ಮಮತಾ ಬ್ಯಾನರ್ಜಿ ತಿರುಚಿದ ಚಿತ್ರ ವಿವಾದ: ಬಂಧನ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತೆ

ನವದೆಹಲಿ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ತಿರುಚಿದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಬಿಜೆಪಿ ಕಾರ್ಯಕರ್ತೆ ತಮ್ಮ ಬಂಧನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಮೆಟ್​ ಗಾಲಾ 2019ರಲ್ಲಿ ತಮ್ಮ ವಿಶಿಷ್ಟ ಕೇಶ ವಿನ್ಯಾಸದಿಂದ ಗಮನ ಸೆಳೆದಿದ್ದರು. ಆದರೆ, ಅವರ ಕೇಶ ವಿನ್ಯಾಸ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಆಗಿತ್ತು. ಹಲವರು ಬೇರೆಯವರ ಫೋಟೋಗಳನ್ನು ಪ್ರಿಯಾಂಕಾ ಫೋಟೋದೊಂದಿಗೆ ಫೋಟೋಶಾಪ್​ನಲ್ಲಿ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದೇ ರೀತಿ ಮಮತಾ ಬ್ಯಾನರ್ಜಿ ಅವರ ಫೋಟೋವನ್ನು ಪ್ರಿಯಾಂಕಾ ಅವರ ಫೋಟೋದಲ್ಲಿ ತಿರುಚಿ ಶೇರ್​ ಮಾಡಲಾಗಿತ್ತು. ಈ ಫೋಟೋವನ್ನು ಬಿಜೆಪಿ ಯುವ ಮೋರ್ಚಾದ ನಾಯಕಿ, ಪ್ರಿಯಾಂಕಾ ಶರ್ಮಾ ತಮ್ಮ ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ವಿರುದ್ಧ ದಸ್​ನಗರ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಪ್ರಿಯಾಂಕಾ ಅವರನ್ನು ಬಂಧಿಸಿದ್ದರು. ಕೋರ್ಟ್​ ಅವರಿಗೆ 2 ವಾರ ನ್ಯಾಯಾಂಗ ಬಂಧನ ವಿಧಿಸಿತ್ತು.

ಪ್ರಿಯಾಂಕಾ ಶರ್ಮಾ ತಮ್ಮ ಬಂಧನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾ. ಸಂಜೀವ್​ ಖನ್ನಾ ಅವರಿದ್ದ ಸುಪ್ರೀಂ ಕೋರ್ಟ್​ನ ರಜಾಕಾಲದ ಪೀಠ ಮಂಗಳವಾರ ಅರ್ಜಿ ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *