ಡ್ರಾಪ್ ಔಟ್ ಮಕ್ಕಳು ಶಾಲೆಗೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಶಾಲೆಯಿಂದ ಡ್ರಾಪ್ ಔಟ್ ಆದ ಮಕ್ಕಳ ವಿವರ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ಬಳಿಕ ಎಚ್ಚೆತ್ತಿರುವ ಶಿಕ್ಷಣ ಇಲಾಖೆ ಡ್ರಾಪ್ ಔಟ್ ಮಕ್ಕಳನ್ನು ಗುರುತಿಸಲು ಮುಂದಾಗಿದೆ. 14 ವರ್ಷದೊಳಗಿನ ಮಕ್ಕಳು ಶಾಲೆ ಬಿಡಲು ಕಾರಣ, ಇರುವ ಸಮಸ್ಯೆ ಹಾಗೂ ಮರಳಿ ಶಾಲೆಗೆ ಸೇರಿಸಿ ವರದಿ ನೀಡುವಂತೆ ಕೋರ್ಟ್ ಸೂಚಿಸಿದ್ದರಿಂದ ಮಕ್ಕಳನ್ನು ಮರಳಿ ಕರೆ ತರುವ ಕೆಲಸ ನಡೆಯುತ್ತಿದೆ.

ಶಾಲೆಯಿಂದ ಡ್ರಾಪ್ ಔಟ್ ಆದ ಮಗುವಿನ ಮನೆಗೆ ಶಿಕ್ಷಕರು 3-4 ಬಾರಿ ಭೇಟಿ ನೀಡಿ ಮಗು ಹಾಗೂ ಪಾಲಕರ ಮನ ಪರಿವರ್ತನೆ ಮಾಡಿ, ಶಾಲೆಗೆ ಮರಳಿ ತರುವ ಪಯತ್ನ ನಡೆಯುತ್ತಿದ್ದು, ನಾಲ್ವರು ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಶಿಕ್ಷಕರು ಯಶಸ್ವಿಯಾಗಿದ್ದಾರೆ. ಶಾಲೆಗೆ ಬರಲಾಗದ ವಿಶೇಷ ಮಕ್ಕಳಿಗೆ ಮನೆಯಲ್ಲೇ ಶಿಕ್ಷಣ ವ್ಯವಸ್ಥೆಗೂ ಇಲಾಖೆ ಮುಂದಾಗಿದೆ.

ತೆಕ್ಕಟ್ಟೆ, ಶಂಕರನಾರಾಯಣ, ಬೈಂದೂರು ಭಾಗಗಳಲ್ಲಿ ಹಾಗೂ ವಲಸೆ ಕಾರ್ಮಿಕರ ಮಕ್ಕಳು ಶಾಲೆಯಿಂದ ಡ್ರಾಪ್ ಔಟ್ ಆಗಿದ್ದಾರೆ. ಮೂಲನಿವಾಸಿಗಳ ಕಾಲನಿ ಪರಿಸರದಲ್ಲಿ ಶಾಲೆ ಬಿಟ್ಟ ಮಕ್ಕಳಿದ್ದು, ಕೊರಗ ಶ್ರೇಯೋಭಿವೃದ್ಧಿ ಸಮಿತಿ ಸಂಚಾಲಕ ಗಣೇಶ್ ಕೊರಗ ಜತೆ ಶಿಕ್ಷಕರು ಮೂವರು ಮೂಲನಿವಾಸಿ ಮಕ್ಕಳನ್ನು ಕುಂಭಾಶಿ ನಮ್ಮ ಮನೆ ಶಾಲೆಗೆ ಸೇರಿಸಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಾಗಲಕೋಟೆ, ವಿಜಯಪುರ ಕಡೆಯಿಂದ ವಲಸೆ ಕಾರ್ಮಿಕರಾಗಿ ಕುಂದಾಪುರಕ್ಕೆ ಬಂದವರ ಮಕ್ಕಳು ಕೂಡ ಶಾಲೆಗೆ ಸೇರಿದ್ದು, ಅವರಲ್ಲಿ ಕೆಲವರು ಡ್ರಾಪ್ ಔಟ್ ಆಗಿದ್ದಾರೆ. ಅವರನ್ನು ಮರಳಿ ಶಾಲೆಗೆ ಕರೆತರುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ವಲಸೆ ಕಾರ್ಮಿಕರ ಮಕ್ಕಳ ಹುಡುಕಾಟ: ಇಲ್ಲಿನ ವಿಳಾಸ ನೀಡಿ ಸರ್ಕಾರಿ ಶಾಲೆಗೆ ಸೇರಿದವರು ತಂದೆ ತಾಯಿ ಮತ್ತೆಲ್ಲಿಗೋ ಕೆಲಸ ಹುಡುಕಿ ಹೋಗುವಾಗ ಮಕ್ಕಳನ್ನೂ ಕರೆದುಕೊಂಡು ಹೋಗುವುದರಿಂದ ಮಕ್ಕಳು ಶಾಲೆ ತೊರೆಯುತ್ತಿದ್ದಾರೆ. ಶಾಲೆಗೆ ಸೇರಿಸುವಾಗ ಕೊಟ್ಟ ವಿಳಾಸದಲ್ಲಿ ಪಾಲಕರು ಇರುವುದಿಲ್ಲ. ದೂರವಾಣಿ ಸಂಖ್ಯೆ ಕೂಡ ಪ್ರಯೋಜನಕ್ಕೆ ಬಾರದ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ಮಕ್ಕಳನ್ನು ಪತ್ತೆ ಹಚ್ಚುವುದೇ ಸಮಸ್ಯೆಯಾಗಿದೆ. ಒಟ್ಟಿನಲ್ಲಿ ಮರಳಿ ಬಾ ಶಾಲೆಗೆ, ಬಿಸಿಯೂಟ, ಸಮವಸ್ತ್ರ ಮೊದಲಾದ ಸವಲತ್ತುಗಳನ್ನು ಸರ್ಕಾರಿ ಶಾಲೆಗೆ ನೀಡಿದರೂ ಪಾಲಕರು ಅದರ ಪ್ರಯೋಜನ ಪಡೆಯದೆ ಮಕ್ಕಳನ್ನು ಶಾಲೆ ಬಿಡಿಸುತ್ತಿದ್ದಾರೆ. ಆರ್‌ಟಿಐ ನಿಯಮದ ಪ್ರಕಾರ ಮಕ್ಕಳು ಶಾಲೆ ಬಿಟ್ಟರೆ ಅದಕ್ಕೆ ಪಾಲಕರನ್ನು ಹೊಣೆ ಮಾಡಿ, ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶವಿದೆ.

ವಿಜಯವಾಣಿ ವರದಿಗೆ ಸ್ಪಂದನೆ: ಶಾಲೆ ತೊರೆದ ಇಬ್ಬರು ಮಕ್ಕಳನ್ನು ಮರಳಿ ಶಾಲೆಗೆ ತರುವಲ್ಲಿ ‘ವಿಜಯವಾಣಿ’ ಯಶಸ್ವಿಯಾಗಿದೆ. ಇಬ್ಬರೂ ಮೂಲನಿವಾಸಿ ಬಾಲಕಿಯರಾಗಿದ್ದು, ಒಬ್ಬಾಕೆ ಕೆದೂರು ಪ್ರೌಢಶಾಲೆಯಲ್ಲಿ 10ನೇ ತರಗತಿ ಸೇರಿಕೊಂಡರೆ, ಮತ್ತೊಬ್ಬಳು ಕಿಡ್ನಿ ಸಮಸ್ಯೆಯಿಂದ ಶಾಲೆಯಿಂದ ದೂರ ಉಳಿದಿದ್ದು, ಮನೆಯಲ್ಲೇ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಬೈಂದೂರು ವಲಯ ಶಿಕ್ಷಣ ಇಲಾಖೆ ಮಾಡಿದೆ. ಜಡ್ಕಲ್ ಗ್ರಾಮದ ಬಾಲಕಿಗೆ 11 ವರ್ಷವಾಗಿದ್ದು, ತಂಗಿಯ ಪುಸ್ತಕ ನೋಡಿಕೊಂಡು ಅಕ್ಕ ಅಕ್ಷರಾಭ್ಯಾಸ ಮಾಡುತ್ತಿದ್ದಳು. ಬಾಲಕಿಯ ಅಕ್ಷರ ಜ್ಞಾನ ಕಂಡ ಕುಂದಾಪುರ ಆರೋಗ್ಯ ಅಧಿಕಾರಿ ಡಾ.ನಾಗಭೂಷಣ, ಉಡುಪಿ ಜಡ್ಕಲ್ ಶಾಲೆ ಮುಖ್ಯಶಿಕ್ಷಕರ ಜತೆ ಚರ್ಚಿಸಿ ಶಿಕ್ಷಣದ ವ್ಯವಸ್ಥೆಗೆ ಮನವಿ ಮಾಡಿದ್ದರು. ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಬಾಲಕಿ ಮನೆಗೆ ಹೋಗಿ ಶಿಕ್ಷಣ ನೀಡುವ ವ್ಯವಸ್ಥೆಗೆ ಬೈಂದೂರು ಬಿಒ ಜತೆ ಮಾತನಾಡಿ, ಮನೆಯಲ್ಲೇ ಶಿಕ್ಷಣ ವ್ಯವಸ್ಥೆ ಮಾಡಲಾಗಿತ್ತು.

ಡ್ರಾಪ್ ಔಟ್ ಆದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ತರುವಲ್ಲಿ ಬಿಆರ್‌ಒ, ಶಿಕ್ಷಕರು ಪ್ರಯತ್ನ ಮಾಡುತ್ತಿದ್ದು, ಈಗಾಗಲೇ ನಾಲ್ವರು ಮಕ್ಕಳನ್ನು ಮರಳಿ ಶಾಲೆಗೆ ತರುವಲ್ಲಿ ಶಿಕ್ಷಣ ಇಲಾಖೆ ಯಶಸ್ವಿಯಾಗಿದೆ. ಕೆದೂರು ಶಾಲೆ ಸೇರಿದ ಬಾಲಕಿ ನಿರಂತರ ಶಾಲೆಗೆ ಬರುತ್ತಿದ್ದು, ಶಿಕ್ಷಕರು ವಿಶೇಷ ಆಸಕ್ತಿ ವಹಿಸಿದ್ದು, ಬಾಲಕಿ ಕೂಡ ಸೃಜನಾತ್ಮಕವಾಗಿ ಸ್ಪಂದಿಸುತ್ತಿದ್ದಾಳೆ. ಡ್ರಾಪ್ ಔಟ್ ಆದ ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಮರಳಿ ತರುವುದೇ ದೊಡ್ಡ ಸಮಸ್ಯೆಯಾಗಿದ್ದು, ಅವರು ತಂದೆ ತಾಯಿ ಕೆಲಸಕ್ಕೆ ಬಂದಾಗ ಇಲ್ಲಿ ಮಕ್ಕಳು ಶಾಲೆ ಸೇರಿ ಅವರು ಊರಿಗೆ ಮರಳುವಾಗ ಶಾಲೆ ತೊರೆಯುತ್ತಾರೆ.
ಅಶೋಕ್ ಕಾಮತ್ ಕ್ಷೇತ್ರ ಶಿಕ್ಷಣಾಧಿಕಾರಿ, ಕುಂದಾಪುರ

ಕುಂದಾಪುರ ತಾಲೂಕಿನಲ್ಲಿ ಡ್ರಾಪ್ ಔಟ್ ಆದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ತರುವ ಪ್ರಯತ್ನದಲ್ಲಿ ಭಾಗಶಃ ಯಶಸ್ಸು ಕಂಡಿದ್ದು, ಬಿಆರ್‌ಒ ಹಾಗೂ ಶಿಕ್ಷಕರು ಮಕ್ಕಳು ಹಾಗೂ ಪಾಲಕರ ಮನವೊಲಿಸಿ, ಅವರ ಸಮಸ್ಯೆ ಅರಿತು ಮರಳಿ ಶಾಲೆಗೆ ಕರೆ ತರುತ್ತಿದ್ದಾರೆ. ನಾಲ್ಕು ಮಕ್ಕಳನ್ನು ಶಾಲೆಗೆ ಕರೆತಂದಿದ್ದು, ನಾಲ್ಕು ಮಕ್ಕಳು ಮದರಸ ಹಾಗೂ ಮಾನಸ ವಿಶೇಷ ಶಾಲೆಗೆ ಸೇರಿದ್ದಾರೆ. ವಲಸೆ ಕಾರ್ಮಿಕರ ಮಕ್ಕಳನ್ನು ಪತ್ತೆ ಮಾಡುವುದೇ ದೊಡ್ಡ ಸಮಸ್ಯೆ. ಆ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಿದರೆ ಉತ್ತಮ.
ಸದಾನಂದ ಬೈಂದೂರು ಬಿಆರ್‌ಒ, ಕುಂದಾಪುರ