ವಿಜ್ಞಾನ ಬೆಳೆದು ಧರ್ಮ, ಅಧ್ಯಾತ್ಮಕ್ಕೆ ಹಿನ್ನೆಡೆಯಾದರೆ ಬದುಕಿನಲ್ಲಿ ಏರುಪೇರು

ಚಿಕ್ಕಮಗಳೂರು: ವಿಜ್ಞಾನ-ಧರ್ಮ ಜೊತೆ ಜೊತೆಯಾಗಿ ಸಮಬಲದಲ್ಲಿ ನಡೆದಾಗ ಮಾತ್ರ ಸಮಾಜ ಹಾಗೂ ಮನುಕುಲಕ್ಕೆ ಶ್ರೇಯಸ್ಸು ದೊರೆಯುತ್ತದೆ ಎಂದು ವಾಗ್ಮಿ ಚಟ್ನಹಳ್ಳಿ ಮಹೇಶ್ ಅಭಿಪ್ರಾಯಪಟ್ಟರು.

ಕಲ್ಯಾಣ ನಗರದ ದೊಡ್ಡ ಕುರುಬರಹಳ್ಳಿ ಬಸವಮಂದಿರದ ಶಾಲಾ ಆವರಣದಲ್ಲಿ ಭಾನುವಾರ ಲಿಂ. ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ 164ನೇ ಜಯಂತಿ, ಲಿಂ. ಶ್ರೀ ಜಯಚಂದ್ರಶೇಖರ ಸ್ವಾಮೀಜಿ 24ನೇ ಸ್ಮರಣೋತ್ಸವ ಹಾಗೂ ಬಸವತತ್ವ ಸಮಾವೇಶದಲ್ಲಿ ಉಪನ್ಯಾಸ ನೀಡಿದರು. ಆಧುನಿಕ ವಿಶ್ವ ವಿಜ್ಞಾನದ ಪರ್ವ ಕಾಲವಾಗಿದ್ದು, ಧರ್ಮ, ಆಧ್ಯಾತ್ಮಿಕತೆ ವ್ಯಂಗ್ಯದ ಸರಕಾಗುತ್ತಿದೆ. ಇದರಿಂದ ಮನುಷ್ಯ ಮಾನವೀಯತೆ ಜವಾಬ್ದಾರಿಯಿಂದ ವಿಮುಖನಾಗುತ್ತಿದ್ದಾನೆ. ವಿಜ್ಞಾನ ಮಾತ್ರ ಬೆಳೆದು ಧರ್ಮ, ಅಧ್ಯಾತ್ಮಕ್ಕೆ ಹಿನ್ನೆಡೆಯಾದಾಗ ಬದುಕಿನಲ್ಲಿ ಏರುಪೇರುಗಳಾಗುವ ಅಪಾಯದ ಸಾಧ್ಯತೆ ಹೆಚ್ಚಾಗಿರುತ್ತದೆ. ವಿಜ್ಞಾನದ ಜತೆ ಧರ್ಮ ತತ್ವಗಳನ್ನು ಬೆಳೆಸಿಕೊಂಡಾಗ ಮಾತ್ರ ಸುಭದ್ರ ಸಮಾಜ ನಿರ್ಮಾಣ ಸಾಧ್ಯ ಎಂದರು.

ಧರ್ಮದ ಮೂಲ ದಯೆ ಆಗಬೇಕು. ಇಂಥ ತಳಹದಿ ಮೇಲೆ 12ನೇ ಶತಮಾನದಲ್ಲಿ ಸಮಾಜ ಕಟ್ಟುವ ಕೆಲಸ ಬಸವಣ್ಣ ಮಾಡಿದರು. ಈಗಲೂ ಸರ್ಕಾರ ಅಸ್ಪೃಶ್ಯತೆ ನಿವಾರಣೆ ಕಾರ್ಯಕ್ರಮ ಮಾಡುತ್ತಿದೆ. 900 ವರ್ಷದ ಹಿಂದೆಯೇ ಬಸವವಣ್ಣ, ಇತರೆ ಶರಣರು ಅನುಭವ ಮಂಟಪದ ಮೂಲಕ ಜಾತಿ ನಿಮೂಲನೆ ಕ್ರಾಂತಿ ಮಾಡಿದ್ದರು. ಹೀಗಾಗಿ ಶರಣರ ವಚನಗಳು ಇಂದಿನ ರಾಜಕಾರಣ, ಸಾಮಾಜಿಕ ರಂಗಕ್ಕೆ ಆಕಾರಗಳಾಗಬೇಕು ಎಂದು ಪ್ರತಿಪಾದಿಸಿದರು.

ಸಾಮಾನ್ಯರ ಬದುಕು ಎತ್ತರಕ್ಕೆ ಬೆಳೆಯಬೇಕೆಂಬ ಆಶಯ ಶರಣ ತತ್ವಗಳದ್ದಾಗಿತ್ತು. ಆದ್ಯತೆ ನೀಡಿದ್ದರಿಂದ 28 ಮಹಿಳೆಯರು ವಚನ ರಚನೆ ಮಾಡಿದರು. ವಚನಗಳಲ್ಲಿ ಸಾಮಾಜಿಕ ಕಾಳಜಿ, ಜಾತಿ ವಿರುದ್ಧ ಧಿಕ್ಕಾರ, ಶ್ರೀ ಸಾಮಾನ್ಯನ ಏಳ್ಗೆ ಸೇರಿ ಎಲ್ಲ ಕ್ಷೇತ್ರದ ಊರ್ಧ್ವಮುಖ ಬೆಳವಣಿಗೆ ಕಾಣುವ ಹಂಬಲ ಹೊಂದಿದ್ದರು ಎಂದರು.

ಮರೆಯಾಗುತ್ತಿದೆ ಮಾನವೀಯತೆ: ತಾಂತ್ರಿಕ ಯುಗದಲ್ಲಿ ಧರ್ವಚರಣೆ ಬಿಟ್ಟು ನಡೆಯುತ್ತಿರುವುದರಿಂದ ಮಾನವೀಯತೆ ಮರೆಯಾಗುತ್ತಿದೆ. ಬದುಕು ಹಸನಾಗಲು ಇಂದ್ರಿಯ ನಿಗ್ರಹಿಸಬೇಕು. ಇಂದ್ರಿಯ ಶತ್ರುಗಳನ್ನು ಗೆದ್ದರೆ ಮಾತ್ರ ಮನುಷ್ಯ ದೊಡ್ಡವನಾಗಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ಹೇಳಿದರು. ಮತ್ತೊಬ್ಬರ ಮನಸ್ಸಿಗೆ ನೋವಾಗದಂತೆ ತಂಗಾಳಿಯಂತೆ ಮನುಷ್ಯ ಬದುಕುವುದು ಕಲಿಯಬೇಕು. ಹಸಿದವನಿಗೆ ಅನ್ನ ನೀಡುವುದು, ಜ್ಞಾನ ಕೊಡುವುದು ಧರ್ಮ ಎಂದರು.

Leave a Reply

Your email address will not be published. Required fields are marked *