’ರಾ’ಫೇಲ್ ಮೋದಿ ಪಾಸ್

>

ನವದೆಹಲಿ: ಬಹುಕೋಟಿ ರಫೇಲ್ ಯುದ್ಧ ವಿಮಾನ ಖರೀದಿ ಹಗರಣದ ಆರೋಪಗಳಿಗೆಲ್ಲ ತೆರೆ ಎಳೆದಿರುವ ಸುಪ್ರೀಂಕೋರ್ಟ್, ನ್ಯಾಯಾಲಯದ ಉಸ್ತುವಾರಿಯಲ್ಲೇ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದೆ. ಈ ಮೂಲಕ, ಪಂಚರಾಜ್ಯ ಚುನಾವಣೆ ವಿಜಯದಿಂದ ಹಾರಾಡುತ್ತಿದ್ದ ಕಾಂಗ್ರೆಸ್ ನೆಲಕ್ಕಿಳಿದಿದೆ. ಮಾತ್ರವಲ್ಲ, ಬಿಜೆಪಿ ವಿರುದ್ಧ ಪ್ರಮುಖ ಅಸ್ತ್ರವೊಂದು ಲೋಕಸಭೆ ಚುನಾವಣೆಗೆ ಮೊದಲೇ ಕೈತಪ್ಪಿದೆ. ಮೋದಿ ಸರ್ಕಾರಕ್ಕೆ ಲಭ್ಯವಾದ ಸುಪ್ರೀಂ ಕ್ಲೀನ್​ಚಿಟ್ ಕಮಲಪಡೆಯ ಶಕ್ತಿ ಹೆಚ್ಚಿಸಿದರೆ, ಪ್ರತಿಪಕ್ಷಗಳಿಗೆ ನಿರಾಸೆ ತಂದಿದೆ.

ಮಧ್ಯಪ್ರವೇಶಿಸಲ್ಲ: ರಫೇಲ್ ಒಪ್ಪಂದದ ದೇಶೀ ಪಾಲುದಾರ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಸರ್ಕಾರದ ನಿರ್ಧಾರವನ್ನು ಅನುಮಾನಿಸುವ ಪ್ರಮೇಯವೇ ಇಲ್ಲ. ಖಾಸಗಿ ವ್ಯಕ್ತಿಗಳಿಗೆ ಲಾಭವಾಗುವಂತೆ ಪಕ್ಷಪಾತ ಮಾಡಿರುವ ಆರೋಪಕ್ಕೆ ಸಾಕ್ಷ್ಯಾಧಾರಗಳಿಲ್ಲ. ಒಪ್ಪಂದ ಸಂಬಂಧ ಬೆಲೆಯ ಪರಾಮರ್ಶೆ ನಡೆಸುವುದು ಕೋರ್ಟ್ ಕೆಲಸವಲ್ಲ. ಬೆಲೆ ಪರಾಮರ್ಶೆ, ಖರೀದಿ ಹಾಗೂ ದೇಶೀ ಪಾಲುದಾರನ ಆಯ್ಕೆ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕಾದ ಅಗತ್ಯ ಕಾಣುತ್ತಿಲ್ಲ ಎಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಜೆಪಿಸಿ ರಚನೆ ಇಲ್ಲ: ಯುದ್ಧ ವಿಮಾನ ಖರೀದಿ ಕುರಿತ ತನಿಖೆಗೆ ಜಂಟಿ ಸದನ ಸಮಿತಿ ರಚಿಸಬೇಕೆಂದು ಪ್ರತಿಪಕ್ಷಗಳು ಸಂಸತ್​ನಲ್ಲಿ ಪ್ರತಿಭಟಿಸುತ್ತಿರುವಾಗಲೇ ಈ ತೀರ್ಪು ಬಂದಿರುವುದು ಮಹತ್ವ ಪಡೆದಿದೆ. ಸುಪ್ರೀಂ ತೀರ್ಪಿನ ಹೊರತಾಗಿಯೂ ಸದನ ಸಮಿತಿ ರಚನೆಗೆ ಕಾಂಗ್ರೆಸ್ ಪಟ್ಟು ಹಿಡಿದಿದೆ. ಆದರೆ ಕೋರ್ಟ್ ತೀರ್ಪನ್ನು ಆಧಾರವಾಗಿಟ್ಟುಕೊಂಡಿರುವ ಕೇಂದ್ರ ಸರ್ಕಾರ, ಸಮಿತಿ ರಚನೆ ಸಾಧ್ಯತೆಯನ್ನು ಅಲ್ಲಗಳೆದಿದೆ.

ಅರ್ಜಿದಾರರ ಅಹವಾಲೇನು?

  • ಪ್ರಧಾನಿ ಮೋದಿ ಏಕಪಕ್ಷೀಯವಾಗಿ ಮಾಡಿರುವ ರಫೇಲ್ ಒಪ್ಪಂದ ರದ್ದುಪಡಿಸಿ, ವಿಮಾನ ಹಸ್ತಾಂತರಕ್ಕೆ ತಡೆ ನೀಡಬೇಕು, ರಕ್ಷಣಾ ಕ್ಷೇತ್ರದ ಹಿನ್ನೆಲೆ ಇಲ್ಲದ ರಿಲಯನ್ಸ್ ಜತೆಗಿನ ಆಫ್​ಸೆಟ್ ಖರೀದಿ ರದ್ದುಪಡಿಸಬೇಕು.
  • ಒಪ್ಪಂದದ ಕುರಿತು ಕೋರ್ಟ್ ಉಸ್ತುವಾರಿಯಲ್ಲಿ ಎಸ್​ಐಟಿ ರಚಿಸಿ ತನಿಖೆ ನಡೆಸಬೇಕು, ಸಿಬಿಐಗೆ ನೀಡಿರುವ ದೂರು ಆಧರಿಸಿ ಎಫ್​ಐಆರ್ ದಾಖಲಿಸಲು ನಿರ್ದೇಶಿಸಬೇಕು.

ಮುಂದೇನು?

  • ಫ್ರಾನ್ಸ್​ನ ಡಸಾಲ್ಟ್ ಕಂಪನಿಯಿಂದ ಯುದ್ಧ ವಿಮಾನ ಖರೀದಿ ಪ್ರಕ್ರಿಯೆಗೆ ವೇಗ
  • ತೀರ್ಪಿನ ಮರುಪರಿಶೀಲನೆಗೆ ಅರ್ಜಿ ಹಾಕುವ ಮೂಲಕ ಬಿಜೆಪಿಗೆ ವಿಪಕ್ಷಗಳು ಅಡ್ಡಿಯಾಗಬಹುದು

ಮೇಲ್ಮನವಿ

ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅರ್ಜಿದಾರರು ನಿರ್ಧರಿಸಿದ್ದಾರೆನ್ನಲಾಗಿದೆ.

ಬಿಜೆಪಿಗೇನು ಲಾಭ?

  • ಕೇಂದ್ರದ ಪಾರದರ್ಶಕತೆ ನಿರೂಪಿಸಿದ ಸುಪ್ರೀಂ ತೀರ್ಪನ್ನು ಲೋಕಸಮರ ಗೆಲ್ಲಲು ಬಳಸಿಕೊಳ್ಳುವುದು
  • ವಿಪಕ್ಷಗಳು ಷಡ್ಯಂತ್ರ ರೂಪಿಸಿರುವುದಕ್ಕೆ ಈ ಪ್ರಕರಣ ಸಾಕ್ಷಿ ಎಂದು ಪ್ರಚಾರ ನಡೆಸಬಹುದು.
  • ರಫೇಲ್ ಡೀಲ್ ಪೂರ್ಣಗೊಳಿಸಿ ಅದರ ಕ್ರೆಡಿಟ್ ತೆಗೆದುಕೊಳ್ಳುವುದು

ಕಾಂಗ್ರೆಸ್​ಗೇಕೆ ಆತಂಕ

  • ಮೋದಿ ಸರ್ಕಾರದ ವಿರುದ್ಧದ ಅಸ್ತ್ರ ತಪ್ಪಿಹೋಗಿದ್ದು, ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಹೊರಬಂದ ತೀರ್ಪು ಬಿಜೆಪಿಯ ಬಲ ಹೆಚ್ಚಿಸಬಹುದು
  • ಪಂಚರಾಜ್ಯ ಗೆಲುವು ತಂದ ಉತ್ಸಾಹ ಈ ತೀರ್ಪಿನಿಂದಾಗಿ ತಗ್ಗಬಹುದು