ಶಾಲಾ ವಠಾರದಲ್ಲೇ ನೇಜಿ ನಾಟಿ

ಮನೋಹರ ಬಳಂಜ ಬೆಳ್ತಂಗಡಿ

ಎಳವೆಯಿಂದಲೇ ಕೃಷಿಯೆಡೆಗೆ ಒಲವು ಬೆಳೆಸುವ ಉದ್ದೇಶದಿಂದ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಲಿಗೂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲೇ ಭತ್ತದ ಗದ್ದೆ ಮಾಡಿ ನೇಜಿ ನೆಟ್ಟು ಅನ್ನದ ಬೆಲೆಯ ಅರಿವು ಮೂಡಿಸುವ ಯತ್ನ ಮಾಡಲಾಗಿದೆ.
ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನ ಸಂಪಾದನೆ ಜತೆಗೆ ಪ್ರತ್ಯಕ್ಷವಾಗಿ ಕೆಲವು ವಿಷಯಗಳನ್ನು ಅನುಭವಿಸಿ ಅರಿತಾಗ ಅವುಗಳ ಬೆಲೆ ತಿಳಿಯಲು ಸಾಧ್ಯ. ಗದ್ದೆ ಎಂದರೆ ಏನು? ಅಕ್ಕಿ ಹೇಗೆ ಸಿದ್ಧವಾಗುತ್ತದೆ ಎಂಬುದರ ಅರಿವಿರದ ಸ್ಥಿತಿ ಮುಂದಿನ ಜನಾಂಗಕ್ಕೆ ಬರಬಾರದೆಂಬ ನಿಟ್ಟಿನಲ್ಲಿ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೇ ವಿದ್ಯಾರ್ಥಿಗಳ ಸಲಹೆಯಂತೆ ಶಾಲೆಯಲ್ಲೇ ಗದ್ದೆ ನಿರ್ಮಾಣ ಮಾಡಲಾಗಿದೆ.

ಶಾಲೆಯ 1.54 ಎಕ್ರೆ ಸ್ಥಳಾವಕಾಶದಲ್ಲಿ 20 ಸೆಂಟ್ಸ್ ಜಾಗದಲ್ಲಿ ಗದ್ದೆ ನಿರ್ಮಿಸುವ ಮೂಲಕ ಈ ಶಾಲೆ ಹೊಸ ಹೆಜ್ಜೆ ಇರಿಸಿದೆ. ಈಗಾಗಲೇ ಅಕ್ಷರ ಕೈತೋಟ ನಿರ್ಮಿಸುವ ಮೂಲಕ 182 ಅಡಕೆ ಗಿಡ, 60 ತೆಂಗು ಬೆಳೆದು ತಾಲೂಕಿಗೆ ಮಾದರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಆಯಾಮ ಬರೆದಿದೆ.

ದಾನಿಗಳ ನೆರವು
ಶಾಲಾ ವಠಾರದಲ್ಲಿ ಕೇವಲ 10 ದಿನದಲ್ಲಿ ಗದ್ದೆ ಸಿದ್ಧಪಡಿಸಿ ಉತ್ತು, ನೇಜಿ ನೆಡಲಾಗಿತ್ತು. ರಾಜಕಮಲ್ ಕನ್‌ಸ್ಟ್ರಕ್ಷನ್ ಮಾಲೀಕರು ಜೆಸಿಬಿ ಮೂಲಕ ಮಣ್ಣು ಹದಗೊಳಿಸಲು ನೆರವಾದರು. ಅಬ್ದುಲ್ ಖಾದರ್ ಕೋಡಿಯೇಲು ಎಂಬುವರು ಒದಗಿಸಿದ 100 ಬುಟ್ಟಿ ಸೆಗಣಿ, ಚಂದ್ರಯ್ಯ ಆಚಾರ್ ಎಂಬುವರು ನೀಡಿದ 10 ಬ್ಯಾಗ್ ಬೂದಿ, ಕೊರಗಪ್ಪ ಪೂಜಾರಿ ನೀಡಿದ ನೇಜಿ ಗದ್ದೆ ಹಚ್ಚ ಹಸನಾಗಿಸುವಲ್ಲಿ ನೆರವಾಯಿತು.
ಅನುರಣಿಸಿದ ಪಾಡ್ದನ ಹಾಡು

ಮೂವರು ಮಹಿಳೆಯರಿಂದ ಪಾಡ್ದನ ಹಾಡಿನ ಧ್ವನಿ ಮೊಳಗುತ್ತಿದ್ದಂತೆ ಗ್ರಾಪಂ ಅಧ್ಯಕ್ಷ ಸುನೀಲ್ ಸಾಲ್ಯಾನ್ ಬೇಂಗಾಯಿ ನೇಜಿ ಗದ್ದೆಗೆ ನೀಡಿದರು. ಹಳೇ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಶಿಕ್ಷಕರು, ವಿದ್ಯಾಭಿಮಾನಿಗಳು ಜತೆಗೂಡಿ ಸಾಂಪ್ರದಾಯಿಕ ಪಾಡ್ದನ ಕೇಳುತ್ತ ನೇಜಿ ನೆಟ್ಟು ಖುಷಿಪಟ್ಟರು.

ಎರಡು ಕ್ವಿಂಟಾಲ್ ಅಕ್ಕಿ ನಿರೀಕ್ಷೆ
ಕೆಲವೇ ದಿನದಲ್ಲಿ ಗಟ್ಟಿ ಮಣ್ಣು ಹದ ಮಾಡಿ ಗದ್ದೆ ಸಿದ್ಧಪಡಿಸಲಾಗಿತ್ತು. ಸುಮಾರು 15 ಸಾವಿರ ರೂ. ವರೆಗೆ ತಗಲುವ ಖರ್ಚನ್ನು ಊರವರೇ ಭರಿಸಿದ್ದಾರೆ. ಸುಮಾರು ಎರಡು ಕ್ವಿಂಟಾಲ್ ಅಕ್ಕಿ ನಿರೀಕ್ಷಿಸಲಾಗಿದೆ. ಮಕ್ಕಳು ತಾವೇ ಕೈ ಕೆಸರಾಗಿಸಿ ಬೆಳೆಸಿದ ಪೈರಿನಿಂದ ಬಂದ ಅಕ್ಕಿ ಎರಡು ತಿಂಗಳು ಬಿಸಿಯೂಟಕ್ಕೆ ಪ್ರಯೋಜನ ಬರಲಿದೆ ಎನ್ನುತ್ತಾರೆ ಶಿಕ್ಷಕರು, ಹಿಂದಿನ ಸಂಪ್ರದಾಯದಂತೆ ಹೊಸ ಅಕ್ಕಿ ಊಟ ಮಾಡುವ ಇರಾದೆಯೂ ಅವರಲ್ಲಿದೆ.

ಸರ್ಕಾರಿ ಶಾಲೆಯಲ್ಲಿ ಅಧ್ಯಾಪಕರು, ಸ್ಥಳೀಯರು ಶಾಲೆ ಬೆಳವಣಿಗೆಗೆ ಸಹಕಾರ ನೀಡುತ್ತಾರೆ. ಇದರೊಂದಿಗೆ ಮಕ್ಕಳು ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ. ಮಕ್ಕಳು ಗದ್ದೆ ಕೃಷಿ ಅನುಭವ ಪಡೆಯಬೇಕೆಂಬ ಉದ್ದೇಶದಿಂದ ಅಕ್ಕಿ ಹೇಗೆ ಬೆಳೆಯುತ್ತೇವೆ ಎಂಬ ಕಲ್ಪನೆ ನೀಡುವ ದೃಷ್ಟಿಯಿಂದ ಗದ್ದೆ ಕೃಷಿ ಮಾಡಿದ್ದೇವೆ.
ಲೀಲಾವತಿ ಕೆ., ಪ್ರಭಾರ ಮುಖ್ಯ ಶಿಕ್ಷಕಿ, ಪಿಲಿಗೂಡು ಸರ್ಕಾರಿ ಶಾಲೆ

ಎಲ್ಲರ ಸಹಕಾರದಿಂದ ಶಾಲೆಯಲ್ಲಿ ಹೊಸ ಕಲ್ಪನೆ ಅಳವಡಿಸಿದ್ದೇವೆ. ಮಕ್ಕಳು ಇದರ ಪ್ರಯೋಜನ ಪಡೆಯುವುದರೊಂದಿಗೆ ಕೃಷಿಯೆಡೆಗೆ ಒಲವು ಬೆಳೆಸುವ ಉದ್ದೇಶ ನಮ್ಮದು. ವಿಮುಖವಾಗುತ್ತಿರುವ ಕೃಷಿಗೆ ಮತ್ತೆ ಪುನಶ್ಚೇತನ ಒದಗಿಸುವ ಸಣ್ಣ ಪ್ರಯತ್ನದೊಂದಿಗೆ ಮಕ್ಕಳಲ್ಲಿ ಕೃಷಿ ಆಸಕ್ತಿ ಬೆಳೆಸುವುದು ಇದರ ಆಶಯ.
ಇಸ್ಮಾಯಿಲ್, ಎಸ್‌ಡಿಎಂಸಿ ಅಧ್ಯಕ್ಷ

Leave a Reply

Your email address will not be published. Required fields are marked *