ಶಾಲಾ ಬಸ್​, ಬಿಎಂಟಿಸಿ ಬಸ್​ ನಡುವೆ ಡಿಕ್ಕಿ: ಡ್ರೈವರ್​ ಕಾಲಿಗೆ ಗಂಭೀರ ಗಾಯ

ಬೆಂಗಳೂರು: ಶಾಲಾ ಬಸ್​ ಮತ್ತು ಬಿಎಂಟಿಸಿ ಬಸ್​ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಶಾಲಾ ಬಸ್​ ಚಾಲಕನ ಕಾಲಿಗೆ ಗಂಭೀರವಾದ ಗಾಯವಾಗಿದೆ. ಅದೃಷ್ಟವಶಾತ್​ ಶಾಲಾ ಬಸ್​ನಲ್ಲಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಗರದ ಯಲಹಂಕ ನ್ಯೂಟೌನ್​ ಮುಖ್ಯರಸ್ತೆಯ ಶೆಷಾದ್ರಿಪುರ ಕಾಲೇಜು ಬಳಿ ಶುಕ್ರವಾರ ಬೆಳಗ್ಗೆ ಘಟನೆ ನಡೆದಿದೆ. ಅವಲಹಳ್ಳಿಯ ಪ್ರೆಸಿಡೆನ್ಸಿ ಶಾಲೆಗೆ ಸೇರಿದ ಬಸ್ ಯಲಹಂಕದಿಂದ ಮಕ್ಕಳನ್ನು ಕರೆದುಕೊಂಡು ಆವಲಹಳ್ಳಿ ಕಡೆಗೆ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಶಾಲಾ ವಾಹನ ಬಿಎಂಟಿಸಿ ಬಸ್​ಗೆ ಡಿಕ್ಕಿ ಹೊಡೆದಿದೆ.

ಶಾಲಾ ಬಸ್​ ಚಾಲಕ ಮಂಜುನಾಥ್​ನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ ಜತೆಗೆ ಶಾಲಾ ಬಸ್​ ಚಾಲಕ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ್ದ ಎಂದು ಆರೋಪಿಸಲಾಗಿದೆ. ಯಲಹಂಕ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.