Scheduler Conference ದಾವಣಗೆರೆ: ರಾಜ್ಯದಲ್ಲಿ ಪರಿಶಿಷ್ಟರ ಸಮಾವೇಶವನ್ನು ಆಯೋಜಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಹರಿಹರ ತಾಲೂಕಿನ ರಾಜನಹಳ್ಳಿಗೆ ಭಾನುವಾರ ಆಗಮಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಚಿವರು, ಶಾಸಕರು, ಮುಖಂಡರು ನಡೆಸಿದ ಸಭೆ ಇದಕ್ಕೆ ಸಾಕ್ಷಿಯಾಗಿದೆ.
ಬೆಳಗ್ಗೆ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದ ಡಾ.ಜಿ. ಪರಮೇಶ್ವರ್, ಅಲ್ಲಿಂದ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ಆಗಮಿಸಿದರು. ಅಲ್ಲಿ ಅವರು ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ, ಡಾ.ಎಚ್.ಸಿ. ಮಹದೇವಪ್ಪ, ಸಂಸದ ತುಕಾರಾಮ್ ಮತ್ತು ಕೆಲವು ಶಾಸಕರ ಜತೆಗೆ ಚರ್ಚಿಸಿದ್ದು ಕುತೂಹಲ ಮೂಡಿಸಿದೆ.
ಖರ್ಗೆ ಅವರೊಂದಿಗೆ ನಡೆದ ಮಾತುಕತೆಯ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರು ಕೆಲವು ವಿಚಾರಗಳನ್ನು ಆ ಸಭೆಯಲ್ಲಿ ಹಂಚಿಕೊಂಡರು ಎನ್ನಲಾಗಿದೆ. ಮುಖ್ಯವಾಗಿ ಸಮಾವೇಶವನ್ನು ಆಯೋಜಿಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಶಕ್ತಿ ಪ್ರದರ್ಶನ ಮಾಡುವ ಅಗತ್ಯದ ಕುರಿತು ಚರ್ಚೆಗಳು ನಡೆದವು ಎನ್ನಲಾಗಿದೆ.
ಈ ಹಿಂದೆ ಪರಿಶಿಷ್ಟರ ಸಮಾವೇಶವನ್ನು ಆಯೋಜಿಸುವ ಪ್ರಸ್ತಾಪವಾದಾಗ ಕಾಂಗ್ರೆಸ್ ಪಕ್ಷದಲ್ಲೇ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ವಿಷಯ ಹೈಕಮಾಂಡ್ ಅಂಗಳವನ್ನು ತಲುಪಿ ಸದ್ಯಕ್ಕೆ ಅಂಥ ಯಾವುದೇ ಸಮಾವೇಶ ಮಾಡುವುದು ಬೇಡ ಎನ್ನುವ ನಿರ್ಧಾರಕ್ಕೆ ಬರಲಾಗಿತ್ತು. ಈಗ ಮತ್ತೆ ಆ ವಿಷಯ ಮುನ್ನೆಲೆಗೆ ಬಂದಿದೆ.
45 ನಿಮಿಷಕ್ಕೂ ಅಧಿಕ ಸಮಯ ಗೌಪ್ಯ ಸಭೆ: ದಿಲ್ಲಿಗೆ ತೆರಳಲು ದಾವಣಗೆರೆಯಲ್ಲಿ ಯತ್ನಾಳ್ ಬಣ ತಾಲೀಮು | Yatnal