ಕ್ರಿಕೆಟ್ ವೀಕ್ಷಣೆಗೆ ಶಾಲಾ ಮಕ್ಕಳ ದಂಡು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ಗುರುವಾರ ಭಾರತ ಹಾಗೂ ಶ್ರೀಲಂಕಾ ಎ ತಂಡಗಳ ನಡುವಿನ 4ನೇ ಏಕದಿನ ಪಂದ್ಯ ಮಳೆಯಿಂದ ರದ್ದುಗೊಂಡರೂ ಯುವಕರು ಹಾಗೂ ಶಾಲಾ ಮಕ್ಕಳನ್ನು ಆಕರ್ಷಿಸಿತ್ತು.

ಪಂದ್ಯ ವೀಕ್ಷಣೆಗೆ ಚಿನ್ಮಯ ವಿದ್ಯಾಲಯ ಹಾಗೂ ಜೆಎಸ್​ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳು ಆಗಮಿಸಿದ್ದರು. ಸಾರ್ವಜನಿಕರು ಹಾಗೂ ಕಾಲೇಜ್ ವಿದ್ಯಾರ್ಥಿಗಳೂ ಇದ್ದರು. ಇಲ್ಲಿ ನಡೆದ ರಣಜಿ ಹಾಗೂ ಪ್ರಥಮ ದರ್ಜೆ ಪಂದ್ಯಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ಸು ಕಂಡಿರಲಿಲ್ಲ. ಕಳೆದ ವಾರವಷ್ಟೇ ನಡೆದಿದ್ದ ಭಾರತ-ಶ್ರೀಲಂಕಾ ಎ ತಂಡಗಳ ನಡುವಿನ ಚತುರ್ದಿನ ಟೆಸ್ಟ್ ಪಂದ್ಯ ಸಹ ಪ್ರೇಕ್ಷಕರ ಕೊರತೆ ಎದುರಿಸಿತ್ತು.

ಇದೀಗ ಎರಡು ರಾಷ್ಟ್ರಗಳ ನಡುವಿನ ಏಕದಿನ ಕ್ರಿಕೆಟ್ ಪ್ರೇಕ್ಷಕರನ್ನು ಸೆಳೆದಿದೆ. ಶಾಲಾ ವಿದ್ಯಾರ್ಥಿಗಳು ಹುಮ್ಮಸ್ಸಿ ನಿಂದ ಪಂದ್ಯವನ್ನು ವೀಕ್ಷಿಸಿದರು. ಇಂಡಿಯಾ… ಇಂಡಿಯಾ… ವಿ ವಾಂಟ್ ಸಿಕ್ಸರ್… ಸಿಂಗ್ ಇಸ್ ಕಿಂಗ್ (ರದ್ದಾದ ಪಂದ್ಯದಲ್ಲಿ ಅಜೇಯ 85 ರನ್ ಗಳಿಸಿದ ಅನ್ಮೋಲಪ್ರೀತ್ ಸಿಂಗ್ ಕುರಿತು) ಎಂದು ಕೂಗುತ್ತಿದ್ದರು. ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಕ್ರೇಜ್ ಅನಾವರಣಗೊಂಡಿತ್ತು. ಪಂದ್ಯ ಮಳೆಯಿಂದ ರದ್ದಾಗಿದ್ದು ಉತ್ಸಾಹಿ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದ್ದು ಸುಳ್ಳಲ್ಲ.

ರಾಹುಲ್ ದ್ರಾವಿಡ್ ಆಕರ್ಷಣೆ: ಭಾರತ ಕಿರಿಯರ ತಂಡ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕಳೆದ ಕೆಲ ದಿನಗಳಿಂದ ಭಾರತ ಎ ತಂಡ ಜತೆ ಹುಬ್ಬಳ್ಳಿಯಲ್ಲಿ ಇದ್ದಾರೆ. ಇಂದು ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯತ್ತ ತೆರಳಿ ಶಾಲಾ ಮಕ್ಕಳಿಗೆ ಹಸ್ತ ಲಾಘವ ಮಾಡಿದರು. ಇದರಿಂದ ಪುಳಕಿತರಾದ ಮಕ್ಕಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಮಳೆಯಿಂದ ಬೆಳಗ್ಗೆ 9 ಗಂಟೆಯ ಬದಲು ಮಧ್ಯಾಹ್ನ 1.15ಕ್ಕೆ ಪಂದ್ಯ ಆರಂಭಗೊಂಡಿತ್ತು. ಪಂದ್ಯ ಆರಂಭಕ್ಕೂ ಮುನ್ನ ನೆಚ್ಚಿನ ಆಟಗಾರರನ್ನು ಕಾಣಲು ಮೈದಾನದ ಗೇಟ್ ನಂ. 1ರ ಬಳಿ ಅಭಿಮಾನಿಗಳು ಕಾದಿದ್ದರು. ಗೇಟ್ ನಂ. 1ರಿಂದ ಸಾರ್ವಜನಿಕರಿಗೆ ಪ್ರವೇಶ ನಿಷೇಧ. ಆಟಗಾರರು, ಮಾಧ್ಯಮ ಹಾಗೂ ಅಧಿಕಾರಿಗಳಿಗೆ ಮಾತ್ರ ಪ್ರವೇಶ. ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರುವ ಗೇಟ್ ನಂ. 2ರ ಬದಲು ಆಟಗಾರರನ್ನು ಹತ್ತಿರದಿಂದ ಕಾಣಲು ಅಭಿಮಾನಿಗಳು ಗೇಟ್ ನಂ. 1ರ ಬಳಿ ಸೇರಿದ್ದರು.

ಮರು ಪಂದ್ಯ ಇಂದು: ಗುರುವಾರ ನಡೆದ ಭಾರತ ಹಾಗೂ ಶ್ರೀಲಂಕಾ ಎ ತಂಡಗಳ ನಡುವಿನ 4ನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಪೂರ್ಣವಾಗಿ ರದ್ದು ಪಡಿಸಲಾಗಿದೆ. ಉಭಯ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳ ನಡುವಿನ ಒಪ್ಪಂದದಂತೆ ಮೀಸಲು ದಿನ (ಶುಕ್ರವಾರ)ದಂದು ಹೊಸದಾಗಿ ಮರು ಪಂದ್ಯ ನಡೆಸಲು ಅವಕಾಶವಿದೆ. ಇದೇ ಮೈದಾನ (ರಾಜನಗರ)ದಲ್ಲಿ ಜೂ. 14ರಂದು 4ನೇ ಹಾಗೂ 15ರಂದು 5ನೇ ಏಕದಿನ ಪಂದ್ಯ ನಡೆಯಲಿದೆ ಎಂದು ಕೆಎಸ್​ಸಿಎ ಧಾರವಾಡ ವಲಯ ಸಂಚಾಲಕ ಬಾಬಾ ಭೂಸದ ತಿಳಿಸಿದ್ದಾರೆ.

Leave a Reply

Your email address will not be published. Required fields are marked *