ಮೊದಲ ತ್ರೈಮಾಸಿಕದಲ್ಲಿ ಎಸ್​ಬಿಐಗೆ 4,876 ಕೋಟಿ ರೂ. ನಷ್ಟ

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಯ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ಸತತ ಮೂರನೇ ತ್ರೈಮಾಸಿಕದಲ್ಲಿ ನಷ್ಟ ಅನುಭವಿಸಿದೆ.

ಶುಕ್ರವಾರ 2018-19ನೇ ಸಾಲಿನ (ಏಪ್ರಿಲ್ -ಜೂನ್) ಮೊದಲ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದ ಎಸ್​ಬಿಐ 4,875.75 ಕೋಟಿ ರೂ, ನಷ್ಟವಾಗಿದೆ ಎಂದಿದೆ.

ಪ್ರಸ್ತುತ ತ್ರೈಮಾಸಿಕದಲ್ಲಿ ಒಟ್ಟಾರೆ ಆದಾಯ 65,492.67 ಕೋಟಿ ರೂ. ಇದೆ. ಕಳೆದ ತ್ರೈಮಾಸಿಕದ ಹೋಲಿಕೆಯಲ್ಲಿ ಈ ಬಾರಿ ಅನುತ್ಪಾದಕ ಆಸ್ತಿಗಳ (ಎನ್​ಪಿಎ) ಮೌಲ್ಯ ಶೇ. 10.69ಕ್ಕೆ ಕುಸಿದಿದೆ. ಕಳೆದ ತ್ರೈಮಾಸಿಕದಲ್ಲಿ ಎನ್​ಪಿಎ ಶೇ. 10.91ರಷ್ಟಿತ್ತು ಎಂದು ಬ್ಯಾಂಕ್​ ತಿಳಿಸಿದೆ.

ವರದಿ ಬಿಡುಗಡೆ ಹಿನ್ನೆಲೆ ಎಸ್​ಬಿಐ ಷೇರುಗಳ ಮೌಲ್ಯ ಶೇ. 3.79 ಕುಸಿದಿದ್ದು ಮುಂಬೈ ಷೇರುಪೇಟೆಯಲ್ಲಿ ಪ್ರತಿ ಷೇರು 304.45 ರೂ. ದಾಖಲಾಗಿದೆ.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ ಅನುಮೋದಿಸಿರುವಂತೆ ಪ್ರಕರಣವೊಂದರಲ್ಲಿ 1,952.94 ಕೋಟಿ ರೂ. ಸ್ವಾಧೀನ ಬಾಕಿಯಿದೆ ಎಂದು ವರದಿಯಲ್ಲಿ ಬ್ಯಾಂಕ್ ಉಲ್ಲೇಖಿಸಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕ ವರದಿಯಲ್ಲಿ ಎಸ್​ಬಿಐ 2,005.53 ಕೋಟಿ ರೂ. ಲಾಭ ಘೋಷಿಸಿತ್ತು. (ಏಜೆನ್ಸೀಸ್​)