ಕಸ್ತೂರಿ ರಂಗನ್ ವರದಿ ವಿರೋಧಿಸಿ ಬಾಳೆಹೊನ್ನೂರು ಬಂದ್

ಬಾಳೆಹೊನ್ನೂರು: ಮಲೆನಾಡಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ವರದಿ ವಿರೋಧಿ ಸಮಿತಿ ಶನಿವಾರ ಕರೆ ನೀಡಿದ್ದ ಬಾಳೆಹೊನ್ನೂರು ಬಂದ್​ಗೆ ಜನಬೆಂಬಲ ವ್ಯಕ್ತವಾಯಿತು.

ಶನಿವಾರ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಬೆಂಬಲ ಸೂಚಿಸಿದರು. ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಸಾರ್ವಜನಿಕರು, ರೈತರು ಪ್ರತಿಭಟನಾ ಮೆರವಣಿಗೆ ನಡೆಸಿ ಬಸ್​ನಿಲ್ದಾಣದ ಆವರಣದಲ್ಲಿ ಸಮಾವೇಶ ನಡೆಸಿದರು.

ಸಮಾವೇಶದಲ್ಲಿ ಪರಿಸರ ಹೋರಾಟಗಾರ ಕಲ್ಕುಳಿ ವಿಠ್ಠಲ್​ಹೆಗ್ಡೆ ಮಾತನಾಡಿ, ಕಸ್ತೂರಿ ರಂಗನ್ ಯೋಜನೆ ಎಂದರೆ ಏನು ಎಂದು ಪಶ್ಚಿಮಘಟ್ಟದವರಿಗೆ ಇದೂವರೆಗೆ ಗೊತ್ತಿಲ್ಲ. ಕೇಂದ್ರ ಪರಿಸರ ಇಲಾಖೆ ಹೊರಡಿಸಿರುವ ವರದಿ ಇನ್ನೂ ನಮ್ಮ ಮಾತೃಭಾಷೆ ಅಥವಾ ರಾಜ್ಯ ಸರ್ಕಾರದ ಗೆಜೆಟ್​ನಲ್ಲಿ ಹೊರಡಿಸಿಲ್ಲ. ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿಲ್ಲ. ಕೇರಳ ಬಿಟ್ಟರೆ ಉಳಿದ ಯಾವ ರಾಜ್ಯಗಳೂ ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿಲ್ಲ ಎಂದು ದೂರಿದರು.

ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀಗುಣನಾಥ ಸ್ವಾಮೀಜಿ ಮಾತನಾಡಿ, ಮಲೆನಾಡಿನ ಪರಿಸರದಿಂದ ಇಲ್ಲಿನ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಅವರಿಂದ ಭೂಮಿ, ಪರಿಸರಕ್ಕೆ ಎಂದೂ ಘಾಸಿಯಾಗುವುದಿಲ್ಲ. ಮಲೆನಾಡಿಗೆ ಮಾರಕವಾದ ಯೋಜನೆಯನ್ನು ಒಕ್ಕೊರಲಿನಿಂದ ವಿರೋಧಿಸಬೇಕು ಎಂದರು.

ಯೋಜನೆ ವಿರೋಧಿಸದಿದ್ದರೆ ಇಲ್ಲಿನ ಜನರು ಗಂಟುಮೂಟೆ ಕಟ್ಟಿಕೊಂಡು ಹೋಗಬೇಕಾಗುತ್ತದೆ. ಈ ಹೋರಾಟಕ್ಕೆ ಮಠ ಮಂದಿರ, ಮಸೀದಿ, ಚರ್ಚ್​ಗಳು ಬೆಂಬಲ ನೀಡಬೇಕು. ಸಾರ್ವಜನಿಕರು ಸಂಪೂರ್ಣ ರಸ್ತೆ ಬಂದ್ ಮಾಡಿಸುವ ಮೂಲಕ ತೀವ್ರ ಸ್ವರೂಪದ ಹೋರಾಟಕೈಗೊಳ್ಳಬೇಕು ಎಂದು ಹೇಳಿದರು.

ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಮಹಮ್ಮದ್ ಹನೀಫ್, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ, ಜಿಪಂ ಸದಸ್ಯರಾದ ಎಸ್.ಎನ್.ರಾಮಸ್ವಾಮಿ, ಚಂದ್ರಮ್ಮ, ತಾಪಂ ಉಪಾಧ್ಯಕ್ಷ ಹೊಳೆಬಾಗಿಲು ಮಂಜು, ಸದಸ್ಯ ಟಿ.ಎಂ.ನಾಗೇಶ್, ಪ್ರವೀಣ್, ಭಾಗ್ಯಲಕ್ಷ್ಮೀ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ, ತಾಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್ ವೆನಿಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್, ಜಿಪಂ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್, ಸುಬ್ರಹ್ಮಣ್ಯ, ಹಿರಿಯಣ್ಣ ಇದ್ದರು.

ಎನ್​ಜಿಒಗಳ ಹಿಡಿತ: ಪರಿಸರ ಇಲಾಖೆ, ಅರಣ್ಯ ಇಲಾಖೆಗಳು ಎನ್​ಜಿಒಗಳ ಕಪಿಮುಷ್ಠಿಯಲ್ಲಿವೆ. ಅಧಿಕಾರಿಗಳಿಗೆ ಸರ್ಕಾರ ನೀಡುವ ವರದಿ ಮುಖ್ಯವಲ್ಲ. ಕುದುರೆಮುಖದಲ್ಲಿ 2002ರಿಂದಲೇ ಹುಲಿ ಸಂರಕ್ಷಣೆಗೆ ಎನ್​ಜಿಒಗಳು ಕೋಟ್ಯಂತರ ರೂ. ಹಣ ವ್ಯಯಿಸುತ್ತಿದ್ದಾರೆ. ಆದರೆ ಕುದುರೆಮುಖ ಅರಣ್ಯ ಉದ್ಯಾನವನದಲ್ಲಿ ಹುಲಿಯೇ ಇಲ್ಲ ಎಂಬುದನ್ನು ಅಧಿಕಾರಿಗಳು, ಎನ್​ಜಿಒಗಳು ತಿಳಿಯಬೇಕು ಎಂದು ಕಲ್ಕುಳಿ ವಿಠ್ಠಲ್​ಹೆಗ್ಡೆ ತಿಳಿಸಿದರು. ಕೇಂದ್ರ, ರಾಜ್ಯ ಸರ್ಕಾರಗಳಿಂದ ಪರಿಸರ ಯೋಜನೆ ಜಾರಿಯಾಗುವುದಿಲ್ಲ. ಎನ್​ಜಿಒಗಳ ಷಡ್ಯಂತ್ರ, ಒತ್ತಡದಿಂದ ಯೋಜನೆ ಜಾರಿಯಾಗಲಿದೆ. ಪರಿಸರ, ಜೀವವೈವಿಧ್ಯ ರಕ್ಷಣೆ ಮಾಡುವುದು ಕೇವಲ ಮಲೆನಾಡಿಗರ ಕರ್ತವ್ಯವಲ್ಲ. ನಗರದಲ್ಲಿ ಪರಿಸರದ ಮೇಲೆ ಮಾರಕವಾಗಿ ಕಾರ್ಯನಿರ್ವಹಣೆ ಮಾಡುವವರ ಮೇಲೆ ಮಾಧವ ಗಾಡ್ಗೀಳ್, ಕಸ್ತೂರಿ ರಂಗನ್ ವರದಿ ಪ್ರಯೋಗಮಾಡಬೇಕು ಎಂದರು.