ಶುಲ್ಕ ಪಾವತಿಗಾಗಿ ಫಲಿತಾಂಶ ತಡೆಹಿಡಿದ ಆಡಳಿತ ಮಂಡಳಿ

ಬೀರೂರು: ಪಟ್ಟಣದ ಅನುದಾನಿತ ಅಕ್ಕಮಹಾದೇವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಶುಲ್ಕ ಪಾವತಿಸಿದ ಒಂದರಿಂದ ಏಳನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿದಿರುವುದನ್ನು ಖಂಡಿಸಿ ಪಾಲಕರು ಶಾಲೆ ಎದುರು ಪ್ರತಿಭಟನೆ ನಡೆಸಿದರು.

ಬುಧವಾರ ಬೆಳಗ್ಗೆ ಶಾಲೆಯಲ್ಲಿ ಫಲಿತಾಂಶ ನೋಡಲು ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಹೆಸರಿನ ಮುಂದೆ ಫಲಿತಾಂಶ ತಡೆ ಹಿಡಿಯಲಾಗಿದೆ ಎಂದು ಬರೆದಿರುವುದನ್ನು ನೋಡಿ ಪಾಲಕರ ಗಮನಕ್ಕೆ ತಂದರು. ಪಾಲಕ ಮೈಲಾರಪ್ಪ ಎಂಬುವವರು ಈ ಬಗ್ಗೆ ಶಾಲಾ ಮುಖ್ಯಶಿಕ್ಷಕರ ಜತೆ ದೂರವಾಣಿಯಲ್ಲಿ ಮಾತನಾಡಿದಾಗ ಆಡಳಿತ ಮಂಡಳಿ ಆದೇಶದ ಅನುಸಾರ ಶಾಲಾಭಿವೃದ್ಧಿ ಶುಲ್ಕ ಪಾವತಿಸದ ವಿದ್ಯಾರ್ಥಿಗಳ ಫಲಿತಾಂಶ ತಡೆಹಿಡಿಯಲಾಗಿದೆ. ಶುಲ್ಕ ಪಾವತಿಸಿದ ನಂತರ ಫಲಿತಾಂಶ ಪ್ರಕಟಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಫಲಿತಾಂಶ ತಡೆ ಹಿಡಿಯಲಾಗಿದೆ ಎಂದು ತಿಳಿಸಿದರು.

ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಾಲಕರು ಫಲಿತಾಂಶ ತಡೆಹಿಡಿದಿರುವ ಬಗ್ಗೆ ಕಾರ್ಯ ನಿರ್ವಹಣಾಧಿಕಾರಿ ಸಿ.ದಯಾನಂದ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಶಾಲೆ ಆಡಳಿತ ಮಂಡಳಿಯಿಂದ ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಕೆಲವು ಕಾರ್ಯ ನಿರ್ವಹಣಾಧಿಕಾರಿ ಜತೆ ಮಾತಿನ ಚಕಮಕಿ ನಡೆಸಿದರು. ಇದರಿಂದ ಆಕ್ರೋಶಗೊಂಡ ಕಾರ್ಯ ನಿರ್ವಹಣಾಧಿಕಾರಿ ಶಾಲೆಯ ನೋಟಿಸ್ ಬೋರ್ಡ್​ನಲ್ಲಿ ಅಂಟಿಸಿದ್ದ ಫಲಿತಾಂಶದ ಪಟ್ಟಿಯನ್ನು ಹರಿದು ಹಾಕಿ ಪಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.