ಎಸ್​ಬಿಐನ ಡೆಬಿಟ್​ ಕಾರ್ಡ್​ ಇದ್ದರೆ ಬಿಂದಾಸ್​ ಆಗಿ ಶಾಪಿಂಗ್​ ಮಾಡಿ: ಮಾಸಿಕ ಕಂತುಗಳಲ್ಲಿ ಮರುಪಾವತಿಸಿ!

ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್​ ಎಂಬ ಹೆಗ್ಗಳಿಕೆಯ ಭಾರತೀಯ ಸ್ಟೇಟ್​ ಬ್ಯಾಂಕ್​ (ಎಸ್​ಬಿಐ) ಡೆಬಿಟ್​ ಕಾರ್ಡ್​ ಹೊಂದಿರುವ ತನ್ನ ಗ್ರಾಹಕರಿಗಾಗಿ ವಿಶೇಷವಾದ ಸಾಲಸೌಲಭ್ಯವನ್ನು ಆರಂಭಿಸಿದೆ. ಗ್ರಾಹಕರು ತಮ್ಮ ಇಷ್ಟದ ವಸ್ತುಗಳನ್ನು ಡೆಬಿಟ್​ ಕಾರ್ಡ್​ಗಳನ್ನು ಬಳಸಿ ಖರೀದಿಸಬಹುದು. ಬಳಿಕ 6ರಿಂದ 18 ತಿಂಗಳ ಅವಧಿಯಲ್ಲಿ ಆ ವಸ್ತುವಿನ ಸಾಲವನ್ನು ಮಾಸಿಕ ಸಮಾನ ಕಂತುಗಳಲ್ಲಿ (ಇಎಂಐ) ಮರುಪಾವತಿಸಬಹುದು.

ಎಸ್​ಬಿಐ ಈ ಸೌಲಭ್ಯವನ್ನು ಅ.7ರಿಂದ ಆರಂಭಿಸಿದೆ. ಇದಕ್ಕೆ ಡೆಬಿಟ್​ ಕಾರ್ಡ್​ ಇಎಂಐ ಫೆಸಿಲಿಟಿ ಎಂದು ನಾಮಕರಣ ಮಾಡಿದೆ. ಪ್ರಸ್ತುತ ಇರುವ ಬ್ಯಾಂಕ್​ನ ಗ್ರಾಹಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ರಾಷ್ಟ್ರದ 1,500 ನಗರಗಳಲ್ಲಿ ಪೈನ್​ ಲ್ಯಾಬ್ಸ್ ಬ್ರ್ಯಾಂಡ್​ನ ಪಾಯಿಂಟ್​ ಆಫ್​ ಸೇಲ್ಸ್​ ಮಷಿನ್​ (ಪಿಒಎಸ್​) ಹೊಂದಿರುವ 40 ಸಾವಿರಕ್ಕೂ ಹೆಚ್ಚು ಮರ್ಚೆಂಟ್​ ಮತ್ತು ಮಾರಾಟ ಕೇಂದ್ರಗಳಲ್ಲಿ ಈ ಸೌಲಭ್ಯ ದೊರೆಯಲಿದೆ.
ಈ ಸೌಲಭ್ಯದ ಅನುಕೂಲಗಳು

ಯಾವುದೇ ಅರ್ಜಿ ತುಂಬುವ, ಪರಿಶೀಲಿಸುವ ಗೋಜಿಲ್ಲದೆ, ಅರ್ಜಿ ವಿಲೇವಾರಿ ಶುಲ್ಕವಿಲ್ಲದೆ, ಬ್ಯಾಂಕ್​ನ ಯಾವುದೇ ಶಾಖೆಗೆ ಎಡತಾಕುವ ತೊಂದರೆಯಿಲ್ಲದೆ, ತಕ್ಷಣದಲ್ಲೇ ಸಾಲ ವಿತರಣೆಯನ್ನು ಖಾತರಿಪಡಿಸಿಕೊಳ್ಳುವ ಜತೆಗೆ, ಆಯ್ದ ಬ್ರ್ಯಾಂಡ್​ಗಳ ವಸ್ತುಗಳನ್ನು ಖರೀದಿಸಿ, ಮಾಸಿಕ ಸಮಾನ ಕಂತುಗಳಲ್ಲಿ ಸಾಲ ಮರುಪಾವತಿಸುವ ಸೌಲಭ್ಯ ದೊರೆಯುತ್ತದೆ.

ಹಾಲಿ ಇರುವ ಉಳಿತಾಯ ಖಾತೆಯ ಮೂಲಕ ಒಂದು ನಿಮಿಷದ ಒಳಗಾಗಿ ಗ್ರಾಹಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ವಸ್ತುವನ್ನು ಖರೀದಿಸಿ ಒಂದು ತಿಂಗಳ ಬಳಿಕ ಇಎಂಐ ಪಾವತಿ ಆರಂಭವಾಗುತ್ತದೆ.
ಸೌಲಭ್ಯ ಪಡೆಯುವ ಅರ್ಹತೆಗಳು

ಸ್ವಚ್ಚವಾದ ಸಾಲ ಮರುಪಾವತಿಯ ಇತಿಹಾಸ ಹೊಂದಿರುವವರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇಂಥ ಗ್ರಾಹಕರಿಗೆ ಬ್ಯಾಂಕ್​ನಿಂದ ನಿರಂತರವಾಗಿ ಎಸ್​ಎಂಎಸ್​ ಮತ್ತು ಇಮೇಲ್​ ಮೂಲಕ ಮಾಹಿತಿ ನೀಡಲಾಗುತ್ತದೆ. ಅರ್ಹತೆಯನ್ನು ಪರಿಶೀಲಿಸಿಕೊಳ್ಳಲು ಗ್ರಾಹಕರು DCEMI ಎಂದು ಟೈಪ್​ ಮಾಡಿ, 567676 ಸಂಖ್ಯೆಗೆ ನೋಂದಾಯಿತ (ಉಳಿತಾಯ ಖಾತೆಗೆ ಜೋಡಣೆಗೊಂಡಿರುವ ಮೊಬೈಲ್​ಫೋನ್​ ಸಂಖ್ಯೆ) ಮೊಬೈಲ್​ಫೋನ್​ ಮೂಲಕ ಎಸ್​ಎಂಎಸ್​ ಕಳುಹಿಸಿ, ಮಾಹಿತಿ ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *