ಅಮಿತ್‌ ಷಾ ರೋಡ್‌ ಶೋ ವೇಳೆ ದಾಳಿ: ಮಮತಾ ದೀದಿ ಸೇಡು ತೀರಿಸಿಕೊಂಡಿದ್ದಾರೆ ಎಂದ ಪ್ರಧಾನಿ

ಕೋಲ್ಕತ: ಕೊನೇ ಮತ್ತು ಅಂತಿಮ ಹಂತದ ಲೋಕಸಭಾ ಚುನಾವಣೆಗೆ ಆಡಳಿತ ಪಕ್ಷ ವಿಪಕ್ಷಗಳ ವಾಕ್ಸಮರ ತಾರಕಕ್ಕೇರಿದ್ದು, ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ್ದು, ಮಮತಾ ಸೇಡು ತೀರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದ ರ್ಯಾಲಿಯೊಂದರಲ್ಲಿ ಮಾತನಾಡಿ, ನಿನ್ನೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ಕೈಗೊಂಡಿದ್ದ ಬೃಹತ್‌ ರೋಡ್‌ ಶೋ ವೇಳೆ ಸಂಭವಿಸಿದ ಗಲಭೆಗೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಅವರು ಸೇಡು ತೀರಿಸಿಕೊಂಡಿದ್ದು, ಚುನಾವಣೆ ಫಲಿತಾಂಶದಿಂದ ಹೊರಬರಲು ಭಯಪಟ್ಟುಕೊಂಡಿದ್ದಾರೆ ಮತ್ತು ತಮ್ಮ ನೆರಳಿಗೆ ಅವರು ಹೆದರಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ನಿನ್ನೆ ಕೋಲ್ತತದಲ್ಲಿ ನಡೆದ ಗಲಭೆಯಲ್ಲಿ 19ನೇ ಶತಮಾನದ ಶೈಕ್ಷಣಿಕ ಮತ್ತು ಸಾಮಾಜಿಕ ಹರಿಕಾರ ಈಶ್ವರಚಂದ್ರ ವಿದ್ಯಾಸಾಗರ್‌ ಅವರ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ. ತೃಣಮೂಲ ಕಾಂಗ್ರೆಸ್‌ ಮತ್ತು ಬಿಜೆಪಿ ಪರಸ್ಪರ ಆರೋಪ ಪ್ರತ್ಯೋರೋಪಗಳಲ್ಲಿ ತೊಡಗಿಕೊಂಡಿವೆ.

ಕೆಲವು ದಿನಗಳ ಹಿಂದೆ ಮಮತಾ ದೀದಿ ಅವರು ಸಾರ್ವಜನಿಕವಾಗಿಯೇ ಇಂಚು ಇಂಚಿಗೂ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿದ್ದರು. ಅದರಂತೆ 24 ಗಂಟೆಗಳಲ್ಲಿಯೇ ಸೇಡು ತೀರಿಸಿಕೊಂಡಿದ್ದು, ಅಮಿತ್‌ ಷಾ ಅವರ ರೋಡ್‌ ಶೋ ವೇಳೆ ದಾಳಿ ನಡೆಸಲಾಗಿದೆ ಎಂದರು.

42 ಲೋಕಸಭಾ ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಿಗೆ ಕೊನೆಯ ಮತ್ತು ಅಂತಿಮ ಹಂತದ ಚುನಾವಣೆ ನಡೆಯುವ ಬೆನ್ನಲ್ಲೇ ಗಲಭೆ ನಡೆದಿದ್ದು, ರಾಜ್ಯದಲ್ಲಿ ಎರಡು ಕ್ಷೇತ್ರಗಳ ಗೆಲುವಿನಿಂದ 23 ಕ್ಷೇತ್ರಗಳಿಗೆ ವಿಸ್ತರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ರಾಜ್ಯದ ಐದನೇ ಹಂತದ ಈ ಚುನಾವಣೆಯಲ್ಲಿ ಐದರಿಂದ ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಮೋದಿ ಹೇಳಿದ್ದಾರೆ. (ಏಜೆನ್ಸೀಸ್)