ಮರ್ಲೆ ತಿಮ್ಮನಹಳ್ಳಿಯಲ್ಲಿ 80 ಜನರಿಗೆ ವಿಷಮಶೀತ ಜ್ವರ

ಚಿಕ್ಕಮಗಳೂರು: ಬರದ ಬೇಗೆಯಿಂದ ಕುಡಿಯುವ ನೀರಿಲ್ಲದೆ ಬೇಸತ್ತಿರುವ ಗ್ರಾಮಸ್ಥರು ವಿಷಮಶೀತ ಜ್ವರಕ್ಕೆ ಗುರಿಯಾಗಿ ಕುಳಿತಲ್ಲೇ, ನಿಂತಲ್ಲೇ ಆಯಾಸದಿಂದ ಬಳಲುತ್ತಿದ್ದಾರೆ. ಕೈಕಾಲುಗಳು ಊತಗೊಂಡು ಸಾಕಷ್ಟು ಜನರು ಹಾಸಿಗೆ ಹಿಡಿದಿದ್ದಾರೆ.

ಕೆಲವರಿಗೆ ಹಾಸಿಗೆಯಿಂದ ಮೇಲೇಳಲಾಗದಷ್ಟು ಕೀಲುಗಳ ನೋವು ಕಾಡುತ್ತಿದ್ದರೆ, ಮತ್ತೆ ಕೆಲವರು ಪ್ರಯಾಣಿಸಲೂ ಆಗದೆ ಗ್ರಾಮದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಕಂಡುಬಂದಿರುವುದು ತಾಲೂಕಿನ ಮರ್ಲೆ ತಿಮ್ಮನಹಳ್ಳಿಯಲ್ಲಿ.

ಗ್ರಾಮದ 80ಕ್ಕೂ ಹೆಚ್ಚು ಜನರು ಜ್ವರ ಹಾಗೂ ಕೀಲುನೋವಿನಿಂದ ಬಳಲುತ್ತಿದ್ದಾರೆ. ಆರೋಗ್ಯ ಇಲಾಖೆ ಗ್ರಾಮದ ಶಾಲಾ ಕೊಠಡಿಯನ್ನೇ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಿ ಜ್ವರ ಪೀಡಿತರನ್ನು ಆರೈಕೆ ಮಾಡುತ್ತಿದೆ. ಇದಕ್ಕೆ ಜಿಲ್ಲಾಡಳಿತ ಸಾಥ್ ನೀಡಿದೆ.

ಗ್ರಾಮಕ್ಕೆ ಮಂಗಳವಾರ ಪತ್ರಕರ್ತರ ತಂಡ ತೆರಳಿದಾಗ, ಅಲ್ಲಿನ ಪ್ರಾಥಮಿಕ ಶಾಲೆಯೇ ತಾತ್ಕಾಲಿಕ ಆಸ್ಪತ್ರೆಯಾಗಿ ಮಾರ್ಪಟ್ಟಿರುವುದು ಕಂಡುಬಂತು. ಜ್ವರದಿಂದ ಬಳಲುತ್ತಿದ್ದ ಗ್ರಾಮಸ್ಥ ಮೋಹನ್ ಅವರನ್ನು ತರಗತಿ ಕೊಠಡಿಯ ಬೆಂಚ್ ಮೇಲೆ ಮಲಗಿಸಿ ದಣಿವು, ಕೀಲು ನೋವು ನಿವಾರಣೆಗಾಗಿ ಚಿಕಿತ್ಸೆ ನೀಡಲಾಗುತ್ತಿತ್ತು.

ಸ್ಥಳೀಯ ವೈದ್ಯಾಧಿಕಾರಿ ಡಾ. ಕಾರ್ತಿಕ್ ನೇತೃತ್ವದಲ್ಲಿ ಪರಿವೀಕ್ಷಕ ಧರಣೇಶ್, ಮೂವರು ಶುಶ್ರೂಷಕಿಯರು ಜ್ವರಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದು, ಇಲ್ಲಿ ಇದುವರೆಗೂ 80ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ಪಡೆದಿದ್ದಾರೆ.

ಲಾರ್ವ ಪರೀಕ್ಷೆ: ಜ್ವರಪೀಡಿತರಿಗೆ ಚಿಕಿತ್ಸೆ ನೀಡುವುದರ ಜತೆಗೆ ಗ್ರಾಮದ ಪ್ರತಿ ಮನೆಯಲ್ಲೂ ಸಂಗ್ರಹಿಸಿರುವ ನೀರಿನಲ್ಲಿ ಡೆಂಘೆ ಹರಡುವ ಸೊಳ್ಳೆ ಅಥವಾ ಲಾರ್ವ ಇದೆಯೇ ಎಂದು ಆಶಾ ಕಾರ್ಯಕರ್ತೆಯರು ಪರಿಶೀಲಿಸುತ್ತಿದ್ದು, ಕೆಲ ಮನೆಗಳಲ್ಲಿ ನೀರಿನಲ್ಲಿ ಲಾರ್ವ ಇರುವುದು ಪತ್ತೆಯಾಗಿದೆ. ನೀರನ್ನು ಪಾತ್ರೆಗಳಲ್ಲಿ ತೆರೆದಿಡದೆ ಮುಚ್ಚಿಡಲು ಹಾಗೂ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಪರಿವೀಕ್ಷಕ ಧರಣೇಶ್ ತಿಳಿಸಿದರು.

ಅಡುಗೆ ಮಾಡಲೂ ಆಗದ ಸ್ಥಿತಿ: ಮೊದಲೇ ಈ ಗ್ರಾಮದಲ್ಲಿ ನೀರಿನ ಹಾಹಾಕಾರ ಎದುರಾಗಿದೆ. ನೀರು ತರಲು ಮೈಲುಗಟ್ಟಲೆ ನಡೆಯಬೇಕು. ಇದರ ಜತೆಗೆ ಜ್ವರ ಬಂದು ಹಲವು ದಿನಗಳಿಂದ ಕಾಲು ಊದಿಕೊಂಡು ಹಾಸಿಗೆ ಹಿಡಿಯುವಂತಾಗಿದೆ. ಮನೆಯಲ್ಲಿ ಅಡುಗೆ ಮಾಡುವವರು ಇಲ್ಲದೆ ಮನೆ ಮಂದಿಗೆಲ್ಲ ಬಹಳ ತೊಂದರೆಯಾಗಿದೆ. ಕೂಲಿ ಮಾಡಿ ಜೀವಿಸುವ ಕುಟುಂಬಕ್ಕೆ ಈ ಜ್ವರ ಕಂಟಕವಾಗಿ ಪರಿಣಮಿಸಿದೆ ಎಂದು ಜ್ವರ ಪೀಡಿತೆ ಗೀತಾ ಅಳಲು ತೋಡಿಕೊಂಡರು.

Leave a Reply

Your email address will not be published. Required fields are marked *