More

  ಎಚ್​ಐವಿ ಮತ್ತು ಕುಷ್ಠರೋಗ ಪೀಡಿತರ ಮಕ್ಕಳ ಕಥೆ-ವ್ಯಥೆ: ವಿದ್ಯಾರ್ಥಿವೇತನ ಪಡೆಯಲು ಹಿಂದೇಟು!

  ಬೆಂಗಳೂರು: ಎಚ್​ಐವಿ ಮತ್ತು ಕುಷ್ಠರೋಗ ಪೀಡಿತರ ಮಕ್ಕಳು ಹಾಗೂ ರೋಗಕ್ಕೆ ತುತ್ತಾದ ಮಕ್ಕಳಿಗೆಂದೇ ಮೀಸಲಿರುವ ವಿದ್ಯಾರ್ಥಿವೇತನಕ್ಕಾಗಿ ಐದು ವರ್ಷದಲ್ಲಿ ಕೇವಲ 18 ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿದ್ದಾರೆ.

  ರಾಜ್ಯದಲ್ಲಿ 3.41 ಲಕ್ಷ ಐಎಚ್​ವಿ ಸೋಂಕಿತರಿದ್ದಾರೆ. ಶಿಕ್ಷಣ ಇಲಾಖೆ ವಿದ್ಯಾರ್ಥಿವೇತನ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದರೂ ಮುಜುಗರ ಮತ್ತು ಕೀಳರಿಮೆಯಿಂದಾಗಿ ಸೌಲಭ್ಯ ಪಡೆಯಲು ಮುಂದೆ ಬರುತ್ತಿಲ್ಲ.

  ಅರಿವಿನ ಕೊರತೆ: ತಾಂತ್ರಿಕ ಶಿಕ್ಷಣ ಇಲಾಖೆಯು ಪ್ರತಿ ವರ್ಷ ಸುತ್ತೋಲೆ ಹೊರಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ತಿಳಿಸುತ್ತದೆ. ಇದನ್ನು ಕಾಲೇಜುಗಳಲ್ಲಿ ಪ್ರಚಾರ ಮಾಡಲು ಸೂಚನೆ ನೀಡುತ್ತದೆಯಾದರೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಇದರ ಅರಿವು ಇಲ್ಲ. ಹಾಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಕಡಿಮೆ. ಒಮ್ಮೆ ಎಚ್​ಐವಿ ಸೋಂಕಿತರು, ಕುಷ್ಠರೋಗಿಗಳು ಅಥವಾ ಅವರ ಮಕ್ಕಳು ಎಂದು ಇತರ ಸಹಪಾಠಿಗಳಿಗೆ ತಿಳಿದರೆ ಅವರು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ ಎಂಬ ಭಯ ಮತ್ತು ಕೀಳರಿಮೆಯಿಂದ ಅರ್ಜಿ ಸಲ್ಲಿಸಲು ಹಿಂಜರಿಯುವವರೇ ಹೆಚ್ಚು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

  ಯಾರಿಗೆ ಎಷ್ಟು ವಿತರಣೆ: ತಾಂತ್ರಿಕ ಶಿಕ್ಷಣ ಇಲಾಖೆಯು 2014-15ರಿಂದ 2018-19ನೇ ಸಾಲಿನವರೆಗೆ ಪರಿಶಿಷ್ಟ ಜಾತಿಯ 18,150 ವಿದ್ಯಾರ್ಥಿಗಳು, ಪರಿಶಿಷ್ಟ ಪಂಗಡ 7,016 ಮತ್ತು 7950 ಸೈನಿಕರ ಮಕ್ಕಳ, ಶೇ.80ಕ್ಕಿಂತ ಹೆಚ್ಚು ಅಂಕಗಳಿಸಿದ ಬಿಪಿಎಲ್ ಕಾರ್ಡ್ ಹೊಂದಿರುವ 2,576, ಶಾಲಾ ಹಂತದಲ್ಲಿ ಹೆಚ್ಚಿನ ಅಂಕಗಳಿಸಿದ 3719 ಮಕ್ಕಳು ಸೇರಿ ಒಟ್ಟು 131.55 ಕೋಟಿ ರೂ. ವಿದ್ಯಾರ್ಥಿವೇತನ ನೀಡಿದೆ. ಇದರ ಹೊರತಾಗಿ ಎಚ್​ಐವಿ ಮತ್ತು ಕುಷ್ಠರೋಗ ಪೀಡಿತರ ಮಕ್ಕಳು ಹಾಗೂ ರೋಗಕ್ಕೆ ತುತ್ತಾದ 18 ವಿದ್ಯಾರ್ಥಿಗಳಿಗೆ ಒಟ್ಟು 11,75,625 ರೂ. ವಿತರಿಸಿದೆ.

  ಯೋಜನೆ ಹೆಸರು ಬದಲಿಸಲು ಮನವಿ: 2014-15ನೇ ಸಾಲಿನ ಬಜೆಟ್​ನಲ್ಲಿ ಈ ವಿದ್ಯಾರ್ಥಿವೇತನವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಎಚ್​ಐವಿ ಸೋಂಕು ಹಾಗೂ ಕುಷ್ಠರೋಗ ಪೀಡಿತರಿಗೆ ವಿದ್ಯಾರ್ಥಿವೇತನ ನೀಡುತ್ತೇವೆ ಎಂದು ಸರ್ಕಾರ ಘೊಷಣೆ ಮಾಡಿರುವುದರಿಂದ ಎಚ್​ಐವಿ ಸೋಂಕಿನಿಂದ ಬಳಲುತ್ತಿರುವವರು ತಾವಾಗೇ ಬಂದು ಅರ್ಜಿ ಸಲ್ಲಿಸುವುದು ತುಂಬಾ ಕಡಿಮೆ. ಅರ್ಜಿ ಸಲ್ಲಿಸುವ ವೇಳೆ ಫಲಾನುಭವಿಗಳು ಪ್ರಾಂಶುಪಾಲರಿಗೆ ವೈದ್ಯರ ಪ್ರಮಾಣಪತ್ರ ತೋರಿಸಿ ಸಹಿ ಪಡೆದುಕೊಳ್ಳಬೇಕಿದೆ. ಸಹಪಾಠಿಗಳಿಗೂ ಗೊತ್ತಾಗಿಬಿಡುತ್ತದೆ. ಇದು ವಿದ್ಯಾರ್ಥಿಗಳಿಗೆ ಹಿಂಸೆ ಎನ್ನಿಸುತ್ತಿದೆ ಎಂದು ಕೆಲವು ಸರ್ಕಾರೇತರ ಸಂಘ ಸಂಸ್ಥೆಗಳು ಸರ್ಕಾರದೊಂದಿಗೆ ಅಭಿಪ್ರಾಯ ಹಂಚಿಕೊಂಡಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿವೇತನದ ಹೆಸರು ಬದಲಾಯಿಸುವಂತೆಯೂ ಹಲವು ಸಂಘ ಸಂಸ್ಥೆಗಳು ಮನವಿ ಮಾಡಿವೆ.

  | ದೇವರಾಜ್ ಎಲ್.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts