ಹಟ್ಟಿಚಿನ್ನದಗಣಿ: ಪಟ್ಟಣದ ಕೋಟಾ ಕ್ರಾಸ್‌ನ ನಾಲೆ ಸಮೀಪ ಅಳವಡಿಸಿದ್ದ ವಿದ್ಯುತ್ ಕಂಬಗಳು ವಾಲಿದೆ. ಪಕ್ಕದಲ್ಲಿಯೇ ಸರ್ಕಾರಿ ಶಾಲೆ ಇದ್ದು, ಮಕ್ಕಳು ಭಯದೊಂದಿಗೆ ಓಡಾಡುವಂತಾಗಿದೆ.
ಇದನ್ನೂ ಓದಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ : ಲಾಂಡ್ರಿ ಅಂಗಡಿ ಬೆಂಕಿಗೆ ಆಹುತಿ
ಜೆಸ್ಕಾಂ ಅಧಿಕಾರಿಗಳು ನಾಲೆಯ ಪಕ್ಕ ವಿದ್ಯುತ್ ಕಂಬಗಳನ್ನು ನೆಟ್ಟು, ಒಂದು ವಿದ್ಯುತ್ ಪರಿವರ್ತಕವನ್ನು ಅಳವಡಿಸಿದ್ದಾರೆ. ಆದರೆ, ಕಳೆದೊಂದು ವರ್ಷದಿಂದ ಎರಡು ವಿದ್ಯುತ್ ಕಂಬಗಳು ನಾಲೆಯತ್ತ ವಾಲಿವೆ. ಪಕ್ಕದಲ್ಲಿಯೇ ಶಾಲೆ ಇದ್ದು, ಉಳಿದ ಕಂಬಗಳು ಶಾಲೆಯ ಕಡೆಗೆ ಬಾಗಿವೆ. ರಸ್ತೆಯಲ್ಲಿ ಪ್ರತಿ ದಿನ ನೂರಾರು ಮಕ್ಕಳು ಓಡಾಡುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.
ಕಂಬಗಳು ನೆಡುವಾಗ ಜೆಸ್ಕಾಂ ಅಧಿಕಾರಿಗಳು ಹೆಚ್ಚಿನ ಆಳದಲ್ಲಿ ಹೂಳದಿರುವುದೇ ವಿದ್ಯುತ್ ಕಂಬಗಳು ಬಾಗಲು ಕಾರಣ ಎಂಬುದು ಸ್ಥಳೀಯರ ಆರೋಪ. ಅಲ್ಲದೇವಿದ್ಯುತ್ ಕಂಬಗಳು ನಾಲೆಗೆ ಹಾಗೂ ಶಾಲೆಯತ್ತ ಉರುಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಅಧಿಕಾರಿಗಳು ಅನಾಹುತ ಸಂಭವಿಸುವ ಮುನ್ನ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.
ವಿದ್ಯುತ್ ಕಂಬಗಳು ವಾಲಿರುವುದು ಗಮನಕ್ಕಿದೆ. ಆದರೆ, ಕಂಬಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ. ಯಾರು ಭಯಪಡುವ ಅಗತ್ಯವಿಲ್ಲ. ಶೀಘ್ರವೇ ಬಾಗಿರುವ ಕಂಬಗಳನ್ನು ತೆರವು ಮಾಡಲಾಗುವುದು.
ರಡ್ಡೆಪ್ಪ
ಜೆಸ್ಕಾಂ ಶಾಖಾಧಿಕಾರಿ, ಹಟ್ಟಿ