ಬಡ್ತಿ ಮೀಸಲು ಕಾಯ್ದೆಗೆ ತಕರಾರು

ನವದೆಹಲಿ: ಎಸ್ಸಿ-ಎಸ್ಟಿ ಸರ್ಕಾರಿ ನೌಕರರ ಹಿತರಕ್ಷಣೆ ಹೆಸರಲ್ಲಿ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆ ನ್ಯಾಯಾಂಗದ ಅಧಿಕಾರವನ್ನು ಕಿತ್ತುಕೊಂಡಿದೆ. ಎಂ. ನಾಗರಾಜ್ ಪ್ರಕರಣಕ್ಕೆ ಸಂಬಂದಿಸಿ ಸೆ.26ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಬಡ್ತಿ ಮೀಸಲಾತಿಯಲ್ಲಿ ಕೆನೆಪದರ ತತ್ವ ಅಳವಡಿಸ ಬೇಕು ಎಂದು ತೀರ್ಪು ನೀಡಿದ್ದು, ಈ ಪ್ರಕರಣ ವನ್ನು ಆ ತೀರ್ಪಿನ ವ್ಯಾಪ್ತಿಯಲ್ಲೇ ನೋಡಬೇಕು ಎಂದು ಅರ್ಜಿದಾರ ಬಿ.ಕೆ. ಪವಿತ್ರ ಪರ ವಕೀಲ ರಾಜೀವ್ ಧವನ್ ವಾದ ಮಂಡಿಸಿದ್ದಾರೆ.

ಬಡ್ತಿ ಮೀಸಲಾತಿ ಹೊಂದಿರುವ ಸರ್ಕಾರಿ ನೌಕರರಿಗೆ ಜ್ಯೇಷ್ಠತೆ ವಿಸ್ತರಿಸುವ ಕುರಿತ ಸರ್ಕಾರದ ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ ಕೆಲ ವಿಚಾರ ಗಳನ್ನು ಮುಂದಿಟ್ಟ ವಕೀಲ ಧವನ್, ಬಡ್ತಿ ಮೀಸಲಾತಿ ನೀಡುವಾಗ ಎಸ್ಸಿ-ಎಸ್ಟಿ ಸಮುದಾಯದ ನೌಕರನ ಆಡಳಿತ ದಕ್ಷತೆ, ಹಿಂದುಳಿದಿರುವಿಕೆ, ಸಮುದಾಯಗಳಿಗೆ ಸಿಕ್ಕಿರುವ ಪ್ರಾತಿನಿಧ್ಯಗಳಂತಹ ಮಾನದಂಡಗಳನ್ನು ಅನುಸರಿಸಬೇಕು. ಇದನ್ನು 2006ರ ಎಂ. ನಾಗರಾಜ್ ತೀರ್ಪಿನಲ್ಲೂ ಹೇಳ ಲಾಗಿತ್ತು. ಕಳೆದ ತಿಂಗಳು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ತೀರ್ಪಿನಲ್ಲೂ ಪುನರುಚ್ಚರಿಸಲಾಗಿದ್ದು, ಕೆನೆಪದರ ತತ್ವ ಅಳವಡಿಸಿಕೊಳ್ಳುವ ಬಗ್ಗೆ ಒತ್ತಿ ಹೇಳಲಾಗಿದೆ ಎಂದು ನ್ಯಾಯಮೂರ್ತಿ ಉದಯ್ ಲಲಿತ್ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ವಿಭಾಗೀಯ ಪೀಠದ ಗಮನಸೆಳೆದರು.

ಈ ಮೊದಲು ನೂತನ ಕಾಯ್ದೆ ಜಾರಿಗೆ ಕ್ರಮ ಕೈಗೊಳ್ಳದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದಿದ್ದ ಸರ್ಕಾರ, ಕಳೆದ ವಿಚಾರಣೆ ವೇಳೆ ಮೌಖಿಕ ಭರವಸೆಯನ್ನು ಹಿಂತೆಗೆದುಕೊಳ್ಳಲಾಗುವುದು ಎಂಬ ಹೇಳಿಕೆ ನೀಡಿ ದ್ವಂದ್ವ ನೀತಿ ಅನುಸರಿಸಿತು ಎಂದು ಆರೋಪಿಸಿದ ಅವರು, ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ನೀತಿ ಅಳವಡಿಸಿಕೊಳ್ಳುವುದು ತಪ್ಪೇನಲ್ಲ. ರೋಸ್ಟರ್, ಬ್ಯಾಕ್​ಲಾಗ್ ನಿಯಮ ಗಳನ್ನೂ ನಾವು ವಿರೋಧಿಸಿಲ್ಲ. ಕೆಳ ಹಂತದ ಹುದ್ದೆಗಳ ನೇರ ನೇಮಕಾತಿ ಹಾಗೂ ಕೆಳ ಹಂತದ ನೌಕರರ ನೇಮಕಾತಿಗೆ ಬಡ್ತಿ ಮೀಸಲಾತಿ ನೀತಿ ಅನುಸರಿಸಿ, ಕೆನೆಪದರದ ನಿಯಮ ಅಳವಡಿಸಿಕೊಳ್ಳುವುದಕ್ಕೆ ತಕರಾರಿಲ್ಲ ಎಂದು ವಿವರಿಸಿದರು. 3 ಗಂಟೆ ವಾದಿಸಿದ ಧವನ್, ಪ್ರಕರಣಕ್ಕೆ ಪೂರಕವಾಗಿರುವ ಹಿಂದಿನ ಅನೇಕ ತೀರ್ಪಗಳನ್ನು ಉಲ್ಲೇಖಿಸಿದರು. ಬುಧವಾರವೂ ವಾದ ಮುಂದುವರಿಸಲಿದ್ದಾರೆ. ನಂತರ ರಾಜ್ಯ ಸರ್ಕಾರ ಮತ್ತು ಎಸ್ಸಿ-ಎಸ್ಟಿ ನೌಕರರ ಪರ ವಕೀಲರು ಅವರ ವಿಚಾರಗಳನ್ನು ನ್ಯಾಯಪೀಠದ ಮುಂದೆ ಪ್ರಸ್ತುತಪಡಿಸಲಿದ್ದಾರೆ.