ಬೆಂಗಳೂರು: ಬೇಸಿಗೆ ರಜೆ ಅವಧಿಯಲ್ಲಿ ರಾಜ್ಯದ 31 ಜಿಲ್ಲೆಗಳ 223 ಬರಪೀಡಿತ ತಾಲ್ಲೂಕುಗಳಲ್ಲಿ 1ರಿಂದ 8ನೇ ತರಗತಿಯ ಮಕ್ಕಳಿಗೆ 41 ದಿನಗಳ ಬೇಸಿಗೆ ರಜೆಯಲ್ಲಿ ಮಧ್ಯಾಹ್ನದ ಬಿಸಿಯೂಟ ವಿತರಣೆಗೆ 73.93 ಕೋಟಿ ರೂ.ಗಳನ್ನು ಶಾಲಾ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿದೆ.
ಜಿಲ್ಲಾ ಮತ್ತು ತಾಲ್ಲೂಕುವಾರು ಈಗಾಗಲೇ ಸಲ್ಲಿಸಿರುವ ಅನುದಾನ ಬೇಡಿಕೆ ಮತ್ತು ಹಂಚಿಕೆ ಪಟ್ಟಿಯಂತೆ ಅನುದಾನ ನಿಗದಿ ಮಾಡಿ ಬಿಡುಗಡೆಗೊಳಿಸಲಾಗಿದೆ.
ಆಹಾರ ಧಾನ್ಯಗಳ ವೆಚ್ಚ, ಆಹಾರ ಧಾನ್ಯಗಳ ಸಾಗಾಣಿಕಾ ವೆಚ್ಚ, ಅಡುಗೆ ತಯಾರಿಕಾ ವೆಚ್ಚದ ದರ ಸೇರಿ 1ರಿಂದ 5ನೇ ತರಗತಿ ಮಕ್ಕಳಿಗೆ 5.45 ರೂ. ಮತ್ತು 6ರಿಂದ 8ನೇ ತರಗತಿ ಮಕ್ಕಳಿಗೆ 8.17 ರೂ.ಗಳನ್ನು ನಿಗದಿ ಮಾಡಲಾಗಿದೆ.
ಮಾ.31ರೊಳಗೆ ಜಿಲ್ಲಾವಾರು ಮಾಹಿತಿಯನ್ನು ಸೂಕ್ತವಾಗಿ ಪರಿಶೀಲಿಸಿ ಮತ್ತು ದೃಢೀಕರಣದೊಂದಿಗೆ ರಾಜ್ಯ ಕಚೇರಿಗೆ ಮಾ.31ರೊಳಗೆ ಕಳುಹಿಸಿಕೊಡುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.