ಅಡುಗೆ ಸಿಬ್ಬಂದಿ ಕಾಯಂಗೊಳಿಸಲು ಆಗ್ರಹ

ಚಿಕ್ಕಮಗಳೂರು: ಬಿಸಿಎಂ ಹಿಂದುಳಿದ ಅಲ್ಪಸಂಖ್ಯಾತರ ಇಲಾಖೆಗಳು ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಹೊರ ಗುತ್ತಿಗೆಯಡಿ ಅಡುಗೆ ಕೆಲಸ ಮಾಡುತ್ತಿರುವವರನ್ನು ಮತ್ತು ಕಾವಲುಗಾರರನ್ನು ಮುಂದುವರಿಸಿ ಸರ್ಕಾರಿ ಅರೆಕಾಲಿಕ ನೌಕರರನ್ನಾಗಿ ನೇಮಿಸಬೇಕು ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಮೀಸಲು ಜಾರಿಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಬುಧವಾರ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಸಂಘಟನಾ ಸಂಚಾಲಕ ಎಲ್.ಎಸ್. ಶ್ರೀಕಾಂತ್ ಮಾತನಾಡಿ, ಎಸ್ಸಿ, ಎಸ್​ಟಿ ನೌಕರರು ದೇಶಕ್ಕೆ ಸ್ವಾತಂತ್ರ್ಯಂದಾಗಿನಿಂದಲು ಮೀಸಲಾತಿ ಮುಂಬಡ್ತಿ ಜ್ಯೇಷ್ಠತೆ ಪಡೆದು ಸಂವಿಧಾನ ಬದ್ಧವಾಗಿ ಮುಂದುವರಿಯುತ್ತಿದ್ದಾರೆ. ಆದರೆ ವಿಕೃತ ಮನಸ್ಸಿನ ಮನೋವಾದಿಗಳು ಜನಾಂಗದ ಅಭಿವೃದ್ಧಿ ಸಹಿಸಲಾಗದೆ ಸುಪ್ರೀಂ ಕೋರ್ಟ್​ಗೆ ತಪ್ಪು ಮಾಹಿತಿ ನೀಡಿ ತಡೆಯಾಜ್ಞೆ ತರುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.

ರಾಷ್ಟ್ರಪತಿ ಎಸ್ಸಿ, ಎಸ್​ಟಿ ಬಡ್ತಿ ಮೀಸಲಾತಿಗೆ ಸುಗ್ರೀವಾಜ್ಞೆ ಕೂಡಲೆ ಜಾರಿಗೊಳಿಸಬೇಕು. ಪರಿಶಿಷ್ಟ ಜಾತಿ ಹೆಸರಿನಲ್ಲಿ ಸುಳ್ಳು ಜಾತಿಪತ್ರ ಪಡೆದು ಸರ್ಕಾರಿ ಉದ್ಯೋಗ ಹಾಗೂ ರಾಜಕೀಯ ಪ್ರವೇಶ ಪಡೆದವರಿಗೆ ಹಾಗೂ ಸುಳ್ಳು ದಾಖಲಾತಿ ನೀಡಿದವರಿಗೆ ಕಠಿಣ ಕ್ರಮ ಜರುಗಿಸಬೇಕು. ಎಸ್ಸಿ, ಎಸ್​ಟಿ ನೌಕರರ ಹಿಂಬಡ್ತಿಯನ್ನು ಕೂಡಲೆ ಮುಂಬಡ್ತಿಗೆ ಮುಂದುವರಿಸಿ ಸುಗ್ರೀವಾಜ್ಞೆ ತರಬೇಕು. ದಸಂಸ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪನವರ ಜನ್ಮ ದಿನಾಚರಣೆಯನ್ನು ರಾಜ್ಯ ಮಟ್ಟದಲ್ಲಿ ಪ್ರತಿ ವರ್ಷ ಜೂ.9ರಂದು ಸರ್ಕಾರಿ ಕಾರ್ಯಕ್ರಮವಾಗಿ ರಜಾ ರಹಿತವಾಗಿ ಆಚರಿಸುವಂತೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು. ಮೀಸಲಾತಿ ಅಡಿಯಲ್ಲಿ ಬ್ಯಾಕ್ ಲಾಗ್ ಮತ್ತು ನೇರ ನೇಮಕಾತಿ ಹುದ್ದೆಗಳನ್ನು ಪರಿಶಿಷ್ಟ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಕೂಡಲೆ ಭರ್ತಿ ಮಾಡಬೇಕು. ಗಂಗಾಕಲ್ಯಾಣ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರ ಸಮಗ್ರ ತನಿಖೆಗೆ ಸರ್ಕಾರ ಆದೇಶಿಸಬೇಕು. ಎಲ್ಲ ತಾಲೂಕುಗಳಲ್ಲಿ ನಿರ್ಮಾಣ ಹಂತದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಭವನಗಳ ಗುಣಮಟ್ಟ ಕಾಪಾಡಬೇಕು ಎಂದು ಒತ್ತಾಯಿಸಿದರು.

ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಅವರಿಗೆ ಮನವಿ ನೀಡಿದರು. ಜಿಲ್ಲಾ ಖಜಾಂಚಿ ಲಕ್ಷ್ಮಣ್, ರಾಜ್ಯ ವಿಭಾಗೀಯ ಸಂಚಾಲಕ ಮಂಜಪ್ಪ, ಮುಖಂಡರಾದ ಮಾರುತಿ, ಅಭಿಲಾಷ್, ಸೀತಮ್ಮ, ಮಂಜಮ್ಮ ಇದ್ದರು.