ಬಾಲಕರ ಶಾಲೆಗೆ ಪಾರಂಪರಿಕ ಶಾಲೆ ಸ್ಥಾನ ಮಾನ

ಎನ್.ಆರ್.ಪುರ: ತಾಲೂಕಿನ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಪಾರಂಪರಿಕ ಶಾಲೆಯ ಗೌರವ ಸಂದಿದೆ.

1889ರ ಬ್ರಿಟಿಷರ ಕಾಲದಲ್ಲಿ ಸ್ಥಾಪಿತವಾಗಿರುವ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ 130ಕ್ಕೂ ಅಧಿಕ ವರ್ಷ ಪೂರೈಸಿದ್ದು, 2018-19 ನೇ ಸಾಲಿನ ವಿಶೇಷ ಪುರಸ್ಕಾರಕ್ಕೆ ಭಾಜನವಾಗಿದೆ.

100 ವರ್ಷ ಪೂರೈಸಿದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ‘ಪಾರಂಪರಿಕ ಶಾಲೆ’ಗಳು ಎಂದು ಗುರುತಿಸಿ ಸೂಕ್ತ ಸ್ಥಾನಮಾನ ನೀಡುವ ಜತೆಗೆ ಇಂತಹ ಐತಿಹಾಸಿಕ ಶಾಲೆಗಳ ಸಂರಕ್ಷಣೆ ಹಾಗೂ ಶಾಲಾ ಕಟ್ಟಡ ದುರಸ್ತಿ ಹಾಗೂ ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿ ಶಾಲೆಗಳಿಗೆ 2.50 ಲಕ್ಷ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಎನ್.ಆರ್.ಪುರ, ಕಡೂರು ತಾಲೂಕಿನ ತಲಾ ಒಂದು ಶಾಲೆ ಹಾಗೂ ಚಿಕ್ಕಮಗಳೂರಿನ ಒಂದು ಪ್ರೌಢಶಾಲೆ ಈ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.

ಶಾಲೆಯ ಹಳೇ ವಿದ್ಯಾರ್ಥಿ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಹಳೇ ವಿದ್ಯಾರ್ಥಿ ಸಂಘವನ್ನು ಹುಟ್ಟುಹಾಕಿ ಈ ಮೂಲಕ ಶಾಲೆಗೆ 8.50 ಲಕ್ಷ ರೂ.ಅನುದಾನ ತಂದು ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾದರು. ತಾಲೂಕಿಗೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಪಾಠ ಶಾಲೆಗೆ ಪಾರಂಪರಿಕ ಶಾಲೆ ಸ್ಥಾನ ದೊರೆತಿರುವುದು ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.

ಶಾಲೆಯಲ್ಲಿದ್ದಾರೆ 320ಕ್ಕೂ ಹೆಚ್ಚು ಮಕ್ಕಳು :ಪ್ರಸುತ್ತ ಶಾಲೆಯಲ್ಲಿ 320 ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಹಳೇ ವಿದ್ಯಾರ್ಥಿ ಸಂಘದಿಂದ ಶಾಲಾ ಮಕ್ಕಳಿಗೆ ಉಚಿತ ಟೈ, ಬೆಲ್ಟ್ ಹಾಗೂ ಪೀಠೋಪಕರಣಗಳನ್ನು ನೀಡಲಾಗುತ್ತಿದೆ. 1ನೇ ತರಗತಿಯಿಂದ 7ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಜಾರಿಗೆ ತರಲಾಗಿದೆ. ಈ ಪ್ರಸಕ್ತ ಸಾಲಿನಿಂದ ಎಲ್​ಕೆಜಿ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ.

ಈ ಶಾಲೆ ಯಾವುದೇ ಖಾಸಗಿ ಶಾಲೆಗಳೂ ಕಮ್ಮಿ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಅಧಿಕವಾಗಿದೆ. ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕೂಡ ಪ್ರಾರಂಭಿಸಲಾಗಿದೆ. ಶಾಲೆಯಲ್ಲಿ ಓದಿದ ಹಲವಾರು ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಾಲಾಭಿವೃದ್ಧಿ ಸಮಿತಿಯು ಕ್ರಿಯಾಶೀಲವಾಗಿದ್ದು ಶಾಲೆಯ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿದೆ. ಈ ಸಮಿತಿ ಪಾರಂಪರಿಕ ಶಾಲೆಗೆ ಘೊಷಿಸಿರುವ 2.50 ಲಕ್ಷ ರೂ. ಅನುದಾನದಲ್ಲಿ ಶಾಲೆಗೆ ಅಗತ್ಯ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಿ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಬೇಕಿದೆ.