ರಫೇಲ್​ ಡೀಲ್​ ವಿವಾದ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್​

ನವದೆಹಲಿ: ರಫೇಲ್​ ಯುದ್ಧ ವಿಮಾಣ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಖರೀದಿ ಪ್ರಕ್ರಿಯೆ ಕುರಿತು ಸುಪ್ರೀಂ ಕೋರ್ಟ್​ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ತೀರ್ಪನ್ನು ಸುಪ್ರಿಂ ಕೋರ್ಟ್ ಬುಧವಾರ​ ಕಾಯ್ದಿರಿಸಿದೆ.

ನ್ಯಾಯವಾದಿ ಪ್ರಶಾಂತ್​ ಭೂಷಣ್​, ಮಾಜಿ ಸಚಿವರಾದ ಯಶವಂತ ಸಿನ್ಹಾ ಮತ್ತು ಅರುಣ್​ ಶೌರಿ ಅವರು ರಫೇಲ್​ ವಿಮಾನ ಖರೀದಿ ಪ್ರಕ್ರಿಯೆ ಕುರಿತು ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯ್​, ನ್ಯಾಯಮೂರ್ತಿ ಎಸ್​.ಕೆ. ಕೌಲ್​ ಮತ್ತು ನ್ಯಾಯಮೂರ್ತಿ ಕೆ.ಎಂ. ಜೋಸೆಫ್​ ಅವರಿದ್ದ ತ್ರಿಸದಸ್ಯ ಪೀಠ ಈ ಅರ್ಜಿಗಳ ವಿಚಾರಣೆ ನಡೆಸಿತು.

ಈ ಸಂದರ್ಭದಲ್ಲಿ ವಾದ ಮಂಡಿಸಿದ ಪ್ರಶಾಂತ್​ ಭೂಷಣ್​ ಅವರು ಪ್ರತಿಯೊಂದು ರಫೇಲ್​ ಯುದ್ಧವಿಮಾನದ ದರ 155 ಮಿಲಿಯನ್​ ಯೂರೋ ಇತ್ತು, ಆದರೆ ಪ್ರಸ್ತುತ ಈ ದರ 270 ಮಿಲಿಯನ್​ ಯೂರೋಗೆ ಏರಿಕೆಯಾಗಿದೆ. ಇದು ಯುದ್ಧ ವಿಮಾನದ ದರ ಶೇ. 40ರಷ್ಟು ಏರಿಕೆಯಾಗಿರುವುದನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಹಗರಣ ನಡೆದಿರುವುದು ಸ್ಪಷ್ಟವಾಗುತ್ತದೆ. ಹಾಗಾಗಿ ಸಿಬಿಐ ತನಿಖೆ ನಡೆಸಬೇಕು ಎಂದು ತಿಳಿಸಿದರು.

ಯುದ್ಧವಿಮಾನ ಬೆಲೆ ಗೌಪ್ಯತೆ ಪ್ರತಿಪಾದಿಸಿದ ಕೇಂದ್ರ

ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್​ ಕೆ.ಕೆ. ವೇಣುಗೋಪಾಲ್​ ಅವರು ರಫೇಲ್​ ಯುದ್ಧ ವಿಮಾನದ ಬೆಲೆಯ ಕುರಿತಾದ ಗೌಪ್ಯತೆಯ ಷರತ್ತನ್ನು ಸಮರ್ಥಿಸಿಕೊಂಡರು. ವಿಮಾನದ ಬೆಲೆಯ ಕುರಿತು ಸಂಸತ್ತಿನಲ್ಲೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ, ಹಾಗಾಗಿ ಅದನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಜತೆಗೆ ಯಾವ ವಿಮಾನ ಅಥವಾ ಶಸ್ತ್ರಾಸ್ತ್ರವನ್ನು ಖರೀದಿಸಬೇಕು ಎಂಬುದು ತಜ್ಞರಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ನ್ಯಾಯಾಂಗ ಈ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳಲು ಬಾರದು ಎಂದು ತಿಳಿಸಿದರು.

ರಫೇಲ್ ಗುಟ್ಟು ರಟ್ಟು!