ಕೆಬ್ಬೆಕಟ್ಟೆಗೆ ಎಸ್‌ಸಿ, ಎಸ್‌ಟಿ ಆಯೋಗದ ಅಧ್ಯಕ್ಷರ ಭೇಟಿ

ಗುಂಡ್ಲುಪೇಟೆ: ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ ನಡೆದ ಕೆಬ್ಬೆಕಟ್ಟೆ ಶನೈಶ್ಚರಸ್ವಾಮಿ ದೇಗುಲಕ್ಕೆ ಬುಧವಾರ ಸಂಜೆ ಪರಿಶಿಷ್ಟ ಜಾತಿ, ವರ್ಗಗಳ ಆಯೋಗದ ಅಧ್ಯಕ್ಷ ಅಮರನಾಥನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೇ ವೇಳೆ ಸ್ಥಳದಲ್ಲಿದ್ದ ದೇಗುಲದ ಅರ್ಚಕ ಗುಂಡಣ್ಣ, ದೇಗುಲ ಸಮಿತಿ ಅಧ್ಯಕ್ಷ ಸ್ವಾಮಿಗೌಡ, ದೂರುದಾರ ಕಾಂತರಾಜು ಸೇರಿ ವಿವಿಧ ಸಂಘಟನೆಗಳ ಮುಖಂಡರಿಂದ ಮಾಹಿತಿ ಪಡೆದರು.
ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣದ ವಿವರ ಪಡೆದಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಈಗಾಗಲೇ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಲೋಪ ಕಂಡುಬಂದಲ್ಲಿ ನನ್ನ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ಇದೇ ವೇಳೆ ದೂರುದಾರ ಕಾಂತರಾಜು ಮಾತನಾಡಿ, ಘಟನೆ ನಡೆದಾಗಿನಿಂದಲೂ ಸ್ಥಳೀಯ ಪೊಲೀಸರು ಸರಿಯಾಗಿ ಸಹಕಾರ ನೀಡುತ್ತಿಲ್ಲ ಎಂದು ದೂರಿದರು.

ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಎಸ್‌ಐಟಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಸಾಕ್ಷಿಗಳನ್ನು ನಾಶ ಮಾಡುವ ಸಂಭವ ಇರುವುದರಿಂದ ಸ್ಥಳೀಯ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಕೋರಿದರು.
ಇದಕ್ಕೂ ಮುನ್ನ ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಆಯೋಗದ ಅಧ್ಯಕ್ಷ ಅಮರನಾಥನ್ ಅವರು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್‌ಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್ ಅವರೊಂದಿಗೆ ಸಮಾಲೋಚನೆ ನಡೆಸಿ ಪ್ರಕರಣ ಸಂಬಂಧ ವಿವರ ಪಡೆದರು.
ತಹಸೀಲ್ದಾರ್ ನಂಜುಂಡಯ್ಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಕಾಶ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ ಮತ್ತಿತರರಿದ್ದರು.

Leave a Reply

Your email address will not be published. Required fields are marked *