ಶೇ.95 ಶಾಲೆಗಳು ಆರಂಭ

ಉಡುಪಿ: ಜಿಲ್ಲೆಯಲ್ಲಿ ನೀರಿನ ಬವಣೆಯ ನಡುವೆಯೂ ಮೇ 29ರಂದು ಶೇ 95ರಷ್ಟು ಪ್ರಾಥಮಿಕ ಹಾಗೂ ಪ್ರೌಢಶಾಲೆ ಪ್ರಾರಂಭ ವಾಗಿವೆ. ಬಿಸಿಯೂಟ ಯೋಜನೆಗೆ ನೀರಿನ ಸಮಸ್ಯೆ ಎದುರಾದರೂ ಪ್ರಥಮ ದಿನದಲ್ಲಿ ಗ್ರಾಪಂ ಹಾಗೂ ದಾನಿಗಳಿಂದ ಟ್ಯಾಂಕರ್ ಮೂಲಕ ನೀರು ಪಡೆದು ಪ್ರಾರಂಭೋತ್ಸವ ನಡೆಸಲಾಯಿತು.
ಉಡುಪಿ ವಲಯದಲ್ಲಿ ಸರ್ಕಾರಿ, ಅನುದಾನಿತ, ಖಾಸಗಿ ಸೇರಿ 248 ಶಾಲೆಗಳಲ್ಲಿ 238 ಶಾಲೆಗಳು ಪ್ರಾರಂಭವಾಗಿವೆ. 10 ಸಿಬಿಎಸ್‌ಸಿ ಹಾಗೂ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಪ್ರಾಂಭವಾಗಿಲ್ಲ. 11 ಶಾಲೆಗಳಲ್ಲಿ ತೀವ್ರ ನೀರಿನ ಕೊರತೆಯಿಂದ ಅಕ್ಷರ ದಾಸೋಹ ಮಾಡಲು ಸಾಧ್ಯವಾಗದೆ, ಮಧ್ಯಾಹ್ನದವರೆಗೆ ತರಗತಿ ನಡೆಸಿ, ಪಠ್ಯಪುಸ್ತಕ ವಿತರಿಸಿ ಮಕ್ಕಳನ್ನು ಮನೆಗೆ ಕಳುಹಿಸಲಾಯಿತು. ಶೇ.98 ಶಾಲೆಗಳಿಗೆ ಪಠ್ಯಪುಸ್ತಕ ವಿತರಿಸಲಾಗಿದೆ. ನಗರದ ಒಳಕಾಡು ಸರ್ಕಾರಿ ಪ್ರೌಢಶಾಲೆಯಲ್ಲಿ 1400 ಮಕ್ಕಳಿದ್ದು, ನೀರಿನ ಕೊರತೆಯಿಂದ ಹೈಸ್ಕೂಲ್ ಮತ್ತು ಪ್ರೈಮರಿ ವಿಭಾಗ ವಿಂಗಡಿಸಲಾಗಿದ್ದು, ಹೈಸ್ಕೂಲ್‌ನ 750 ಮಕ್ಕಳಿಗೆ ಬುಧವಾರ ತರಗತಿ ಪ್ರಾರಂಭಿಸಲಾಯಿತು. ಪ್ರಾಥಮಿಕ ಶಾಲೆಯ 630 ವಿದ್ಯಾರ್ಥಿಗಳಿಗೆ ಗುರುವಾರ ಪ್ರಾರಂಭೋತ್ಸವ ನಡೆಯಲಿದೆ.

ಬೈಂದೂರಿನಲ್ಲಿ 217 ಸರ್ಕಾರಿ ಹಾಗೂ 32 ಖಾಸಗಿ ಶಾಲೆಗಳು ಪ್ರಾರಂಭವಾಗಿದೆ. ಕಾರ್ಕಳದಲ್ಲಿ 255 ಶಾಲೆಗಳಲ್ಲಿ 500ಕ್ಕಿಂತಲೂ ಹೆಚ್ಚು ಮಕ್ಕಳಿರುವ 5 ಖಾಸಗಿ ಶಾಲೆಗಳು ಜೂ.3ರಿಂದ ಶಾಲಾರಂಭಕ್ಕೆ ಇಲಾಖೆಗೆ ಮನವಿ ಸಲ್ಲಿಸಿದೆ. ಉಳಿದಂತೆ ಎಲ್ಲಾ ಶಾಲೆಗಳು ಬುಧವಾರ ಪ್ರಾರಂಭವಾಗಿದೆ.
ಬ್ರಹ್ಮಾವರ ವಲಯದಲ್ಲಿ 252 ಶಾಲೆಗಳಿದ್ದು, 2 ಶಾಲೆಗಳಲ್ಲಿ ಮಾತ್ರ ನೀರಿನ ಸಮಸ್ಯೆ ಎದುರಾಗಿದೆ. ಕುಂದಾಪುರ ವಲಯದಲ್ಲಿ 250 ಶಾಲೆಗಳಿದ್ದು, ಹೆಚ್ಚಿನ ಎಲ್ಲ ಶಾಲೆಗಳಲ್ಲಿ ಟ್ಯಾಂಕರ್ ನೀರು ಬಳಸಿ ಬಿಸಿಯೂಟ ತಯಾರಿಸಲಾಗಿದೆ. 5 ಶಾಲೆಗಳಲ್ಲಿ ನೀರಿನ ಸಮಸ್ಯೆ ಇರುವುದರಿಂದ ಗುರುವಾರದಿಂದ ತರಗತಿ ಆರಂಭವಾಗಲಿದೆ. ಶಂಕರನಾರಾಯಣ ಮತ್ತು ಅಮಾವಾಸ್ಯೆಬೈಲಿನ ಖಾಸಗಿ ಶಾಲೆಗಳು ಜೂ.10ರ ನಂತರ ತರಗತಿ ಪ್ರಾರಂಭಿಸಲಿವೆ.

ಜಿಪಂ ಅಧ್ಯಕ್ಷರ ಭೇಟಿ: ಶಾಲೆ ಪುನರಾರಂಭ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು ಜಿಲ್ಲೆಯ ಆಯ್ದ ಶಾಲೆಗಳಿಗೆ ಭೇಟಿ ನೀಡಿ ವ್ಯವಸ್ಥೆ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಿಂದ ಮಾಹಿತಿ ಪಡೆದರು. ಎಲ್ಲ ಶಾಲೆಗಳಿಗೆ ನೀರು ಒದಗಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

Leave a Reply

Your email address will not be published. Required fields are marked *