ಇಟ್ಟಮೇರಿ ಅಂಗನವಾಡಿ ಪುಟಾಣಿಗಳಿಗೆ ರೋಗಭೀತಿ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್

ಎಲ್ಲೆಡೆ ಶೌಚಗೃಹ ನಿರ್ಮಾಣವಾಗಬೇಕು. ಸ್ವಚ್ಛತೆ ಇರಬೇಕು ಎಂದು ಸರ್ಕಾರಿ ಕಚೇರಿ, ಇಲಾಖೆಗಳಲ್ಲಿ ದೊಡ್ಡ ದೊಡ್ಡ ಪ್ರಕಟಣಾ ಫಲಕ ಕಾಣುತ್ತೇವೆ. ಆದರೆ ಇಟ್ಟಮೇರಿ ಎಂಬಲ್ಲಿ ಪುಟಾಣಿ ಮಕ್ಕಳು ಉಪಯೋಗಿಸುವ ಶೌಚಗೃಹದ ಹೊಂಡ ತುಂಬಿ ಪೈಪ್ ಮೂಲಕ ತ್ಯಾಜ್ಯ ನೀರು ಹೊರ ಹೋಗಿ ಕೊಳಚೆಯಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಸಮಸ್ಯೆಯಾಗುತ್ತಿದ್ದರೂ ಇಲಾಖೆಯಾಗಲಿ, ಪಂಚಾಯಿತಿ ಆಡಳಿತವಾಗಲಿ ಗಮನ ನೀಡುತ್ತಿಲ್ಲ.

ಬೆಳ್ಮಣ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟ್ಟಮೇರಿಯಲ್ಲಿರುವ ಅಂಗನವಾಡಿ ಕೇಂದ್ರ ಸಮಸ್ಯೆಗಳನ್ನು ಹೊತ್ತು ನಿಂತಿದೆ. ರೋಗ ಭೀತಿಯಲ್ಲಿ ಶಿಕ್ಷಕರು, ಪುಟಾಣಿಗಳು ದಿನ ಕಳೆಯುವಂತಾಗಿದೆ. ಅಂಗನವಾಡಿ ಕೇಂದ್ರದ ಶೌಚಗೃಹ ಹೊಂಡ ಎರಡು ವರ್ಷಗಳಿಂದ ಬ್ಲಾಕ್ ಆಗಿದ್ದು, ಆ ಬಳಿಕ ಸ್ಥಳೀಯ ಫ್ರೆಂಡ್ಸ್ ಕ್ಲಬ್ ವತಿಯಿಂದ ಸರಿಪಡಿಸಲಾಗಿತ್ತು. ಆರು ತಿಂಗಳಿಂದ ಮತ್ತೆ ಶೌಚಗೃಹದ ಹೊಂಡ ತುಂಬಿದ್ದು, ಸಂಪೂರ್ಣ ಬ್ಲಾಕ್ ಆಗಿ ತ್ಯಾಜ್ಯ ನೀರು ಪೈಪ್ ಮೂಲಕ ನೇರವಾಗಿ ಬಯಲು ಪ್ರದೇಶ ಸೇರುತ್ತಿದೆ. ಇದರಿಂದ ಅಂಗನವಾಡಿ ಸುತ್ತಮುತ್ತ ಕೊಳಚೆ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಪರಿಸರದಲ್ಲಿ ಸೊಳ್ಳೆ ಕಾಟ ಶುರುವಾಗಿದೆ. ಈ ಸಮಸ್ಯೆಯನ್ನು ಹಲವು ಬಾರಿ ಸ್ಥಳೀಯಾಡಳಿತದ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಮನವಿ ನೀಡಿದರೂ ಯಾವುದೇ ಸ್ಪಂದನೆ ದೊರಕಿಲ್ಲ.

ಹತ್ತಿರದಲ್ಲೇ ವಿದ್ಯುತ್ ಪರಿವರ್ತಕ ಬೆಂಕಿ: ಶೌಚಗೃಹ ಸಮಸ್ಯೆ ಅಂಗನವಾಡಿಯ ಒಂದು ಸಮಸ್ಯೆಯಾದರೆ, ಪಕ್ಕದಲ್ಲೇ ಇರುವ ವಿದ್ಯುತ್ ಪರಿವರ್ತಕ(ಟಿ.ಸಿ) ಸದಾ ಬೆಂಕಿ ಉಗುಳುತ್ತಿದ್ದು, ಇನ್ನಷ್ಟು ಅಪಾಯಕ್ಕೆ ಎಡೆ ಮಾಡಿದೆ. ಬೇಸಿಗೆಯಲ್ಲಿ ಹಲವಾರು ಬಾರಿ ಬೆಂಕಿ ಆವರಿಸಿದ್ದೂ ಇದೆ. ಬೆಳ್ಮಣ್ ಮೆಸ್ಕಾಂ ಸಿಬ್ಬಂದಿ ಈ ಬಗ್ಗೆ ಗಮನ ಹರಿಸಬೇಕೆಂದು ಜನ ಆಗ್ರಹಿಸಿದ್ದಾರೆ.

ಕಟ್ಟಡದ ಮೇಲೆ ಮರದ ಗೆಲ್ಲು: ಅಂಗನವಾಡಿ ಕಟ್ಟಡದ ಮೇಲೆ ಬಾಗಿರುವ ಮರದ ಗೆಲ್ಲುಗಳೂ ಬೀಳುವ ಸ್ಥಿತಿಯಲ್ಲಿದೆ. ಜೋರು ಮಳೆ ಗಾಳಿ ಬರುವ ಸಂದರ್ಭ ಜೀವ ಭಯದಲ್ಲಿ ದಿನ ಕಳೆಯುವಂತಾಗಿದೆ. ಮರದ ಗೆಲ್ಲು ತೆರವು ಮಾಡುವಂತೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಸದ್ಯ ತ್ರಿಶಂಕು ಸ್ಥಿತಿಯಲ್ಲಿ ಅಂಗನವಾಡಿ ನಡೆಯುತ್ತಿದೆ. ಇಷ್ಟೆಲ್ಲ ಆತಂಕದ ಸ್ಥಿತಿ ಇದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಅಥವಾ ಇಲಾಖಾಧಿಕಾರಿಗಳು ಕ್ಯಾರೇ ಅನ್ನದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿನ ಶೌಚಗೃಹದ ಸಮಸ್ಯೆ ಹಲವು ಸಮಯದಿಂದ ಇದ್ದರೂ ಯಾರೊಬ್ಬರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಪುಟ್ಟ ಮಕ್ಕಳ ಜೀವದ ಜತೆ ಜನಪ್ರತಿನಿಧಿಗಳು ಆಟವಾಡುತ್ತಿದ್ದಾರೆ.
ಉಮೇಶ್ ಮೂಲ್ಯ ಸ್ಥಳೀಯ ನಿವಾಸಿ

ಇಟ್ಟಮೇರಿ ಅಂಗನವಾಡಿ ಸಮಸ್ಯೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದೆ. ಜಾಗದ ಸಮಸ್ಯೆಯಿದ್ದು ಶೌಚಗೃಹದ ಸಮಸ್ಯೆಯನ್ನು ಶೀಘ್ರ ಪರಿಹರಿಸುತ್ತೇವೆ.
ವಾರಿಜಾ

Leave a Reply

Your email address will not be published. Required fields are marked *