ಹೆಮ್ಮೆಯಿಂದ ಹೇಳಿ ನಾವೂ ಫಿಟ್!

| ಮಲ್ಲಿಕಾರ್ಜುನ ತಳವಾರ ಬೆಳಗಾವಿ

‘ನಾನು ಕೂಡ ಹೃತಿಕ್ ರೋಷನ್ ತರಹ ಬಾಡಿ ಬಿಲ್ಡ್ ಮಾಡಬೇಕು, ಪರಿಣೀತಿ ಚೋಪ್ರಾ ತರಹ ಅಂಗಸೌಷ್ಟವ ಹೊಂದಿರಬೇಕು’ ಎಂಬುದು ವಯಸ್ಸಿಗೆ ಬಂದ ಬಹುತೇಕ ಯುವಕ-ಯುವತಿಯರ ಸಾಮಾನ್ಯ ಆಸೆ. ‘ಹೇಗಾದರೂ ಸರಿ ಫಿಟ್ ಆಗಿರಬೇಕು’ ಎನ್ನುವುದು ಒಟ್ಟು ಯುವ ಸಮೂಹದ ಹಂಬಲವೂ ಹೌದು. ಆದರೆ ಫಿಟ್ ಆಗಿರುವುದು ಅಷ್ಟು ಸುಲಭವೇ? ಬದಲಾಗುತ್ತಿರುವ ಜೀವನ ಶೈಲಿ ಮನುಷ್ಯ ಜೀವನದ ಎಲ್ಲ ಕ್ರಿಯೆ-ಪ್ರಕ್ರಿಯೆಗಳ ಮೇಲೂ ಪರಿಣಾಮ ಬೀರುತ್ತಿದೆ. ವಯಸ್ಸಾದವರ ಕತೆ ಒತ್ತಟ್ಟಿಗಿರಲಿ. ಹದಿವಯಸ್ಸಿನ, ಯೌವ್ವನದಲ್ಲಿ ನೆಲ ಗುದ್ದಿ ನೀರು ತೆಗೆಯುವಂತಿರಬೇಕಿದ್ದ ಯಂಗಿಸ್ತಾನದ ಮೆಂಬರ್​ಗಳು ಕೂಡ ಈಗೀಗ ಮೆಟ್ಟಿಲುಗಳನ್ನು ಹತ್ತಲು ಏದುಸಿರು ಬಿಡುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಶಿಸ್ತಿಲ್ಲದ ಜೀವನ ಶೈಲಿ. ಯಾವುದೋ ಒಂದು ವ್ಯಸನ, ಎಂಥದೋ ಒತ್ತಡ, ಧಾವಂತ, ಅವಸರ… ಇವೆಲ್ಲವೂ ನಮ್ಮ ಜೀವನವನ್ನು ಯಾಂತ್ರಿಕಗೊಳಿಸಿಬಿಟ್ಟಿವೆ. ಹಾಗಿದ್ದರೂ ದೇಹವನ್ನು ಮೂಳೆ, ಮಾಂಸದ ಹಂದರ ಮಾತ್ರ ಎಂದುಕೊಂಡು ಉದಾಸೀನ ಮಾಡುವ ಕಾಲ ಇದಲ್ಲ. ತುರ್ತು ಸಾಧನೆಯ ಬೆನ್ನು ಬಿದ್ದಿರುವ ಈ ತಲೆಮಾರಿಗೆ ಆರೋಗ್ಯ ತುಂಬ ಮುಖ್ಯವಾದ ವಿಷಯ. ಆ ನಿಟ್ಟಿನಲ್ಲಿ ಯುವ ಸಮೂಹ ತಕ್ಕಮಟ್ಟಿಗಾದರೂ ಫಿಟ್ನೆಸ್ ಮಂತ್ರ ಜಪಿಸುತ್ತಿದೆ ಅನ್ನೋದು ಕೂಡ ಸುಳ್ಳಲ್ಲ.

ಫಿಟ್ನೆಸ್ ಸವಾಲ್ ವೈರಲ್: ಮೊನ್ನೆಯಷ್ಟೇ ಕೇಂದ್ರದ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ‘ಹಮ್ ಫಿಟ್ ಹೈ ತೋ ಇಂಡಿಯಾ ಫಿಟ್’ ಎಂಬ ಅಭಿಯಾನ ಆರಂಭಿಸಿದ್ದಾರೆ. ಅಭಿಯಾನ ಮುಂದುವರಿಸುವ ಸಲುವಾಗಿ ತಾವು ವರ್ಕೌಟ್ ಮಾಡುತ್ತಿರುವ ವಿಡಿಯೋ ತಯಾರಿಸಿ ಅದನ್ನು ದೇಶದ ಹೆಸರಾಂತ ಕ್ರೀಡಾಪಟುಗಳಿಗೆ ಟ್ವಿಟರ್ ಮೂಲಕ ಟ್ಯಾಗ್ ಮಾಡಿದ್ದಾರೆ. ‘ನೀವೂ ಹೀಗೆ ವರ್ಕೌಟ್ ಮಾಡಿ ವಿಡಿಯೋ ಷೇರ್ ಮಾಡಿ’ ಎಂದು ಸವಾಲು ಹಾಕಿದ್ದಾರೆ. ಅವರ ಸವಾಲು ಸ್ವೀಕರಿಸಿದ ಕ್ರಿಕೆಟಿಗ, ಚೇಸಿಂಗ್ ಕಿಂಗ್ ವಿರಾಟ್ ಕೊಹ್ಲಿ ತಾವು ವರ್ಕೌಟ್ ಮಾಡುತ್ತಿರುವ ವಿಡಿಯೋ ಹಾಕಿದ್ದಾರೆ. ಅದೇ ಸವಾಲನ್ನು ಪ್ರಧಾನಿ ನರೇಂದ್ರ ಮೋದಿ, ಪತ್ನಿ ಅನುಷ್ಕಾ ಶರ್ಮಾ ಹಾಗೂ ಇತರರಿಗೆ ಕೊಹ್ಲಿ ರವಾನಿಸಿದ್ದಾರೆ. ಕೊಹ್ಲಿಯ ಸವಾಲನ್ನು ಮೋದಿ ತಕ್ಷಣ ಸ್ವೀಕರಿಸಿದ್ದಾರೆ. ‘ಶೀಘ್ರವೇ ನನ್ನ ಫಿಟ್ನೆಸ್ ಸಾಬೀತುಪಡಿಸುವ ವಿಡಿಯೋ ಬಿಡುಗಡೆ ಮಾಡುವೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಅದೇ ಸವಾಲು ಒಬ್ಬರಿಂದ ಒಬ್ಬರಿಗೆ ರವಾನೆಯಾಗುತ್ತಿದ್ದು ಕೆಲವೇ ದಿನಗಳಲ್ಲಿ ಇಡೀ ದೇಶವೇ ‘ಹಮ್ ಫಿಟ್ ಹೈ ತೋ ಇಂಡಿಯಾ ಫಿಟ್’ ಎಂದರೂ ಆಶ್ಚರ್ಯವಿಲ್ಲ.

ಫಿಟ್ ಆಗಿರಲು ಏನು ಮಾಡಬೇಕು?

# ದೈಹಿಕವಾಗಿ ಫಿಟ್ ಆಗಿರುವುದೆಂದರೆ ಮಾನಸಿಕವಾಗಿಯೂ ಫಿಟ್ ಆಗುರುವುದೆಂದೇ ಅರ್ಥ. ಹಾಗಾಗಿ ಮನೋದೈಹಿಕ ಸದೃಢತೆಗೆ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಒಂದು ಆರೋಗ್ಯಕರ ಶಿಸ್ತಿನ ಜೀವನ ಶೈಲಿ ರೂಢಿಸಿಕೊಳ್ಳಬೇಕು.

# ಫಿಟ್ ಆಗಿರಲು ನಿಯಮಿತ ಆಹಾರ ಕ್ರಮವನ್ನು ಪಾಲಿಸುವುದು ಅತ್ಯಂತ ಮುಖ್ಯ. ಜಂಕ್​ಫುಡ್ ದಾಸರಾಗಿ ವ್ಯಾಯಾಮ ಮಾಡಿ ಕೊಬ್ಬು ಕರಗಿಸಲು ಹೆಣಗುವುದಕ್ಕಿಂತ ಆರೋಗ್ಯಕರ ಆಹಾರ ಶೈಲಿ ರಕ್ಷಿೂಢಿಸಿಕೊಳ್ಳುವುದು ಒಳಿತು.

# ದೇಹ ಫಿಟ್ ಆಗಿರಲು ಸಮತೋಲಿತ ನಿದ್ರೆ ಬೇಕೇಬೇಕು. ಹಾಗಾಗಿ ಪ್ರತಿದಿನ ಬೇಗ ಮಲಗಿ ಬೇಗ ಏಳುವುದನ್ನು ರೂಢಿಸಿಕೊಳ್ಳಬೇಕು. ಪ್ರತಿದಿನ ಕನಿಷ್ಠ ಏಳು ಗಂಟೆಯಾದರೂ ನಿದ್ರೆ ಮಾಡಲು ಸಮಯ ಹೊಂದಿಸಿಕೊಳ್ಳಬೇಕು. ದೇಹಕ್ಕೆ ಅಗತ್ಯ ವಿಶ್ರಾಂತಿಯೂ ಬೇಕಾದ್ದರಿಂದ ಅದಕ್ಕೂ ಸಮಯ ಮಾಡಿಕೊಳ್ಳಬೇಕು.

# ದುಶ್ಚಟಗಳಾದ ಮದ್ಯಪಾನ, ಧೂಮಪಾನ, ತಂಬಾಕು ಜಗಿಯುವುದನ್ನು ತ್ಯೆಜಿಸಬೇಕು. ಟೀ ಹಾಗೂ ಕಾಫಿ, ಚೈನೀಸ್ ಫುಡ್, ಫಿಜ್ಜಾ-ಬರ್ಗರ್, ಕರಿದ ಲಘು ಆಹಾರ(ಚಾಟ್ಸ್), ಐಸ್ಕ್ರೀಂ ಸಹವಾಸವನ್ನು ಆದಷ್ಟು ಕಡಿಮೆ ಮಾಡಿಕೊಂಡರೆ ತನುಮನದ ಆರೋಗ್ಯಕ್ಕೆ ಒಳ್ಳೆಯದು.

# ಮೋಜು-ಮಸ್ತಿಯ ನೆಪದಲ್ಲಿ ದೇಹ ವಿಪರೀತ ದಣಿಯದಂತೆ ನೋಡಿಕೊಳ್ಳಬೇಕು. ಹೆಚ್ಚಿನ ಸುಸ್ತು ಉಂಟು ಮಾಡುವ ಮನೋದೈಹಿಕ ಒತ್ತಡದಿಂದ ದೇಹದ ಸಮತೋಲನ ತಪ್ಪುತ್ತದೆ.

# ಫಿಟ್ ಆಗಿರಲು ವ್ಯಾಯಾಮ ಎಷ್ಟು ಸಹಕಾರಿಯೋ ಅವುಗಳೊಂದಿಗೆ ಉತ್ತಮ ಓದು, ಚೇತೋಹಾರಿ ಸಂಗೀತ ಆಲಿಸುವಿಕೆ, ಪ್ರವಾಸ, ನಗು, ಭಾವನಾತ್ಮಕ ನಿಯಂತ್ರಣವೂ ಬೇಕಾಗುತ್ತದೆ. ದಿನವೊಂದಕ್ಕೆ ಆರು ಗಂಟೆ ವರ್ಕೌಟ್ ಮಾಡಿ ನಿದ್ರೆ ಇಲ್ಲದೆ ರಾತ್ರಿ ಕಳೆದರೆ ಪ್ರಯೋಜನವಾಗುವುದಿಲ್ಲ ಎಂಬುದನ್ನು ಮರೆಯಬಾರದು.

# ಹೊರಾಂಗಣದಲ್ಲಿ ವ್ಯಾಯಾಮ ಮಾಡಲು ಸಾಧ್ಯ ಆಗದವರು ಮನೆಯಲ್ಲೇ ಲಘು ವ್ಯಾಯಾಮ ಮಾಡಬಹುದು, ಟ್ರೆಡ್ ಮಿಲ್​ನಲ್ಲಿ ಓಟ, ಸರಳ ಯೋಗ, ತಾರಸಿ ಮೇಲೆ ನಡಿಗೆ, ಪ್ರಾಣಾಯಾಮದ ಮೂಲಕವೂ ಫಿಟ್ನೆಸ್ ಹೊಂದಬಹುದು.

# ಜಿಮ್ ಸೇರುವವರು ಒಳ್ಳೆಯ ಟ್ರೇನರ್ ನೋಡಿಕೊಳ್ಳಬೇಕು. ಮನೆಯಲ್ಲೇ ಜಿಮ್ ಸಲಕರಣೆಗಳನ್ನಿಟ್ಟುಕೊಂಡವರು ಕೂಡ ತರಬೇತುದಾರರ ಸಲಹೆ ಪಡೆದುಕೊಳ್ಳಬೇಕು. ಅವೈಜ್ಞಾನಿಕ ರೀತಿಯಲ್ಲಿ ವ್ಯಾಯಾಮ ಮಾಡುವುದರಿಂದ ಸ್ನಾಯು ಸೆಳೆತ, ಮೂಳೆ ಮುರಿತ, ಮೂಳೆ ಸವೆತ, ಸಂದುನೋವಿಗೆ ಈಡಾಗಬಹುದು. ಕೆಲವೊಮ್ಮೆ ಶಾಶ್ವತ ಊನಕ್ಕೂ ಕಾರಣವಾಗಬಹುದು. ಅದರೊಂದಿಗೆ ಸಮತೋಲಿತ ಆಹಾರ ಸೇವನೆ ರೂಢಿಸಿಕೊಂಡರೆ ಫಿಟ್ ದೇಹ ನೀಟ್ ಆಗುವುದರಲ್ಲಿ ಅನುಮಾನವಿಲ್ಲ.

# ಆಹಾರದೊಂದಿಗೆ ನೀರು ಸೇವನೆ ಪ್ರಮಾಣವೂ ಸಮತೋಲದಲ್ಲಿರಬೇಕು. ನೀರುನ್ನು ತುಸು ಹೆಚ್ಚೇ ಕುಡಿಯುವುದರಿಂದ ದೇಹದಲ್ಲಿ ನೀರಿನಾಂಶ ಹೆಚ್ಚಿರುವಂತೆ ನೋಡಿಕೊಳ್ಳಬೇಕು.

# ಬೆಳಗ್ಗೆದ್ದು ಕನಿಷ್ಠ ಪಕ್ಷ ವಾಕ್ ಮಾಡುವುದನ್ನಾದರೂ ರೂಢಿಸಿಕೊಳ್ಳಬೇಕು. ಅದಲ್ಲದೆ ಸೈಕ್ಲಿಂಗ್, ಈಜು, ಓಟ, ಆಟಗಳಲ್ಲಿ ಭಾಗಿಯಾಗುವುದು, ಡಾನ್ಸ್ ಮಾಡುವ ಮೂಲಕವೂ ಫಿಟ್ ಆಗಿರಬಹುದು. ಅದಕ್ಕೆ ಸಮಯ ಹೊಂದಿಸಿಕೊಂಡು ಶ್ರಮದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ದೇಹ ಫಿಟ್ ಆಗಿಸಬಹುದು.

ಏನೇನು ಪ್ರಯೋಜನ?

# ದೈಹಿಕವಾಗಿ ಫಿಟ್ ಆಗಿರುವುದರಿಂದ ಅನಾರೋಗ್ಯದ ಭಯದಿಂದ ಮುಕ್ತರಾಗಿರಬಹುದು.

# ದೇಹ ಫಿಟ್ ಆಗಿದ್ದರೆ ಅದರೊಂದಿಗೆ ಮನಸ್ಸು ಕೂಡ ಸಹಕರಿಸುವುದರಿಂದ ದೈನಂದಿನ ಚಟುವಟಿಕೆಗಳನ್ನು ಸಲೀಸಾಗಿ ಮಾಡಿ ಮುಗಿಸಲು ಚೈತನ್ಯ ಬರುತ್ತದೆ.

# ಆಕರ್ಷಕವಾದ ದೈಹಿಕ ನಿಲುವು ನಮ್ಮ ಒಟ್ಟಾರೆ ವ್ಯಕ್ತಿತ್ವಕ್ಕೊಂದು ಹೊಳಪು ನೀಡುವುದರಿಂದ ನಾವು ಗುಂಪಿನಲ್ಲೂ ಎದ್ದು ಕಾಣುತ್ತೇವೆ.

# ಫಿಟ್ ಆಗಿರುವುದರಿಂದ ಸಾಧಿಸುವ, ಗೆಲ್ಲುವ, ಹೋರಾಡುವ ಹುಮ್ಮಸ್ಸು ಇಮ್ಮಡಿಗೊಳ್ಳುತ್ತದೆ.

# ಆರೋಗ್ಯವಾಗಿದ್ದರೆ ದೇಹದಲ್ಲಿ ಬೊಜ್ಜು ಕಡಿಮೆಯಾಗಿ ನೋಡಲು ಸುಂದರವಾಗಿ ಕಾಣಬಹುದು.

# ಬದಲಾಗುತ್ತಿರುವ ಜಗತ್ತಿನಲ್ಲಿ ಋಣಾತ್ಮಕ ಜೀವನ ಶೈಲಿಯಿಂದ ಉಂಟಾಗುವ ಒತ್ತಡದಿಂದ ಮುಕ್ತರಾಗಲು ಸಹಾಯಕವಾಗುತ್ತದೆ.

# ಕುಳಿತು ಕೆಲಸ ಮಾಡುವವರನ್ನು ಕಾಡುವ ಸ್ನಾಯು ಸೆಳೆತ, ಸಂಧುನೋವು ಮುಂತಾದವುಗಳಿಂದ ಫಿಟ್ ಆಗಿದ್ದರೆ ದೂರ ಇರಬಹುದು.

# ಫಿಟ್ ಆಗಿದ್ದರೆ ಸಣ್ಣ ಸಣ್ಣ ಕಾಯಿಲೆಗಾಗಿ ಆಸ್ಪತ್ರೆಗೆ ಅಲೆಯುವುದು, ದುಡ್ಡು ಖರ್ಚಾಗುವುದು ತಪ್ಪುತ್ತದೆ.

# ಸ್ಪುರದ್ರೂಪಿತನ ಬಯಸುವ ವೃತ್ತಿಗಳಲ್ಲಿರುವವರು ಫಿಟ್ ಆಗಿದ್ದರೆ ಲಾಭ ಹೆಚ್ಚು. ಮಾಡೆಲ್​ಗಳು, ಚಿತ್ರನಟರು, ಕ್ರೀಡಾಪಟುಗಳು ಫಿಟ್ ಆಗಿದ್ದರೇನೆ ಚೆಂದ.

# ವೈದ್ಯರ ಸಲಹೆ ಪಾಲಿಸಿ ನಿಮಗೆ ಬೇಕಾದಂತೆ ದಪ್ಪ, ಸಣ್ಣ ಆಗುತ್ತೀರೆಂದು ಕೆಲ ಕಂಪನಿಗಳು ತೋರಿಸುವ ಔಷಧಗಳನ್ನು ಸೇವಿಸದಿರಿ. ಆರೋಗ್ಯದ ವಿಷಯದಲ್ಲಿ ವೈದ್ಯರ ಸಲಹೆ ಕೇಳಿಯೇ ಮುಂದುವರಿಯುವುದು ಉತ್ತಮ.

Leave a Reply

Your email address will not be published. Required fields are marked *