ಚುನಾವಣೆ ಸ್ಪರ್ಧೆ ನಿಷೇಧ ಅಧಿಕಾರ ಸ್ಪೀಕರ್​ಗಿಲ್ಲ; ಅನರ್ಹರ ಆಸೆ ಜೀವಂತ!

ನವದೆಹಲಿ: ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್​ನಿಂದ ಸದ್ಯದ ಮಟ್ಟಿಗೆ ಮಧ್ಯಂತರ ಪರಿಹಾರ ಸಿಗದಿದ್ದರೂ ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಲು ನಮ್ಮದೇನೂ ತಕರಾರಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗದ ವಕೀಲರು ಸುಪ್ರೀಂಕೋರ್ಟ್​ಗೆ ಸ್ಪಷ್ಟಪಡಿಸಿರುವುದರಿಂದ ಮುಂದಿನ ದಿನಗಳಲ್ಲಿ ಶುಭ ಸುದ್ದಿ ದೊರಕುವ ಸುಳಿವಂತೂ ಹೊರಬಿದ್ದಿದೆ.

ಶನಿವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಾಜ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್, ಸ್ಪೀಕರ್ ಆದೇಶದ ಪ್ರಕಾರ ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ತಿಳಿಸಿದ್ದರು. ಆದರೆ, ಚುನಾವಣಾ ಆಯೋಗದ ಪರ ವಿಚಾರಣೆ ವೇಳೆ ಹಾಜರಾದ ವಕೀಲ ರಾಕೇಶ್ ದ್ವಿವೇದಿ, ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಆದೇಶ ನೀಡುವ ಅಧಿಕಾರ ಸ್ಪೀಕರ್​ಗಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಆದರೆ, ಚುನಾವಣಾ ದಿನಾಂಕವನ್ನು ಯಾವುದೇ ಕಾರಣಕ್ಕೂ ಮುಂದೂಡಲು ಸಾಧ್ಯವಿಲ್ಲ ಎಂದು ನ್ಯಾ.ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ವಿವರಿಸಿದರು.

ಆಯೋಗದ ವಾದಕ್ಕೆ ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಪರ ವಕೀಲ ಕಪಿಲ್ ಸಿಬಲ್, ಶಾಸಕರು ಅನರ್ಹಗೊಂಡಿರುವಾಗ ಅವರ ಪ್ರಕರಣ ಇತ್ಯರ್ಥವಾಗದೆ ಚುನಾವಣೆಯಲ್ಲಿ ಸ್ಪರ್ಧೆಗೆ ಆಯೋಗ ಅವಕಾಶ ನೀಡುವಂತಿಲ್ಲ. ಮೇಲಾಗಿ ಈ ಪ್ರಕರಣದಲ್ಲಿ ಆಯೋಗ ಪಾಲುದಾರ ಪಕ್ಷವೇ ಅಲ್ಲ ಎಂದು ಅಸಮಾಧಾನ ಹೊರಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ವಕೀಲ ದ್ವಿವೇದಿ, ಪ್ರಕರಣದಲ್ಲಿ ನಮ್ಮನ್ನು ಪಾರ್ಟಿ ಮಾಡುವುದಕ್ಕೆ ನಮ್ಮದೇನೂ ವಿರೋಧವಿಲ್ಲ. ಸ್ಪರ್ಧೆಯಿಂದ ಅನರ್ಹರನ್ನು ತಡೆಯುವಂತಿಲ್ಲ.

ಈ ಬಗ್ಗೆ ಸ್ಪಷ್ಟತೆ ಇಟ್ಟುಕೊಂಡೇ ಈ ಹೇಳಿಕೆ ನೀಡುತ್ತಿದ್ದೇವೆ. ಏಕೆ ತಡೆಯುವಂತಿಲ್ಲ ಎಂಬ ಬಗ್ಗೆಯೂ ನ್ಯಾಯಪೀಠ ವಿಚಾರಣೆ ನಡೆಸಲಿ ಎಂದು ಉತ್ತರಿಸಿದರು.

ಸಿದ್ದುಗೆ ನೋಟಿಸ್: ಈ ಪ್ರಕರಣದಲ್ಲಿ ನಮ್ಮ ಅಭಿಪ್ರಾಯ ಕೇಳದೆ ಯಾವುದೇ ಆದೇಶ ಪ್ರಕಟಿಸಬಾರದು ಎಂದು ಅನರ್ಹರ ವಿರುದ್ಧದ ದೂರುದಾರರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನ್ಯಾಯಾಲಯಕ್ಕೆ ಕೇವಿಯಟ್ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅನರ್ಹರ ಮೇಲ್ಮನವಿಗೆ ಉತ್ತರ ನೀಡುವಂತೆ ಇಬ್ಬರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಆಕ್ಷೇಪಣೆಗಳನ್ನು ಬುಧವಾರ ಸಲ್ಲಿಸುವಂತೆ ಸೂಚಿಸಲಾಗಿದೆ. ಬುಧವಾರ ಅನರ್ಹರ ಪರ ಮುಕುಲ್ ರೋಹಟ್ಗಿ ವಾದ ಮುಂದುವರಿಸಲಿದ್ದಾರೆ. ಗುರುವಾರ ಸಿಬಲ್ ವಾದ ಮಂಡಿಸಲಿದ್ದಾರೆ. ಶುಕ್ರವಾರ ಆದೇಶ ಹೊರಬೀಳುವ ನಿರೀಕ್ಷೆಯಿದೆ.

ಸ್ಪೀಕರ್ ವಾದದ ಕುತೂಹಲ: ಸ್ಪೀಕರ್ ತೀರ್ವನವೇ ಚರ್ಚೆಯ ಕೇಂದ್ರಬಿಂದು ವಾಗಿರುವುದರಿಂದ ಸ್ಪೀಕರ್ ಕಚೇರಿಗೂ ನೋಟಿಸ್ ಜಾರಿಯಾಗಿದೆ. ಹೀಗಾಗಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಚೇರಿಯ ಪರವಾಗಿ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮುಂದಿನ ವಿಚಾರಣೆಯಲ್ಲಿ ಹಾಜರಾಗುವ ಸಾಧ್ಯತೆಯಿದೆ. ಕಳೆದ ಬಾರಿ ಸ್ಪೀಕರ್ ತೆಗೆದುಕೊಂಡ ನಿರ್ಧಾರದಲ್ಲಿ ಸಾಕಷ್ಟು ಲೋಪಗಳಿದ್ದವು. ನೈಸರ್ಗಿಕ ನ್ಯಾಯಪಾಲನೆಯಲ್ಲಿ ಸ್ಪೀಕರ್ ಕಚೇರಿ ವಿಫಲವಾಗಿತ್ತು. ಅನರ್ಹರಿಗೆ ಸೂಕ್ತ ಕಾಲಾವಕಾಶವನ್ನೂ ನೀಡಿರಲಿಲ್ಲ. ಹೀಗಾಗಿ, ಅವರಿಗೆ ಮಧ್ಯಂತರ ಪರಿಹಾರ ನೀಡುವ ಬಗ್ಗೆ ನ್ಯಾಯಾಲಯ ಯೋಚಿಸಬೇಕು ಎಂದು ಸ್ಪೀಕರ್ ಪರ ವಕೀಲರು ವಾದಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ದುರುದ್ದೇಶದ ಅನರ್ಹತೆ

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಶಾಸಕರ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಅನರ್ಹ ಶಾಸಕರಿಗೆ ನೋಟಿಸ್ ನೀಡಿ ಉತ್ತರ ನೀಡಲು 7 ದಿನಗಳ ಕಾಲ ಅವಕಾಶ ನೀಡಬೇಕಿತ್ತು. ವಿಧಾನಸಭೆ ಕಾರ್ಯ ಕಲಾಪಗಳ ನಿಯಮದಲ್ಲೂ ಇದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ ಸ್ಪೀಕರ್ ಕೇವಲ 3 ದಿನಗಳ ಅವಕಾಶ ನೀಡಿ ರಾಜೀನಾಮೆಯನ್ನೂ ಸಮ್ಮತಿಸದೆ, ನೇರವಾಗಿ ಶಾಸಕರನ್ನು ಅನರ್ಹಗೊಳಿಸಿದ ನಿರ್ಧಾರ ಪ್ರಕಟಿಸಿದರು. ಇದು ಕಾನೂನು ಬಾಹಿರ ಎಂದು ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹಟ್ಗಿ ನ್ಯಾಯಪೀಠದ ಗಮನಸೆಳೆದರು. ಸ್ಪೀಕರ್​ಗೆ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರವಿದೆಯೇ ವಿನಃ ಇಂತಿಷ್ಟು ಅವಧಿಗೆ ಅವರು ಅನರ್ಹರಾಗಿರಲಿದ್ದಾರೆ ಹಾಗೂ ಆ ಅವಧಿ ಪೂರ್ಣಗೊಳ್ಳುವ ತನಕ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಸಮಯ ನಿಗದಿಪಡಿಸುವ ಅಧಿಕಾರವಿಲ್ಲ. ಕರ್ನಾಟಕದ ಮಾಜಿ ಸ್ಪೀಕರ್ ಅಧಿಕಾರದ ವ್ಯಾಪ್ತಿ ಮೀರಿ ಶಾಸಕರ ವಿರುದ್ಧ ದುರುದ್ದೇಶವಿಟ್ಟುಕೊಂಡೇ ಅನರ್ಹತೆಯ ಆದೇಶ ಪ್ರಕಟಿಸಿದ್ದಾರೆ. ಹೀಗಾಗಿ, ಒಂದೋ ಉಪ ಚುನಾವಣೆ ಪ್ರಕ್ರಿಯೆಗೆ ತಡೆ ನೀಡಬೇಕು, ಇಲ್ಲವೇ ಸ್ಪರ್ಧಿಸಲು ಅನರ್ಹರಿಗೆ ಅನುಮತಿ ನೀಡಬೇಕು ಎಂದು ರೋಹಟ್ಗಿ ಪ್ರಬಲ ವಾದ ಮಂಡಿಸಿದರು.

ಆಯೋಗದ ಅಚ್ಚರಿ ನಡೆ

ಅನರ್ಹರ ಪ್ರಕರಣದ ವಿಚಾರಣೆಯಲ್ಲಿ ಆಯೋಗದ ಪರ ವಕೀಲರು ನ್ಯಾಯಾಲಯ ನೋಟಿಸ್ ನೀಡದೆಯೇ ಹಾಜರಾಗಿದ್ದು ಬಹುತೇಕರಲ್ಲಿ ಅಚ್ಚರಿ ತರಿಸಿತು. ಸಾಮಾನ್ಯವಾಗಿ ಯಾವುದೇ ಪ್ರಕರಣದಲ್ಲಾಗಲಿ ಸುಪ್ರೀಂಕೋರ್ಟ್ ನೋಟಿಸ್ ನೀಡದೆಯೇ ಸ್ವಯಂಪ್ರೇರಿತರಾಗಿ ಮೂರನೇ ಪಾರ್ಟಿಗಳು ವಿಚಾರಣೆಗೆ ಹಾಜರಾಗುವುದು ಕಡಿಮೆ. ಆದರೆ ಸದರಿ ಪ್ರಕರಣದಲ್ಲಿ ಚುನಾವಣಾ ಆಯೋಗ ಕೋರ್ಟ್ ನೋಟಿಸ್​ಕಾಯದೆಯೇ ನ್ಯಾಯಪೀಠದ ಮುಂದೆ ಹೇಳಿಕೆ ನೀಡಲು ಮುಂದಾಯಿತು. ಆಯೋಗ ಬಂದು ವಾದಿಸಿದ್ದಕ್ಕೆ ಕಪಿಲ್ ಸಿಬಲ್ ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರಕರಣದಲ್ಲಿ ಆಯೋಗವನ್ನು ಪಾರ್ಟಿಯನ್ನಾಗಿ ಮಾಡುವ ಕುರಿತು ಮಧ್ಯಂತರ ಅರ್ಜಿಯೊಂದನ್ನು ಸಲ್ಲಿಸಬೇಕು ಎಂದು ನ್ಯಾಯಪೀಠ ಅನರ್ಹರ ಪರ ವಕೀಲರಿಗೆ ಸೂಚಿಸಿತು.

ಅನರ್ಹರ ಮೂಲ ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ವಾದಿಸುವುದು ಬೇಡ. ಅವರು ಕೇಳಿರುವ ಮಧ್ಯಂತರ ಪರಿಹಾರಕ್ಕೆ ಸೀಮಿತವಾಗಿ ವಾದಿ-ಪ್ರತಿವಾದಿಗಳು ತಮ್ಮ ವಿಚಾರಗಳನ್ನು ಮಂಡಿಸಬೇಕು. ಬುಧವಾರ ಮತ್ತು ಗುರುವಾರದ ಒಳಗಾಗಿ ವಾದ ಮುಕ್ತಾಯವಾಗಬೇಕು.

| ನ್ಯಾ.ಎನ್.ವಿ. ರಮಣ ಸುಪ್ರೀಂಕೋರ್ಟ್ ನ್ಯಾಯಮೂರ್ತಿ

 

Leave a Reply

Your email address will not be published. Required fields are marked *