ಭಾರತೀಯರ ತೆರಿಗೆ ಹಣವನ್ನು ಲಂಡನ್‌ ಕಾನೂನು ಶುಲ್ಕಕ್ಕಾಗಿ ಎಸ್​ಬಿಐ ವ್ಯರ್ಥಮಾಡುತ್ತಿದೆ: ವಿಜಯ್‌ ಮಲ್ಯ

ಲಂಡನ್: ವಿವಿಧ ಬ್ಯಾಂಕುಗಳಲ್ಲಿ ಕೋಟ್ಯಂತರ ರೂಪಾಯಿ ಸಾಲಮಾಡಿ ತಲೆಮರೆಸಿಕೊಂಡು ಬ್ರಿಟನ್‌ಗೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಇದೀಗ ಎಸ್‌ಬಿಐ ಬ್ಯಾಂಕ್‌ನ್ನು ತರಾಟೆಗೆ ತೆಗೆದುಕೊಂಡಿದ್ದು, ಲಂಡನ್‌ನಲ್ಲಿ ತನ್ನ ವಿರುದ್ಧದ ವಂಚನೆ ಪ್ರಕರಣವನ್ನು ಮುಂದುವರಿಸಲು ಕಾನೂನು ಶುಲ್ಕವನ್ನು ಕಟ್ಟುವ ಮೂಲಕ ಭಾರತೀಯ ತೆರಿಗೆದಾರರ ಹಣವನ್ನು ವ್ಯರ್ಥಗೊಳಿಸುತ್ತಿದೆ ಎಂದು ಹೇಳಿದ್ದಾರೆ.

ಭಾರತೀಯ ತೆರಿಗೆದಾರರ ಹಣದಲ್ಲಿ ಎಸ್‌ಬಿಐ ವಕೀಲರು ನನ್ನ ವಿರುದ್ಧವಾಗಿ ತಮ್ಮ ಸಾಧನೆಗಳನ್ನು ತೋರಿಸುತ್ತಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿರುವಂತೆ ನನ್ನ ಸಾಲದ ಸಂಪೂರ್ಣ ಮೊತ್ತವನ್ನು ಭಾರತದಲ್ಲಿಯೇ ವಸೂಲಿ ಮಾಡಲಾಗಿದೆ ಎಂದಿದ್ದಾರೆ ಎಂದು ಮಲ್ಯ ಟ್ವೀಟ್‌ ಮೂಲಕ ಕುಟುಕಿದ್ದಾರೆ.

ಮಾಧ್ಯಮಗಳು ಸೆನ್ಸೇಷನಲ್‌ ಹೆಡ್‌ಲೈನ್‌ಗಳನ್ನಷ್ಟೇ ಪ್ರೀತಿಸುತ್ತವೆ. ಆದರೆ, ಸಾರ್ವಜನಿಕ ವಲಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತಮ್ಮಿಂದ ಹಣ ವಸೂಲಿಗಾಗಿ ನೀಡಿದ ಕಾನೂನು ಶುಲ್ಕವನ್ನು ಯಾರೊಬ್ಬರು ಪ್ರಶ್ನಿಸುತ್ತಿಲ್ಲ ಏಕೆ? ನಾನು ಭಾರತದಲ್ಲಿ ಶೇ.100ರಷ್ಟು ಸಾಲ ತೀರಿಸುತ್ತೇನೆ ಎಂದು ಹೇಳಿದರೂ ಕೂಡ ಎಸ್ ಬಿಐ ಅನಗತ್ಯವಾಗಿ ಹಣ ಖರ್ಚು ಮಾಡುತ್ತಿದೆ. ಲಂಡನ್‌ನಲ್ಲಿರುವ ನನಗೆ ಸೇರಿದ ಕೆಲವು ಆಸ್ತಿಯನ್ನು ಈಗಾಗಲೇ ಮಾರಾಟ ಮಾಡಿ ಶೇ.50ರಷ್ಚು ಹಣ ಪಡೆಯಲಾಗಿದೆ. ಇನ್ನುಳಿದ ಆಸ್ತಿ ಮಾರಾಟ ಮಾಡಿದರೂ ಸಿಬಿಐಗೆ ಕಾನೂನು ಶುಲ್ಕ ಭರಿಸಲು ಆಗುವುದಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

62 ವರ್ಷದ ವಿಜಯ್ ಮಲ್ಯ ದೇಶದ ವಿವಿಧ ಬ್ಯಾಂಕುಗಳಲ್ಲಿ 9 ಸಾವಿರ ಕೋಟಿ ಸಾಲ ಮಾಡಿ ಮರುಪಾವತಿ ಮಾಡದೆ ದೇಶಬಿಟ್ಟು ಹೋಗಿರುವ ಉದ್ಯಮಿ ವಿಜಯ್​ ಮಲ್ಯ ಲಂಡನ್​ನಲ್ಲಿ ವಾಸಿಸುತ್ತಿದ್ದಾರೆ. ಮಾ. 2016 ರಲ್ಲಿ ದೇಶದಿಂದ ಪರಾರಿಯಾಗಿರುವ ಮಲ್ಯ ಗಡಿಪಾರಿಗೆ ಭಾರತ ಮನವಿ ಸಲ್ಲಿಸಿತ್ತು.

ವಿಜಯ್ ಮಲ್ಯ ಗಡಿಪಾರು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ಲಂಡನ್ ಕೋರ್ಟ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ಡಿಸೆಂಬರ್​ನಲ್ಲೇ ತೀರ್ಪು ನೀಡಿತ್ತು. ನಂತರ ಭಾರತ ತನಿಖಾ ದಳಗಳು ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಅನುಮತಿ ನೀಡಬೇಕು ಎಂದು ಯುಕೆ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದವು. ಅದಕ್ಕೆ ಸಮ್ಮತಿ ಸೂಚಿಸಿರುವ ಅಲ್ಲಿನ ಗೃಹ ಸಚಿವಾಲಯ ಗಡೀಪಾರು ದಾಖಲೆಗಳಿಗೆ ಸಹಿ ಮಾಡಿತ್ತು. (ಏಜೆನ್ಸೀಸ್)