ಶಾಲೆಗೆ ಬನ್ನಿ ಶನಿವಾರ ಶೀಘ್ರ ಪುನಾರಂಭ

| ದೇವರಾಜ್ ಎಲ್. ಬೆಂಗಳೂರು

ಮೂಲೆಗುಂಪಾಗಿದ್ದ ಶಿಕ್ಷಣ ಇಲಾಖೆಯ ಜನಪ್ರಿಯ ಯೋಜನೆ ‘ಶಾಲೆಗೆ ಬನ್ನಿ ಶನಿವಾರ- ಕಲಿಯಲು ನೀಡಿ ಸಹಕಾರ’ ಮತ್ತೆ ಆರಂಭವಾಗಲಿದೆ.

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ಪಾಠ-ಪ್ರವಚನ ಮಾಡಿಸುವ ಉದ್ದೇಶದಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್​ಇಆರ್​ಟಿ) ಜಾರಿಗೆ ತಂದಿದ್ದ ‘ಶಾಲೆಗೆ ಬನ್ನಿ ಶನಿವಾರ- ಕಲಿಯಲು ನೀಡಿ ಸಹಕಾರ’ ಅನುಷ್ಠಾನವಾದ ಕೆಲವೇ ತಿಂಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿತ್ತು. ಆನಂತರ ಶಿಕ್ಷಕರು ಮತ್ತು ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆ ಹಳ್ಳ ಹಿಡಿಯಿತು.

ಇದೀಗ ಮತ್ತೆ ಆ ಯೋಜನೆಯನ್ನು ಆರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಯೋಜನೆಯ ಮರು ಚಾಲನೆ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದೆ. ಇದಕ್ಕೆ ತಾತ್ವಿಕ ಒಪ್ಪಿಗೆ ಸಿಕ್ಕಿದ್ದು, ಶೀಘ್ರದಲ್ಲೇ ಸುತ್ತೋಲೆ ಹೊರಬೀಳುವ ಸಾಧ್ಯತೆ ಇದೆ.

ಈ ಯೋಜನೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಲು ಶಿಕ್ಷಣ ಇಲಾಖೆ ಚಿಂತಿಸುತ್ತಿದೆ. ಆನ್​ಲೈನ್​ನಲ್ಲೇ ನೋಂದಾಯಿಸಿಕೊಳ್ಳಲು ಮತ್ತೆ ಪಾಠ ಮಾಡಬೇಕಿರುವ ಶಾಲೆ ಮತ್ತು ಸಮಯವನ್ನು ಸಂಪನ್ಮೂಲ ವ್ಯಕ್ತಿಗಳಿಗೆ ತಲುಪಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಇದರಿಂದಾಗಿ ಸಂಪನ್ಮೂಲ ವ್ಯಕ್ತಿಗಳು ನೇರವಾಗಿ ಶಾಲೆಗೆ ಹೋಗಿ ಬೋಧನೆ ಆರಂಭಿಸಬಹುದಾಗಿದೆ.

2016ರಲ್ಲಿ ಅಂದಿನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಯೋಜನೆಗೆ ಚಾಲನೆ ನೀಡಿದ್ದರು. ಮುಖ್ಯೋಪಾಧ್ಯಾಯರು ಹೊರಗಿನ ಸಂಪನ್ಮೂಲ ವ್ಯಕ್ತಿಗಳಿಗೆ ತರಗತಿಗಳನ್ನು ತೆಗೆದುಕೊಳ್ಳಲು ಅವಕಾಶ ನೀಡದೇ ನಿರಾಕರಿಸುವುದು, ಅನವಶ್ಯಕ ಮಾಹಿತಿ ಕೇಳುತ್ತಿದ್ದರಿಂದ ಬಹುತೇಕರು ನಿರಾಸಕ್ತಿ ತೋರಿದ್ದರು. ಈ ಯೋಜನೆಯ ಪರಿಕಲ್ಪನೆ ಹೊಂದಿದ್ದ ಅಂದಿನ ಡಿಎಸ್​ಇಆರ್​ಟಿ ನಿರ್ದೇಶಕ ಎಸ್. ಜಯಕುಮಾರ್ ಆ ಹುದ್ದೆಯಿಂದ ವರ್ಗಾವಣೆಗೊಂಡಿದ್ದರಿಂದ ಆನಂತರ ಈ ಯೋಜನೆ ನಿರ್ವಹಣೆ ಹೊಣೆಯನ್ನು ಹೊತ್ತುಕೊಳ್ಳಲು ಯಾರು ಮುಂದೆ ಬರಲಿಲ್ಲ. ಹೀಗಾಗಿ ಆರಂಭವಾದ ಒಂದು ವರ್ಷದಲ್ಲೇ ಯೋಜನೆ ಮೂಲೆಗುಂಪು ಸೇರಿತು.

ಟೆಕ್ಕಿಗಳಿಂದ ತರಗತಿ

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಟೆಕ್ಕಿಗಳಿಗೆ ವಾರಾಂತ್ಯ ರಜೆ ಇರುವುದರಿಂದ ಇದನ್ನು ಮಕ್ಕಳಿಗಾಗಿ ಉಪಯೋಗಿಸಲು ಡಿಎಸ್​ಇಆರ್​ಟಿ ‘ಶಾಲೆಗೆ ಬನ್ನಿ ಶನಿವಾರ- ಕಲಿಯಲು ನೀಡಿ ಸಹಕಾರ’

ಯೋಜನೆ ರೂಪಿಸಿತ್ತು. ಕಲಿತ ಶಾಲೆಗಳಿಗೆ ಏನಾದರೂ ಸೇವೆ ಮಾಡಬೇಕೆಂಬ ಅದರಲ್ಲೂ ತಾವು ಕಲಿತಿರುವ ವಿಷಯದಲ್ಲಿ ತಮ್ಮ ಹುಟ್ಟೂರಿನ ಅಥವಾ ಸಮೀಪದ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ವಿದ್ಯಾದಾನ ಮಾಡಬೇಕೆಂಬ ಹಂಬಲವನ್ನು ಈಡೇರಿಸುವ ಮೂಲಕ

ಮಕ್ಕಳ ಜ್ಞಾನಾರ್ಜನೆಗೆ ಅವಕಾಶ ಕಲ್ಪಿಸಿಕೊಡುವುದು ಈ ಯೋಜನೆ ಉದ್ದೇಶವಾಗಿತ್ತು. ಪಠ್ಯಪುಸ್ತಕದ ವಿಷಯವನ್ನೇ ಬೋಧಿಸಬೇಕೆಂದೇನಿಲ್ಲ. ಮಕ್ಕಳ ಕಲಿಕೆಗೆ ಪ್ರೇರೇಪಿಸಲು, ಮಕ್ಕಳಲ್ಲಿ ಆಸಕ್ತಿ, ಆತ್ಮ ವಿಶ್ವಾಸ ಹೆಚ್ಚಸಲು ಸಹಾಯ ಮಾಡಬಹುದಾಗಿದೆ. ಯೋಜನೆ ಅನುಷ್ಠಾನ ಮಾಡಿದ ಕೆಲವೇ ತಿಂಗಳಲ್ಲಿ ನೂರಾರು ಜನರು ತಮ್ಮ ಹೆಸರು ನೋಂದಾಯಿಸಿಕೊಂಡು ಪಾಠ ಮಾಡಿದ್ದರು.