ಭಾರತ-ಇಂಗ್ಲೆಂಡ್ ಸರಣಿ, 2.83 ಕೋಟಿ ಬಳಕೆಗೆ ಸುಪ್ರೀಂ ಅಸ್ತು

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯ ಉಳಿದ ಪಂದ್ಯಗಳಿಗೆ 2.83 ಕೋಟಿ ರೂ.ಗಳನ್ನು ಬಳಕೆ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್ ಬಿಸಿಸಿಐಗೆ ಅನುಮತಿ ನೀಡಿದೆ.

ಇಂಗ್ಲೆಂಡ್ ವಿರುದ್ಧದ ಉಳಿದ ಪಂದ್ಯಗಳಿಗೆ ಹಣ ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡುವಂತೆ ಕೋರಿ ಬಿಸಿಸಿಐ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಬಿಸಿಸಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಹಣ ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದೆ.

ಇದೇ ಸಂದರ್ಭದಲ್ಲಿ ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಅಳವಡಿಸಿಕೊಳ್ಳದಿರುವ ಕಾರಣ ರಾಜ್ಯ ಕ್ರಿಕೆಟ್ ಸಂಸ್ಥೆಗಳೊಂದಿಗೆ ಪಂದ್ಯದ ಆದಾಯವನ್ನು ಹಂಚಿಕೊಳ್ಳದಂತೆ ಸೂಚಿಸಿದೆ.

ಇಂಗ್ಲೆಂಡ್ ವಿರುದ್ಧ ಬಾಕಿ ಉಳಿದಿರುವ 2 ಟೆಸ್ಟ್ ಪಂದ್ಯಗಳಿಗೆ 1.33 ಕೋಟಿ ರೂ. ಮತ್ತು 3 ಏಕ ದಿನ ಪಂದ್ಯಗಳಿಗೆ ತಲಾ 25 ಲಕ್ಷದಂತೆ ಬಳಕೆ ಮಾಡಿಕೊಳ್ಳಬಹುದು. ಈ ಮೊತ್ತವನ್ನು ತಂಡದ ಆಟಗಾರರ ಪ್ರಯಾಣ ಮತ್ತು ಉಳಿದುಕೊಳ್ಳುವ ವ್ಯವಸ್ಥೆಗಾಗಿ ಬಳಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ನಾಲ್ಕನೇ ಟೆಸ್ಟ್ ಪಂದ್ಯ ಡಿ.8 ರಿಂದ ಮುಂಬೈನಲ್ಲಿ ನಡೆಯಲಿದ್ದು, ಕೊನೆಯ ಪಂದ್ಯ ಡಿ.16 ರಿಂದ ಚೆನ್ನೈನಲ್ಲಿ ನಡೆಯಲಿದೆ.

– ಏಜೆನ್ಸೀಸ್

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *