ಬೆಂಗಳೂರು ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಮರು ಚಾಲನೆ ನೀಡಲಾಗಿದೆ. ಈ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ ವಲಯ ವರ್ಗಾವಣೆಯನ್ನು ಕೈಬಿಡಲಾಗಿದೆ. ಪರಿಷಕೃತ ವೇಳಾಪಟ್ಟಿ ಪ್ರಕಾರ ವರ್ಗಾವಣೆ ಬಯಸುವ ಶಿಕ್ಷಕರಿಗೆ ಅರ್ಜಿ ಸಲ್ಲಿಸಲು ಜೂ.20ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು, ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಯ ಪರಿಷಸ್ಕೃತ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆಯು ಪ್ರಕಟಿಸಿದೆ. ತಾಂತ್ರಿಕ ಕಾರಣಗಳಿಂದ ಅಡಚಣೆಯಾದಲ್ಲಿ ವೇಳಾಪಟ್ಟಿ ಬದಲಾಗಲಿದೆ ಎಂದು ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
2020ರಲ್ಲಿ ಜಾರಿಯಾದ ಶಿಕ್ಷಕರ ವರ್ಗಾವಣೆ ಕಾಯ್ದೆಯಂತೆ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹಂಚಿಕೆ ಮತ್ತು ಕಡ್ಡಾಯ ವರ್ಗಾವಣೆಗಳನ್ನು ಒಂದರ ನಂತರ ಮತ್ತೊಂದನ್ನು ಪರ್ಯಾಯ ವರ್ಷಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ.
ಆದರೆ, ಕಳೆದ ವರ್ಷ ನಡೆಯಬೇಕಿದ್ದ ವರ್ಗಾವಣೆ ಪ್ರಕ್ರಿಯೆಯು ಲೋಕಸಭಾ ಚುನಾವಣೆ ನೀತಿ ಸಂಹಿತೆಯಿಂದ 3 ತಿಂಗಳು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷಾರಂಭದಲ್ಲಿಯೇ ವಲಯ ವರ್ಗಾವಣೆ ಸೂಕ್ತವಲ್ಲವೆಂದು ನಿರ್ಧರಿಸಲಾಗಿದೆ. ಈ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ ವಲಯ ವರ್ಗಾವಣೆಯನ್ನು ಕೈಬಿಟ್ಟು ಇತರೆ ವರ್ಗಾವಣೆಯನ್ನು ಮುಂದುವರಿಸಲು ಅನುಮತಿ ನೀಡಲಾಗಿದೆ. ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆ ಇರುವುದಿಲ್ಲ. ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗಷ್ಟೇ ಅವಕಾಶ ಕಲ್ಪಿಸಿದೆ.
ನಿರ್ದಿಷ್ಟಪಡಿಸಿರುವ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿಉವ ಶಿಕ್ಷಕರ ತಾತ್ಕಾಲಿಕ ಕರಡು ಪಟ್ಟಿಯನ್ನು ಜೂ.18ರಂದು ಪ್ರಕಟಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಶಿಕ್ಷಕರು ಜೂ.21ರವರೆಗೆ ಆಕ್ಷೇಪಣೆ ಸಲ್ಲಿಸಬಹುದು. ಜೂ.24ರಂದು ಅಂತಿಮ ಆದ್ಯತಾ ಕರಡು ಪಟ್ಟಿ ಪ್ರಕಟಣೆ ಮಾಡಲಾಗುತ್ತದೆ.
ಕೋರಿಕೆ ಮತ್ತು ಪರಸ್ಪರ ವರ್ಗಾವಣೆ:
ಜೂ.20 ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗಳಿಗೆ ಅರ್ಜಿ ಸಲ್ಲಿಸಲು ಕೊನೇ ದಿನ
ಜೂ.27 ಅರ್ಜಿಗಳ ಪರಿಶೀಲನೆಗೆ ಕೊನೆಯ ದಿನ
ಜೂ.29 ಅರ್ಜಿ ಸಲ್ಲಿಸಿರುವ ಶಿಕ್ಷಕರ ಪೈಕಿ ಜಿಲ್ಲೆಯೊಳಗೆ/ಹೊರಗೆ, ಅರ್ಹ/ಅನರ್ಹ ಶಿಕ್ಷಕರ ಪಟ್ಟಿ ಪ್ರಕಟ
ಜೂ.29ರಿಂದ ಜು.5 ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಜು.8 ತಾತ್ಕಾಲಿಕ ಆದ್ಯತಾ ಪಟ್ಟಿ ಪ್ರಕಟ
ಜು.10 ಖಾಲಿ ಹುದ್ದೆಗಳ ಪ್ರಕಟ
ಜು.18 ಅಂತಿಮ ಆದ್ಯತಾ ಪಟ್ಟಿ ಪ್ರಕಟ
ಜಿಲ್ಲಾ ಹಂತದ ವರ್ಗಾವಣೆ ಕೌನ್ಸೆಲಿಂಗ್
ಜು.19 ಪ್ರಾಥಮಿಕ ಶಾಲಾ ಶಿಕ್ಷಕರು
ಜು.20 ಪ್ರೌಢಶಾಲಾ ಶಿಕ್ಷಕರು
ಜು.24ರಿಂದ 30 ಜ್ಯೇಷ್ಟತಾ ಪಟ್ಟಿಯಲ್ಲಿರುವಂತೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ
ವಿಭಾಗೀಯ ಹಂತದ ವರ್ಗಾವಣೆ
ವಿಭಾಗೀಯ ಹಂತದ ವರ್ಗಾವಣೆಯು ಆ.1ರಿಂದ ಆ.14ರವರೆಗೆ ನಡೆಯಲಿದೆ. ಅಂತರ್ ವಿಭಾಗೀಯ ಹಂತದ ವರ್ಗಾವಣೆಯು ಆ.14ರಿಂದ 27ರವರೆಗೆ ನಡೆಯಲಿದೆ. ತಾಂತ್ರಿಕ ಕಾರಣಗಳಿಂದ ಅಡಚಣೆಯಾದಲ್ಲಿ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಆಯುಕ್ತರು ತಿಳಿಸಿದ್ದಾರೆ.