More

    ಸ್ಕಿಜೋಫ್ರೇನಿಯಾ ಮಾನಸಿಕ ಕಾಯಿಲೆ: ಡಿಸಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾಹಿತಿ

    ಮಂಡ್ಯ: ಸ್ಕಿಜೋಫ್ರೇನಿಯಾ ತೀವ್ರತರವಾದ ಮಾನಸಿಕ ಕಾಯಿಲೆ. ಇದರ ಬಗ್ಗೆ ಸಾರ್ವಜನಿಕರಿಗೆ ಅರಿವು ಅಗತ್ಯ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
    ಕಾಯಿಲೆಯು 18 ರಿಂದ 25 ವಯೋಮಾನದವರಲ್ಲಿ ಹೆಚ್ಚಾಗಿ ಪುರುಷರಲ್ಲಿ ಕಾಯಿಲೆಯು ಕಂಡುಬರುತ್ತದೆ. ಹಾಗೆಯೇ 8050ಕ್ಕೂ ಹೆಚ್ಚು ರೋಗಿಗಳು ಕಳೆದ ವರ್ಷ ಚಿಕಿತ್ಸೆಯನ್ನು ಪಡೆದಿದ್ದಾರೆ. ಹಾಗಾಗಿ ಈ ಕಾಯಿಲೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಇಲಾಖೆಯಿಂದ ಈ ಮಾನಸ್ ಎಂಬ 14416 ಸಹಾಯವಾಣಿಯನ್ನು ನಿಮಾನ್ಸ್ ಆಸ್ಪತ್ರೆಯ ವತಿಯಿಂದ 24*7 ಕಾರ್ಯನಿರ್ವಹಿಸುತ್ತದೆ. ಇಂತಹ ರೋಗಿಗಳು ಕಂಡು ಬಂದಲ್ಲಿ ಅವರ ಚಿಕಿತ್ಸೆಯೂ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದರು.
    ಈ ಕಾಯಿಲೆಗೆ ಯಾವುದೇ ಚಿಕಿತ್ಸೆಯಿಲ್ಲ ಎಂದು ಭಯ ಪಡಬಾರದು. ವಿಜ್ಞಾನ ಮತ್ತು ತಂತ್ರಜ್ಞಾನದಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ಅನೇಕ ಹೊಸ ಸಂಶೋಧನೆಗಳು ಆಗಿವೆ. ಪ್ರತಿ ಕಾಯಿಲೆಗೂ ಔಷಧ ಹಾಗೂ ಚಿಕಿತ್ಸೆ ಲಭ್ಯವಿದೆ. ಸಾರ್ವಜನಿಕರು ಅನಗತ್ಯವಾಗಿ ಯಾವುದೇ ರೀತಿಯ ಮೂಢನಂಬಿಕೆ, ಕಂದಾಚಾರಗಳಿಗೆ ಒಳಗಾಗಬಾರದು. ಕಾಯಿಲೆಯ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದರು.
    ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಮಾತನಾಡಿ, ವಿನಾಕಾರಣ ನಗುವುದು, ಅಳುವುದು, ಒಬ್ಬರೆ ಮಾತನಾಡಿಕೊಳ್ಳುವುದು, ಕಾಲ್ಪನಿಕ ಧ್ವನಿ ಕೇಳಿಸುವುದು, ಕಾರಣವಿಲ್ಲದೆ ಅನುಮಾನ ಪಡುವುದು ಮತ್ತು ಹೆಚ್ಚು ಮಾದಕ ವಸ್ತುಗಳ ಸೇವನೆ ಮಾಡುವುದು ರೋಗದ ಲಕ್ಷಣಗಳಾಗಿವೆ. ಆದ್ದರಿಂದ ನಿಯಮಿತ ಔಷಧ, ಆಪ್ತ ಸಮಾಲೋಚನೆ, ಚಿಕಿತ್ಸೆ ಅನುಸರಣೆ ಮತ್ತು ಪುನರ್ವಸತಿಗಳಿಂದ ಈ ಕಾಯಿಲೆಯಿಂದ ಗುಣಮುಖ ಆಗುತ್ತದೆ ಎಂದು ವಿವರಿಸಿದರು.
    ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಭವಾನಿಶಂಕರ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಆಶಾಲತಾ, ಡಾ.ಮಮತಾ, ಡಾ.ಶಶಾಂಕ್, ಶಿವಾನಂದ, ಮಂಗಳಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts