ಶುಲ್ಕ ಕಟ್ಟದಿದ್ದಕ್ಕೆ ಎಂಜಲು ನೀರು ಎರಚಿ ಹಲ್ಲೆ! ನಾಲ್ಕು ದಿನದಿಂದ ವಿದ್ಯಾರ್ಥಿ ನಾಪತ್ತೆ

ಚಾಮರಾಜನಗರ: ಶಾಲಾ ಶುಲ್ಕ ಕಟ್ಟಲಿಲ್ಲವೆಂದು ಕೋಪಗೊಂಡ ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿ ಮೇಲೆ ಎಂಜಲು ನೀರು ಎರಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಸಂತ್ರಸ್ತ ಬಾಲಕ ನಾಪತ್ತೆಯಾಗಿ ಪಾಲಕರಲ್ಲಿ ಆತಂಕ ಮೂಡಿಸಿದ್ದಾನೆ.

ಕೊಳ್ಳೇಗಾಲದಲ್ಲಿ ಶಾಲಾ ಆಡಳಿತ ಮಂಡಳಿಯ ಖಜಾಂಚಿ S.N. ಪ್ರಸಾದ್ ಎಂಬವರು ಶುಲ್ಕ ಕಟ್ಟದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ. ಇದರಿಂದ ನೊಂದ ವಿದ್ಯಾರ್ಥಿ ಮನೋಜ್ ಮನೆ ಬಿಟ್ಟು ಹೋಗಿದ್ದಾನೆ.

ಕೊಳ್ಳೇಗಾಲದ ಲಯನ್ಸ್ ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮನೋಜ್, ಶಾಲೆಗೆ ಶುಲ್ಕ ಕಟ್ಟುವುದು ತಡವಾಗಿತ್ತು. ಇದರಿಂದಾಗಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದ್ದು, ನಾಲ್ಕು ದಿನಗಳಿಂದ ಮನೋಜ್‌ ನಾಪತ್ತೆಯಾಗಿದ್ದಾನೆ.

ಮಗ ಮನೆ ಬಿಟ್ಟು ಹೋಗಿರುವುದಕ್ಕೆ ಕಂಗಾಲಾಗಿರುವ ಪಾಲಕರು ಮಗನ ಮಲೆ ಹಲ್ಲೆ ಮಾಡಿರುವ ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆಯ ಖಜಾಂಚಿ ಪ್ರಸಾದ್ ವಿರುದ್ಧ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)