ಮಕ್ಕಳ ಮಧ್ಯಾಹ್ನದ ಊಟಕ್ಕೆ ಶಾಲೆಯಲ್ಲಿ ದನದ ಮಾಂಸ ಬೇಯಿಸಿದ್ದ ಶಿಕ್ಷಕ ಬಂಧನ

ಗುವಾಹಟಿ: ಆಸ್ಸಾಂನ ಡರಾಂಗ್ ಜಿಲ್ಲೆಯ ಶಾಲೆಯಲ್ಲಿ ದನದ ಮಾಂಸ ಬೇಯಿಸಿದ್ದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಢಾಕಿನ್ ದುಲಿಯಾಪಾರಾ ಪ್ರಾಥಮಿಕ ಶಾಲೆಯ ಶಿಕ್ಷಕ ನಾಸೀರುದ್ದೀನ್ ಅಹ್ಮದ್​ ಮಕ್ಕಳ ಮಧ್ಯಾಹ್ನದ ಊಟಕ್ಕಾಗಿ ಶಾಲೆಯಲ್ಲಿಯೇ ಹಸುವಿನ ಮಾಂಸ ಬೇಯಿಸಿದ್ದರು .

ಈ ಪ್ರದೇಶದಲ್ಲಿ ಅಲ್ಪಸಂಖ್ಯಾತರೇ ಹೆಚ್ಚಾಗಿದ್ದಾರೆ. ಶಾಲೆಯಲ್ಲಿ ಹಸುವಿನ ಮಾಂಸದ ಊಟ ಸಿದ್ಧಪಡಿಸುವ ಮೂಲಕ ಧರ್ಮದ ಆಧಾರದ ಮೇಲೆ ಮಕ್ಕಳಲ್ಲಿ ಶತೃತ್ವ ಭಾವನೆ ಹುಟ್ಟುಹಾಕುವುದಲ್ಲದೆ, ಧಾರ್ಮಿಕ ಭಾವನೆಯನ್ನು ಕೆರಳಿಸಿದ್ದಾರೆ ಎಂದು ನಾಸೀರುದ್ದೀನ್​ ವಿರುದ್ಧ ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ (ಡಿಇಇಒ) ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಂಧಿಸಿರುವ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

ಶಿಕ್ಷಕ ನಾಸೀರುದ್ದೀನ್ ಅವರು ಶಾಲೆಯ ಆಚರಣೆಗಳನ್ನು ಉಲ್ಲಂಘಿಸುವ ಜತೆಗೆ ಸಾಮಾಜಿಕ ನೈತಿಕತೆಯನ್ನು ಮೀರಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ ಕಚೇರಿ ಅಮಾನತುಗೊಳಿಸಿದೆ ಎಂದು ಡಿಇಇಒ ಜೆ.ತಬಸುಮ್​ ಹೇಳಿದ್ದಾರೆ.

ದನದ ಮಾಂಸವನ್ನು ಸೋಮವಾರ ಶಾಲೆ ಆವರಣದಲ್ಲಿ ಬೇಯಿಸಿದ್ದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಕ್ಕಳ ಮಧ್ಯಾಹ್ನದ ಊಟಕ್ಕೆ ಮಾಂಸದ ಅಡುಗೆ ಬೇಯಿಸಲು ಅವಕಾಶವಿಲ್ಲ. ನಾಸೀರುದ್ದೀನ್​ ಮಾಡಿದ ಕೆಲಸದಿಂದ ಮಕ್ಕಳಿಗೆ ಅಂದು ಊಟ ಸಿಕ್ಕಿಲ್ಲ. ಅವರನ್ನು ಅಮಾನತು ಮಾಡದೆ ಬೇರೆ ದಾರಿಯಿಲ್ಲ ಎಂದೂ ಅವರು ತಿಳಿಸಿದ್ದಾರೆ.