ನಡೆಯುತ್ತಿದೆ ನೂತನ ರಾಕೆಟ್ ಸಂಶೋಧನೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಚಂದ್ರ, ಮಂಗಳನ ಅಂಗಳಕ್ಕೆ ತೆರಳಬೇಕು ಎಂಬ ಆಸೆ ಎಲ್ಲರಲ್ಲಿ ಮೂಡುವುದು ಸಹಜ. ಈ ನಿಟ್ಟಿನಲ್ಲಿ ಕೆಲ ಸಂಸ್ಥೆಗಳು ನೂರಕ್ಕಿಂತ ಹೆಚ್ಚು ಜನರು ಹೋಗುವಂತಹ ಹೊಸ ಬಗೆಯ ರಾಕೆಟ್​ಗಳ ಸಂಶೋಧನೆ ನಡೆಸಲಾಗುತ್ತಿವೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್. ಕಿರಣಕುಮಾರ ಹೇಳಿದರು.

ಇಸ್ರೋ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬಾಹ್ಯಾಕಾಶ ತತ್ವ’ ವಿಜ್ಞಾನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿಗಿಂತ ಇಂದಿನ ಸ್ಥಿತಿ ಉತ್ತಮವಾಗಿರಲು ವಿಜ್ಞಾನ- ತಂತ್ರಜ್ಞಾನ ಪಾತ್ರ ದೊಡ್ಡದಾಗಿದೆ. ಸಂಪರ್ಕ ಸಾಧನ ಸೇರಿದಂತೆ ನಮ್ಮ ದೇಶದಲ್ಲಿನ ಅನೇಕ ಅಭಿವೃದ್ಧಿಗೆ ಬಾಹ್ಯಾಕಾಶ ನೀಡಿದ ಕೊಡುಗೆ ಸಾಕಷ್ಟಿದೆ. ಬೇರೆ ದೇಶಗಳಿಗೆ ಹೋಲಿಸಿದರೆ, ನಮ್ಮ ದೇಶದ ಉಪಗ್ರಹಗಳಲ್ಲಿನ ಉಪಕರಣಗಳು ಮೂರು ಪಟ್ಟು ಹೆಚ್ಚು ಸಾಮರ್ಥ್ಯ ಹೊಂದಿವೆ ಎಂದರು.

ಸುನಿತಾ ವಿಲಿಯಮ್್ಸ ಸೇರಿದಂತೆ ಅನೇಕರು ವಿವಿಧ ದೇಶಗಳ ಉಡಾವಣೆ ಮೂಲಕ ತೆರಳಿದ್ದಾರೆ. ಆದರೆ ನಮ್ಮ ದೇಶದ ಪ್ರಜೆಗಳನ್ನು ಬಾಹ್ಯಾಕಾಶಕ್ಕೆ ಕರೆದೊಯ್ದು ಸುರಕ್ಷಿತವಾಗಿ ಕರೆತರುವ ರಾಕೆಟ್ ಅನ್ನು 75ನೇ ಸ್ವಾತಂತ್ರ್ಯೊತ್ಸವದೊಳಗೆ ಸಿದ್ಧಪಡಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ಅದರಂತೆ ಪ್ರಯತ್ನ ಈಗಾಗಲೇ ನಡೆದಿದೆ ಎಂದರು.

ಶಿಕ್ಷಣ ಇಲಾಖೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಇಸ್ರೋ ಸಹಯೋಗದಲ್ಲಿ ಇಂತಹ ಮೇಳಗಳನ್ನು ಹಮ್ಮಿಕೊಂಡಿರುವುದು ನಗರದ ಮಕ್ಕಳಿಗೆ ಉತ್ತಮ ಅವಕಾಶ ಸಿಕ್ಕಂತಾಗಿದೆ. ಇಂತಹ ಮೇಳಗಳು ದೇಶಾದ್ಯಂತ ನಡೆಸುವುದರಿಂದ ಮಕ್ಕಳಲ್ಲಿ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಹೆಚ್ಚು ತೊಡಗುವಂತೆ ಮಾಡಬಹುದು ಎಂದರು.

ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಎಸ್.ಎಂ. ಶಿವಪ್ರಸಾದ, ಬಿ.ಆರ್. ಗುರುಪ್ರಸಾದ, ಇಸ್ರೋ ವಿಜ್ಞಾನಿ ಸುನೀಲ ಕುಲಕರ್ಣಿ, ಡಾ. ಜಾನ್ ಮ್ಯಾಥ್ಯೂ, ಡಾ. ಕೆ.ಆರ್. ಮಂಜುನಾಥ, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ಪಾಲಿಕೆ ಸದಸ್ಯ ಶಿವು ಹಿರೇಮಠ, ವಿದ್ಯಾರ್ಥಿಗಳು, ಪಾಲಕರು, ಇತರರು ಇದ್ದರು.

ಶಾಲೆ ಮುಖ್ಯ ಶಿಕ್ಷಕಿ ವೀಣಾ ಮಣಿ ಸ್ವಾಗತಿಸಿದರು. ಡಾ. ಪಿ.ಜಿ. ದಿವಾಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚರಂತಿಮಠ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಅರುಣ ಚರಂತಿಮಠ ವಂದಿಸಿದರು.

ಇಸ್ರೋ, ಶ್ರೀಹರಿ ಕೋಟಾಕ್ಕೆ ವಿದ್ಯಾರ್ಥಿಗಳು:ಬಾಹ್ಯಾಕಾಶ ತತ್ವ ಶೀರ್ಷಿಕೆಯಡಿ ಈ ಮೊದಲು 2 ಸುತ್ತಿನ ವಿಜ್ಞಾನ ವಸ್ತು ಪ್ರದರ್ಶನ ನಡೆಸಿ 300 ವಿದ್ಯಾರ್ಥಿಗಳ ಆಯ್ಕೆ ಮಾಡಲಾಗಿತ್ತು. ಇವರಲ್ಲಿ ಅಂತಿಮವಾಗಿ 15 ಜನರನ್ನು ಆಯ್ಕೆ ಮಾಡಿ 10 ಜನರಿಗೆ ಇಸ್ರೋ ಹಾಗೂ 5 ಜನರಿಗೆ ಶ್ರೀಹರಿ ಕೋಟಾದಲ್ಲಿನ ಉಪಗ್ರಹ ಉಡಾವಣೆಗೆ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ನಗರದ ಶಾಂತಿಸದನ ಶಾಲೆಯ ಅಭಿಷೇಕ ಕೆ., ರವೀಶ ಜಿ., ಜೆಎಸ್​ಎಸ್ ಆಂಗ್ಲ ಮಾಧ್ಯಮ ಶಾಲೆಯ ಮಹೇಶ ಎಂ., ಚರಂತಿಮಠ ಶಾಲೆಯ ಕೌಸ್ತುಭ ಜಿ., ಫರಾನ್ ಸೈಯದ್, ಸಾಯಿ ಪ್ರಸಾದ, ಜಯೀದ ಮುಲ್ಲಾ, ಜೆಎಸ್​ಎಸ್ ಕೇಂದ್ರೀಯ ವಿದ್ಯಾಲಯದ ಸಂಜನಾ ಎಂ., ಶ್ರೇಯಸ್ ಎನ್.ಕೆ., ಬಾಲಬಳಗದ ಆದಿತ್ಯ ಬಿ. ಅವರು ಇಸ್ರೋ ಸಂಸ್ಥೆಗೆ ಭೇಟಿ ನೀಡಲು ಆಯ್ಕೆಯಾಗಿದ್ದರೆ, ಜೆಎಸ್​ಎಸ್​ನ ಗೌರಿ ಎಚ್., ಗಿರಿಜಾ, ಶರಣಗೌಡ ಹಾಗೂ ಚರಂತಿಮಠ ಶಾಲೆಯ ಪ್ರಗತಿ ಮತ್ತು ರಿತ್ವಿಕ್ ಶ್ರೀಹರಿಕೋಟಾದಲ್ಲಿನ ಉಪಗ್ರಹ ಉಡಾವಣೆ ವೀಕ್ಷಣೆಗೆ ತೆರಳುವ ಸೌಭಾಗ್ಯ ಪಡೆದಿದ್ದಾರೆ.