ್ಕೂ ಮುಂಚೆ, ಕೆಲವರು ಬರ್ಬುಡಾ ಟ್ರಯಾಂಗಲ್​ನಲ್ಲಿ ಇದ್ದಕ್ಕಿದ್ದಂತೆ ವಿಮಾನಗಳು, ಹಡಗುಗಳು ನಾಪತ್ತೆಯಾಗುವುದಕ್ಕೆ ಏಲಿಯನ್​ಗಳು ಕಾರಣ ಎಂದರೆ, ಕೆಲವರು ಸಮುದ್ರದಲ್ಲಿರುವ ನಿಗೂಢ ಜೀವಿಗಳು ಕಾರಣ ಎಂದು ಹೇಳುತ್ತಿದ್ದರು. ಆದರೆ, ಇದಕ್ಕೆ ಪೂರಕವಾಗಿ ಯಾರೂ ಯಾವ ದಾಖಲೆಗಳನ್ನು ಒದಗಿಸಿರಲಿಲ್ಲ.

ರಕ್ಕಸ ಅಲೆ ಏಳಲು ಕಾರಣವೇನು?
ಬರ್ಮುಡಾ ಟ್ರಯಾಂಗಲ್​ ಫ್ಲೋರಿಡಾ, ಪೋರ್ಟೋರಿಕೋ ಮತ್ತು ಬರ್ಮುಡಾ ಪ್ರದೇಶಗಳ ನಡುವೆ ಇದೆ. ಈ ಸಮುದ್ರದಲ್ಲಿ ನಾನಾ ದಿಕ್ಕುಗಳಿಂದ ಮಾರುತಗಳು ಬೀಸುತ್ತವೆ. ಈ ರೀತಿ ವಿವಿಧ ದಿಕ್ಕುಗಳಿಂದ ಮಾರುತಗಳು ಬೀಸುವುದರಿಂದ ನಾನಾ ದಿಕ್ಕಿಗೆ ಚಲಿಸುತ್ತಿದ್ದ ಅಲೆಗಳ ಮೇಲೆ ಪ್ರಭಾವ ಬೀರಿ, ಈ ರೀತಿಯ ರಕ್ಕಸ ಅಲೆಗಳು ಏಳುವುದಕ್ಕೆ ಕಾರಣವಾಗುತ್ತದೆ.ಈ ರಕ್ಕಸ ಅಲೆಗಳಿಗೆ ಸಿಲುಕುವ ಹಡಗುಗಳು, ಅಲೆಗಳ ಹೊಡೆತ ತಾಳಲಾರದೆ ಮುಳುಗಿ ಹೋಗುವ ಜತೆಗೆ, ಅಪಘಾತವಾದ ಸಮುದ್ರದಿಂದ ಬಹುದೂರಕ್ಕೆ ಸಾಗುತ್ತವೆ. ಹೀಗಾಗಿಯೇ ಹಡಗುಗಳು, ವಿಮಾನಗಳ ಅವಶೇಷಗಳು ಸಿಗುತ್ತಿಲ್ಲ ಎಂದು ಅಂತಾ ಸಂಶೋಧಕರು ಹೇಳಿದ್ದಾರೆ.

ಗುರುತ್ವಾಕರ್ಷಣ ಶಕ್ತಿ ವ್ಯತ್ಯಯ?
ವರ್ಷದ ಹಿಂದೆ ಕೊಲಾರಾಡೋ ವಿವಿಯ ವಿಜ್ಞಾನಿಗಳು, ಬರ್ಮುಡಾ ಟ್ರಯಾಂಗಲ್​ನಲ್ಲಿ ಅಷ್ಟಕೋನಾಕೃತಿಯ ಕೆಲವು ಪ್ರದೇಶಗಳಿದ್ದು, ಇಲ್ಲಿ ಇದ್ದಕ್ಕಿದ್ದಂತೆ ಹವಾಮಾನದಲ್ಲಿ ಭಾರಿ ಏರುಪೇರಾಗುತ್ತದೆ. ಇದ್ದಕ್ಕಿದ್ದಂತೆ ಹವಾಮಾನದಲ್ಲಿ ಆಗುವ ಏರುಪೇರಿನಿಂದ ಈ ಪ್ರದೇಶದಲ್ಲಿ ಗುರುತ್ವಾಕರ್ಷಣ ಶಕ್ತಿಯಲ್ಲಿ ವ್ಯತ್ಯಯವಾಗುತ್ತದೆ. ಹೀಗಾಗಿ ವಿಮಾನಗಳು ಮತ್ತು ಹಡಗುಗಳು ಈ ಪ್ರದೇಶದಲ್ಲಿ ನಾಪತ್ತೆಯಾಗಲು ಕಾರಣ ಎಂದಿದ್ದರು. ಇದಕ್ಕೆ ಉಪಗ್ರಹ ಚಿತ್ರಗಳನ್ನೂ ಕೂಡ ಸಾಕ್ಷ್ಯವಾಗಿ ನೀಡಿದ್ದರು. ಈ ವಿಜ್ಞಾನಿಗಳು ಹೇಳಿದ್ದ ಕಾರಣಗಳ ಜತೆಗೆ ಈಗ ಸಿಮ್ಯುಲೇಟರ್​ಗಳನ್ನ ಬಳಸಿ ಅದೇ ರೀತಿಯ ಸಮುದ್ರದ ಅಲೆಗಳನ್ನ ಸೃಷ್ಟಿಸಿ, ಸಂಶೋಧನೆ ನಡೆಸಿದ್ದಾರೆ.

ಸದ್ಯ ಬರ್ಮುಡಾ ಟ್ರಯಾಂಗಲ್​ನಲ್ಲಿ ವಿಮಾನಗಳು, ಹಡಗುಗಳ ನಾಪತ್ತೆಯಾಗುವ ಕುರಿತು ಎರಡು ವೈಜ್ಞಾನಿಕ ಕಾರಣಗಳು ಸಿಕ್ಕಿದ್ದರೂ, ಈ ಕುರಿತು ಮತ್ತಷ್ಟು ಸಂಶೋಧನೆಗಳು ನಡೆಯುತ್ತಲೇ ಇವೆ.