More

    ಸಂಸ್ಕಾರಯುತ ಶಿಕ್ಷಣ ಬಹುಮುಖ್ಯ

    ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಡಾ.ಜಿ.ಭೀಮೇಶ್ವರ ಜೋಶಿ ಅಭಿಪ್ರಾಯ

    ವಿಜಯವಾಣಿ ಸುದ್ದಿಜಾಲ ನೆಲಮಂಗಲ
    ಶಿಕ್ಷಣ ಸಂಸ್ಥೆಗಳು ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ಸಮಾಜ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಡಾ.ಜಿ.ಭೀಮೇಶ್ವರ್ ಜೋಶಿ ಹೇಳಿದರು.
    ಬೆಂಗಳೂರು ಉತ್ತರ ತಾಲೂಕಿನ ನಂದರಾಮಯ್ಯನಪಾಳ್ಯದಲ್ಲಿ ಅನ್ನಪೂರ್ಣೇಶ್ವರಿ ಎಜುಕೇಷನ್ ಸೊಸೈಟಿ ಹಾಗೂ ಬ್ಲೂಮೂನ್ ಪಬ್ಲಿಕ್ ಶಾಲೆಯಿಂದ ಬುಧವಾರ ಹಮ್ಮಿಕೊಂಡಿದ್ದ ನೂತನ ಪ್ರೌಢಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಅವಿದ್ಯಾವಂತರು ಇಂದಿಗೂ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ವಿದ್ಯಾವಂತರಿಗೆ ಜೀವನ, ಜೀವನ ಶೈಲಿ ಬದಲಿಸಿಕೊಳ್ಳುವ ಸಾಮರ್ಥ್ಯವಿರುತ್ತದೆ. ವ್ಯಕ್ತಿಯ ಜೀವನಶೈಲಿ ಸುಧಾರಿಸಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಣ ಮುಖ್ಯ ಪಾತ್ರವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲವರು ಹೆಚ್ಚು ಹಣ ನೀಡಿ ವಿದ್ಯಾಭ್ಯಾಸ ಮಾಡಿದರೆ, ಹೆಚ್ಚು ವಿದ್ಯಾವಂತರಾಗುತ್ತಾರೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಅರಿವು, ಮಾನವೀಯ ಮೌಲ್ಯ, ಸಂಸ್ಕಾರ, ವಿನಯ, ಭಕ್ತಿ ಶ್ರದ್ಧೆ ಸೇರಿ ಹಲವು ಅಂಶಗಳನ್ನು ಕಲಿಸುವ ಕೆಲಸ ಶಿಕ್ಷಣ ಸಂಸ್ಥೆಗಳು ಮಾಡುಬೇಕಿದೆ ಎಂದರು.
    ಪಾಲಕರು ಮಕ್ಕಳಿಗೆ ಕಷ್ಟದ ಹಾಗೂ ಬೆವರಿನ ಅರಿವು ಮಾಡಿಸಿದಾಗ ಮಾತ್ರ ಮಕ್ಕಳಿಗೆ ಪಾಲಕರ ಕಷ್ಟ ತಿಳಿಯುತ್ತದೆ. ಶಾಲೆಯನ್ನು ದೇಗುಲ ಎಂದು ಭಾವಿಸುವ ವಿದ್ಯಾರ್ಥಿ ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸುತ್ತಾನೆ. ಬ್ಲೂಮೂನ್ ಶಾಲೆ ಬಡವ, ಕೂಲಿ ಕಾರ್ಮಿಕರ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ಒಳಗೊಂಡು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಇದನ್ನು ಸದುಪಯೋಗಪಡಿಸಿ, ಶೈಕ್ಷಣಿಕವಾಗಿ ಪ್ರಗತಿ ಕಾಣಬೇಕು ಎಂದರು.
    ಬ್ಲೂಮೂನ್ ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಪ್ರತಿಯೊಬ್ಬರೂ ವಿದ್ಯೆ ಕಲಿತಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಅವರಿಗೆ ಮೂಲಸೌಕರ್ಯ ಕಲ್ಪಿಸಿದಾಗ ವಿದ್ಯಾವಂತರಾಗುತ್ತಾರೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಬ್ಲೂಮೂನ್ ಪಬ್ಲಿಕ್ ಶಾಲೆ ಪ್ರಾರಂಭಿಸಿದ್ದು, ಇಂದು ಪ್ರೌಢಶಾಲೆ ಆರಂಭಿಸಲಾಗಿದೆ ಎಂದರು.
    ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್, ಗ್ರಾಪಂ ಸದಸ್ಯ ಎಂ.ಸಿ.ಗೋವಿಂದರಾಜು, ದೀಪಿಕಾ ದೇವರಾಜು, ನರೇಂದ್ರಬಾಬು, ಶಾಲಾ ಮುಖ್ಯಶಿಕ್ಷಕಿ ನಾಗರತ್ನಾ, ಶಿಕ್ಷಕಿ ಕೋಕಿಲಾ, ಪವಿತ್ರಾ, ರಮ್ಯಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts