ರೆಬೆಲ್ಸ್​ಗೆ ಸ್ಪೀಕರ್ ಚೆಕ್​ ಮೇಟ್: ತಕ್ಷಣಕ್ಕಿಲ್ಲ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ

ಬೆಂಗಳೂರು: ರಾಜಕೀಯ ಚದುರಂಗದಾಟದಲ್ಲಿ ರಾಜೀನಾಮೆಯ ದಾಳ ಉರುಳಿಸಿ ಮುಂಬೈನಲ್ಲಿ ಕುಳಿತೇ ಮೈತ್ರಿ ಸರ್ಕಾರದ ಉಸಿರುಗಟ್ಟಿಸಿದ್ದ ಕಾಂಗ್ರೆಸ್, ಜೆಡಿಎಸ್ ಅತೃಪ್ತ ಶಾಸಕರ ಸ್ಥಿತಿ ಈಗ ಅತಂತ್ರಕ್ಕೆ ಸಿಲಕಿದೆ. ರಾಜೀನಾಮೆ ಅಂಗೀಕಾರಕ್ಕೆ ಆತುರ ತೋರೆನೆಂಬ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರ ನಿಲುವು ಐಸಿಯುನಲ್ಲಿದ್ದ ದೋಸ್ತಿ ಸರ್ಕಾರಕ್ಕೆ ವೆಂಟಿಲೇಟರ್ ಕರುಣಿಸಿದರೆ, ರಾಜೀನಾಮೆ ಕೊಟ್ಟ ಶಾಸಕರ ಜತೆಗೆ ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದ ಬಿಜೆಪಿಗೂ ಚೆಕ್​ವೆುೕಟ್ ನೀಡಿದಂತಾಗಿದೆ.

ದೋಸ್ತಿ ಪಡೆ ಸ್ಪೀಕರ್ ಕೊಟ್ಟ ಈ ಅವಕಾಶವನ್ನು ಬಳಸಿಕೊಂಡು ಸರ್ಕಾರ ರಕ್ಷಿಸಿಕೊಳ್ಳುತ್ತದೆಯೋ ಅಥವಾ ಅತೃಪ್ತ ಶಾಸಕರು ಈ ತಡೆಯನ್ನು ದಾಟಿ ಯಶಸ್ವಿಯಾಗಿ ಗುರಿ ಸಾಧಿಸುತ್ತಾರೆಯೋ ಎಂಬುದು ಅಂತಿಮ ಕುತೂಹಲ.

ಈ ಎಲ್ಲ ಬೆಳವಣಿಗೆಗಳು ಶುಕ್ರವಾರ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಫಲನವಾಗುವುದು ನಿಶ್ಚಿತವಾಗಿರುವುದರಿಂದ ಕದನ ಕುತೂಹಲ ಇಮ್ಮಡಿಗೊಂಡಿದೆ.

ತಾವು ಕೊಟ್ಟ ಕ್ರಮಬದ್ಧ ರಾಜೀನಾಮೆಯನ್ನು ಅಂಗೀಕರಿಸಲು ಸ್ಪೀಕರ್ ವಿಳಂಬ ತೋರುತ್ತಿದ್ದಾರೆಂದು ಆರೋಪಿಸಿ ಸುಪ್ರೀಂಕೋರ್ಟ್ ಕದಬಡಿದಿದ್ದ ಅತೃಪ್ತ ಶಾಸಕರಿಗೆ ಗುರುವಾರ ಬೆಳಗ್ಗೆಯೇ ಸಿಹಿ ಸುದ್ದಿ ದೊರೆಯಿತು. ರಾಜೀನಾಮೆ ವಿಚಾರವಾಗಿ ಸಂಜೆ 6 ಗಂಟೆಗೆ ಸ್ಪೀಕರ್ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕೆಂದು ನ್ಯಾಯಾಲಯ ಆದೇಶ ನೀಡಿತು. ಕೆಲವೇ ಗಂಟೆಗಳಲ್ಲಿ ಈ ಆದೇಶ ಪ್ರಶ್ನಿಸಿ ಸುಪ್ರೀಂ ಮೊರೆಹೋದ ಸ್ಪೀಕರ್ 6ಗಂಟೆಯೊಳಗೆ ಪ್ರಕ್ರಿಯೆ ಮುಗಿಸಲಾಗದೆಂದು ಮನವಿ ಮಾಡಿದರು. ಸ್ಪೀಕರ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಶುಕ್ರವಾರ ಬೆಳಗ್ಗೆ ವಿಚಾರಣೆ ನಡೆಸುವುದಾಗಿ ಸ್ಪಷ್ಟಪಡಿಸಿತು.

ರಾಜೀನಾಮೆ ಕೊಟ್ಟ ಶಾಸಕರ ಪೈಕಿ ಐವರ ಬೇಡಿಕೆ ಪೂರೈಸಿ ರಾಜೀನಾಮೆ ಹಿಂಪಡೆ ಯಲು ಅವಕಾಶವಿದೆ. ಬೇಡಿಕೆಗಳನ್ನು ಸರಿಪಡಿಸಿ ಕೊಂಡು ತಗ್ಗಿಬಗ್ಗಿ ನಡೆದರೂ ಸಾಕು. ಅತೃಪ್ತರ ಸಂಖ್ಯೆ ಕಡಿಮೆ ಮಾಡಲು ಇಬ್ಬರು ಶಾಸಕರನ್ನು ಅನರ್ಹಗೊಳಿಸುವುದೇ ಸೂಕ್ತ. ಕನಿಕರ ತೋರದೆ ನಿರ್ಧಾರ ಕೈಗೊಂಡರೆ ಸರ್ಕಾರ ಉಳಿಸಿಕೊಳ್ಳಬಹುದು ಎಂಬ ತೀರ್ವನಕ್ಕೆ ಬಂದಿದ್ದ ಕೈ ನಾಯಕರು ಹಲವು ಸುತ್ತಿನ ಸಭೆ ನಡೆಸಿದರು. ಸ್ಪೀಕರ್ ಅವರನ್ನೂ ಕಂಡು ಒತ್ತಡ ತಂದರು. ಆದರೆ, ಈ ನಿರ್ಧಾರ ದುಬಾರಿಯಾಗಿ ಬಿಜೆಪಿಗೆ ಹೆಚ್ಚು ಅನುಕೂಲವಾಗಬಹುದೆಂದು ಅಂದಾಜಿಸಿ, ತಾತ್ಕಾಲಿಕವಾಗಿ ಈ ತೀರ್ಮಾನ ಬೇಡ ಎಂದು ಅಭಿಪ್ರಾಯಕ್ಕೆ ಬಂದಿದ್ದಾರೆ. ಇನ್ನು ದಂಡಂ ದಶಗುಣಂ ಮಾರ್ಗದಲ್ಲಿ ಬಗ್ಗಿಸುವ ಪ್ರಯತ್ನವೂ ನಡೆದಿದೆ ಎನ್ನಲಾಗಿದೆ. ಐಎಂಎ ಪ್ರಕರಣದಲ್ಲಿ ಒಬ್ಬ ಶಾಸಕರನ್ನು ಬಂಧಿಸುವ ಮೂಲಕ ಅವರನ್ನು ಅತೃಪ್ತರ ಪಟ್ಟಿಯಿಂದ ಚಿತ್ ಮಾಡಲು ಯೋಜನೆ ಸಿದ್ಧವಾಗಿದೆ ಎನ್ನಲಾಗಿದೆ.

ಮುಂದೇನಾಗಬಹುದು..?

1 – ಶುಕ್ರವಾರ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಈಗಾಗಲೇ ದೋಸ್ತಿ ಪಕ್ಷಗಳು ವಿಪ್ ಜಾರಿ ಮಾಡಿವೆ. ರಾಜೀನಾಮೆ ಕೊಟ್ಟ ಶಾಸಕರು ಸದನಕ್ಕೆ ಬರಬೇಕಾಗುತ್ತದೆ.

2 – ಈ ಶಾಸಕರು ಸದನಕ್ಕೆ ಬಾರದೇ ಹೋದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಪೀಕರ್​ಗೆ ದೂರು ಸಲ್ಲಿಸಿ, ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಂತೆ ಕ್ರಮಕೈಗೊಳ್ಳಲು ಮನವಿ ಮಾಡಲಿವೆ.

3 – ಶುಕ್ರವಾರ ಇದೇ ಪ್ರಕರಣ ಸುಪ್ರಿಂಕೋರ್ಟ್​ನಲ್ಲಿ ವಿಚಾರಣೆಗೆ ಬರಲಿದೆ. ಶಾಸಕರ ರಾಜೀನಾಮೆ ವಿಚಾರದಲ್ಲಿ ಸ್ಪೀಕರ್ ಪ್ರತಿನಿಧಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸುವರು.

4 – ಪ್ರಕರಣದ ಬಿಸಿ ಕಾಪಿಡಲು ಸದನದ ಒಳ-ಹೊರಗೆ ಬಿಜೆಪಿ ಹೋರಾಟ ನಡೆಸಲಿದೆ. ಕಲಾಪ ಕೂಡ ಸರಾಗವಾಗಿ ನಡೆಯುವುದು ಅನುಮಾನ.

5 – ಅತೃಪ್ತ ಶಾಸಕರ ಮನವೊಲಿಕೆಗೆ ಕಾಂಗ್ರೆಸ್-ಜೆಡಿಎಸ್​ಗೆ ಮತ್ತಷ್ಟು ಅವಕಾಶ ಸಿಕ್ಕಿದ್ದು, ಈ ಕೆಲಸ ಚುರುಕಾಗಲಿದೆ. ಮನಕರಗಿಸುವ ಪ್ರಯತ್ನ ಸಾಗಲಿದೆ.

ಬಿಜೆಪಿಗೇನು ಸವಾಲು?

ಅಧಿಕಾರದ ತುತ್ತು ಕೈಯಲ್ಲಿದೆ, ಅದು ಬಾಯಿಗೆ ಬರುವುದಕ್ಕೆ ಇನ್ನೊಂದಿಷ್ಟು ದಿನ ಕಾಯಲೇಬೇಕು. ಈ ಸಂದರ್ಭದಲ್ಲಿ ಅತೃಪ್ತ ಶಾಸಕರನ್ನು ಕಾಪಾಡಿಕೊಳ್ಳುವ ಅನೌಪಚಾರಿಕ ಜವಾಬ್ದಾರಿಯೂ ಪಕ್ಷದ ಮೇಲಿದೆ. ಈಗ ರಾಜೀನಾಮೆ ಕೊಟ್ಟ ಶಾಸಕರ್ಯಾರೂ ಮನಸ್ಸು ಬದಲಾಯಿಸದಂತೆ ನೋಡಿಕೊಳ್ಳಬೇಕಿದೆ.

ಸುಪ್ರೀಂ ಹೇಳಿದ್ದೇನು?

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಶಾಸಕರು ಗುರುವಾರ ಸಂಜೆ 6 ಗಂಟೆಗೆ ಸ್ಪೀಕರ್ ಭೇಟಿ ಮಾಡಿ ರಾಜೀನಾಮೆಗಳನ್ನು ಸಲ್ಲಿಸಬಹುದು. ಈ ಬಗ್ಗೆ ಗುರುವಾರವೇ ಸ್ಪೀಕರ್ ಸೂಕ್ತ ತೀರ್ಮಾನ ತೆಗೆದುಕೊಂಡು ಶುಕ್ರವಾರದ ವಿಚಾರಣೆ ವೇಳೆ ಮಾಹಿತಿ ನೀಡಬೇಕು.

ಸ್ಪೀಕರ್ ಅರ್ಜಿ ಏನು?

ರಾಜೀನಾಮೆ ನೀಡಿರುವ ಕೆಲ ಶಾಸಕರನ್ನು ಅನರ್ಹಗೊಳಿಸಬೇಕು ಎಂಬ ಮನವಿಯ ವಿಚಾರಣೆಯೂ ನನ್ನ ಮುಂದಿದೆ. ಇದನ್ನು ಮೊದಲು ಪರಿಶೀಲಿಸಿ ಬಳಿಕ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಕ್ಕೆ ನನಗೆ ಇನ್ನಷ್ಟು ಕಾಲಾವಕಾಶ ಬೇಕಿದೆ.

ಇಂದಿನಿಂದ ವಿಧಾನಮಂಡಲ ಅಧಿವೇಶನ

ರಾಜ್ಯ ರಾಜಕಾರಣದ ಹೈಡ್ರಾಮಾ ನಡುವೆಯೇ ವಿಧಾನಮಂಡಲ ಅಧಿವೇಶನಕ್ಕೆ ವೇದಿಕೆ ಸಜ್ಜಾಗಿದೆ. ಅತೃಪ್ತರ ರಾಜೀನಾಮೆಯ ಬಳಿಕ ಅಲ್ಪಮತಕ್ಕೆ ಕುಸಿದಿರುವ ಸರ್ಕಾರಕ್ಕೆ ಅಸ್ತಿತ್ವ ಉಳಿಸಿಕೊಳ್ಳುವ ಸವಾಲಿನ ಜತೆಯಲ್ಲೇ ಹಣಕಾಸು ಸೇರಿದಂತೆ ಪ್ರಮುಖ ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಮತ್ತೊಂದೆಡೆ ಅತೃಪ್ತ ಶಾಸಕರ ರಾಜೀನಾಮೆ ವಿಚಾರ ಮುಂದಿಟ್ಟುಕೊಂಡು ಅಲ್ಪಮತಕ್ಕೆ ಸರ್ಕಾರ ಕುಸಿದಿರುವುದರಿಂದ ಸಿಎಂ ರಾಜೀನಾಮೆಗೆ ಪಟ್ಟು ಹಿಡಿಯಲು ಪ್ರತಿಪಕ್ಷ ಬಿಜೆಪಿ ಕಾರ್ಯತಂತ್ರ ರೂಪಿಸಿದೆ.

ಸಲ್ಲಿಕೆಯಾದ ರಾಜೀನಾಮೆಗಳು ಕ್ರಮಬದ್ಧವಾಗಿವೆ, ಅದನ್ನು ಸ್ವೀಕರಿಸಿದ್ದೇನೆ. ಅಂಗೀಕರಿಸಿಲ್ಲ. ರಾಜೀನಾಮೆಗೆ ನೀಡಿದ ಕಾರಣ ಮನವರಿಕೆ ಆಗಬೇಕು. ಅದಕ್ಕೂ ಮುನ್ನ ವಿಚಾರಣೆ ನಡೆಸಬೇಕಾಗುತ್ತದೆ. ಇಷ್ಟೇ ದಿನದಲ್ಲಿ ಪ್ರಕ್ರಿಯೆ ಮುಗಿಯುತ್ತದೆ ಎಂದು ಹೇಳಲಾಗದು.

| ರಮೇಶ್ ಕುಮಾರ್, ಸ್ಪೀಕರ್

ಸುಪ್ರೀಂ ಸೂಚನೆ

ಕರ್ನಾಟಕದ ಅತೃಪ್ತ ಶಾಸಕರು ಕೊಟ್ಟಿರುವ ರಾಜೀನಾಮೆ ಕುರಿತು ಗುರುವಾರವೇ ನಿರ್ಧಾರ ಕೈಗೊಳ್ಳಬೇಕು. ಮುಂಬೈನಲ್ಲಿರುವ ಎಲ್ಲ ಅತೃಪ್ತ ಶಾಸಕರು ಗುರುವಾರ ಸಂಜೆ 6 ಗಂಟೆಗೆೆ ವಿಧಾನಸಭಾಧ್ಯಕ್ಷರೆದುರು ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿತು. ರಾಜೀನಾಮೆಗಳನ್ನು ಅಂಗೀಕರಿಸುವ ಕುರಿತು ವಿಧಾನಸಭಾಧ್ಯಕ್ಷರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಮುಂಬೈನಲ್ಲಿರುವ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.

ಬೆಂಗ್ಳೂರಿಗೆ ದೌಡು

ಸುಪ್ರೀಂ ತೀರ್ಪಿನಿಂದ ಪುಟಿದುಕುಳಿತ ಮುಂಬೈನಲ್ಲಿದ್ದ ಶಾಸಕರು ಬೆಂಗಳೂರಿಗೆ ಹೊರಡಲು ಅನುವಾದರು. ಜತೆಗೆ ತಮ್ಮ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂಬುದನ್ನು ಎಲ್ಲರೂ ಸ್ಪಷ್ಟಪಡಿಸಿಕೊಂಡರು. ಮಧ್ಯಾಹ್ನ ಮುಂಬೈನಿಂದ ವಿಶೇಷ ವಿಮಾನದಲ್ಲಿ ಹೊರಟ ಕಾಂಗ್ರೆಸ್- ಜೆಡಿಎಸ್​ನ 11 ಶಾಸಕರು ಸಂಜೆ ಎಚ್​ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿಂದ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ವಿಧಾನಸೌಧಕ್ಕೆ ಆಗಮಿಸಿ ಓಡೋಡಿ ಬಂದು ಸ್ಪೀಕರ್​ಗೆ ರಾಜೀನಾಮೆ ನೀಡಿ, ತಕ್ಷಣವೇ ಅಂಗೀಕರಿಸುವಂತೆ ಪಟ್ಟುಹಿಡಿದು ಬಳಿಕ ಮುಂಬೈಗೆ ಹಿಂದಿರುಗಿದರು.

ಸ್ಪೀಕರ್ ಸ್ಪಷ್ಟನೆ

ಅತೃಪ್ತರೆಲ್ಲರ ರಾಜೀನಾಮೆ ಸ್ವೀಕರಿಸಿರುವ ಸ್ಪೀಕರ್ ಯಾವ ನಿರ್ಧಾರ ಕೈಗೊಳ್ಳುತ್ತಾ ರೆಂಬ ಕುತೂಹಲವಿತ್ತು. ರಾತ್ರಿ 7 ಗಂಟೆಗೆ ಮಾಧ್ಯಮದ ಮುಂದೆ ಹಾಜರಾದ ಸ್ಪೀಕರ್, ತಾವು ಈ ವಿಚಾರದಲ್ಲಿ ಹರಿಬಿರಿ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ಅತೃಪ್ತರಿಗೆ ಶಾಕ್ ನೀಡಿದರು. ರಾಜೀನಾಮೆಗೆ ಕಾರಣ ನನಗೆ ಮನವರಿಕೆ ಆಗಬೇಕು, ನಂತರ ತೀರ್ಮಾನ ಮಾಡುತ್ತೇನೆಂದು ಸ್ಪಷ್ಟಪಡಿಸುವ ಜತೆಯಲ್ಲೇ ಶಾಸಕರ ರಾಜೀನಾಮೆ ಪ್ರಹಸನಕ್ಕೆ ಖೇದ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *