Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ವ್ಯಸನಮುಕ್ತವಾಗಲಿ ಜೀವನ

Wednesday, 01.08.2018, 3:04 AM       No Comments

| ಡಾ. ಆದಿತ್ಯ ಪಾಂಡುರಂಗಿ

ಆತ ಸುಂದರ ಯುವಕ. ಅಬ್ಬಬ್ಬಾ ಎಂದರೆ 24-25 ವರ್ಷ ವಯಸ್ಸು. ಒಳ್ಳೆಯ ಉದ್ಯೋಗ. ಕೈತುಂಬ ಸಂಬಳ. ಉತ್ತಮ ಹಾಗೂ ಆರ್ಥಿಕ ಸದೃಢತೆ ಹಿನ್ನೆಲೆಯ ಕುಟುಂಬದಿಂದ ಬಂದವ. ಆದರೆ ಆತನಿಂದ ಅವರ ಕುಟುಂಬದ ಸದಸ್ಯರ, ವಿಶೇಷವಾಗಿ ಪಾಲಕರ ಮಾನಸಿಕ ನೆಮ್ಮದಿ ಕಮರಿ ಹೋಗಿದೆ. ಹಗಲಿರುಳು ಆತನ ಆರೋಗ್ಯದ್ದೇ ಚಿಂತೆ ಅವರನ್ನು ಸುಡುತ್ತಿದೆ. ಇದಕ್ಕೆಲ್ಲ ಕಾರಣ ಆತನಿಗಿರುವ ಮದ್ಯವ್ಯಸನ.

ಹೌದು. ’ಮಗ ಉದ್ಯೋಗದಲ್ಲಿದ್ದಾನೆ. ಇನ್ನೇನು ಮದುವೆ ಮಾಡಿ ಸಂಸಾರ ಹೂಡಲು ಅಣಿಯಾಗಬೇಕು’ ಎಂದು ಪಾಲಕರು ಅಂದುಕೊಳ್ಳುವಷ್ಟರಲ್ಲಿ ಹುಡುಗ ಮದ್ಯದ ದಾಸನಾಗಿದ್ದಾನೆ. ಕಾಲೇಜು ದಿನಗಳಲ್ಲಿ ಹಾಗೂ ಕೆಲಸ ಆರಂಭಿಸಿದ ಮೇಲೆ ಸಿಕ್ಕ ಕೆಟ್ಟ ಸ್ನೇಹಿತರ ಸಹವಾಸದ ಪರಿಣಾಮವಿದು. ಇದು ಒಂದು ಉದಾಹರಣೆ ಅಷ್ಟೆ. ಇಂತಹ ಹಲವು ಪ್ರಕರಣಗಳು ನಮ್ಮೆದುರು ಇವೆ. ಅಮಲಿನ ಅಬ್ಬರಕ್ಕೆ ಸಿಲುಕಿಕೊಂಡ ಅನೇಕ ಯುವಕರು ಇಂದು ತಮ್ಮ ಕೈಯಾರೆ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಮನೆ ಮಂದಿಗೆಲ್ಲ ಕಷ್ಟ ಕೊಡುತ್ತಿದ್ದಾರೆ. ಭವಿಷ್ಯವನ್ನು ಅಂಧಕಾರಕ್ಕೆ ತಳ್ಳುತ್ತಿದ್ದಾರೆ. ಮಾನಸಿಕ, ಮನೋಸಾಮಾಜಿಕ ವೇದನೆಗಳನ್ನು ಬರಮಾಡಿಕೊಳ್ಳುತ್ತಿದ್ದಾರೆ.

ನಾವಿಂದು 21ನೇ ಶತಮಾನದಲ್ಲಿದ್ದೇವೆ. ಆಧುನಿಕತೆ ಮತ್ತು ವಿಜ್ಞಾನ ತಂತ್ರಜ್ಞಾನದ ಉತ್ತುಂಗದ ದಿನಗಳಿವು. ಜತೆಗೆ ಸೋಷಿಯಲೈಸ್ ಮಾಡಬೇಕು, ಲಿವಿಂಗ್ ಸ್ಟೆ ೖಲ್ ಚೆನ್ನಾಗಿರಬೇಕು ಎಂಬ ನೆಪದಲ್ಲಿ ಪ್ರತಿಷ್ಠೆಗೆ ಜೋತುಬಿದ್ದು ನಮಗರಿವಿಲ್ಲದೆ ಮದ್ಯಪಾನ ಆರಂಭಿಸಿ ಕ್ರಮೇಣ ಅದರ ದಾಸರಾಗುತ್ತಿದ್ದೇವೆ. ಸೋಷಿಯಲ್ ಸ್ಟೇಟಸ್ ಕಾಯ್ದುಕೊಳ್ಳಲು ಮದ್ಯದ ದಾಸರಾಗುವ ನಾವು ನಂತರ ಅದರ ಕಬಂಧ ಬಾಹುಗಳಲ್ಲಿ ಸಿಲುಕಿ ನಲುಗುತ್ತಿದ್ದೇವೆ. ಈ ಚಟ ವಿದ್ಯಾವಂತರಲ್ಲಿ ಒಂದು ಥರದ್ದಾದರೆ ಅನಕ್ಷರಸ್ಥರು ಮತ್ತು ಶ್ರಮಿಕ ವರ್ಗದವರಲ್ಲಿ ಮತ್ತೊಂದು ಥರ. ಅಮೆರಿಕಾದಲ್ಲಿ ಮದ್ಯ ಸೇವನೆಯಿಂದ ಸಾವು ಸಂಭವಿಸುವ ಪ್ರಮಾಣ 3ನೇ ಅತಿ ಹೆಚ್ಚಿನ ಕಾರಣವಾಗಿದೆ. ಭಾರತವೂ ಈ ವಿಚಾರದಲ್ಲಿ ಅಮೆರಿಕಾಕ್ಕೆ ಪೈಪೋಟಿ ಒಡ್ಡುವ ದಿನಗಳು ದೂರವಿಲ್ಲ ಎನ್ನುವ ಆತಂಕಕಾರಿ ಸ್ಥಿತಿಗೆ ನಾವು ಬಂದಿದ್ದೇವೆ. ನಮ್ಮ ದೇಶದಲ್ಲಿ ಶೇ.8ರಿಂದ ಶೇ.10ರಷ್ಟು ಪುರುಷ ಮದ್ಯವ್ಯಸನಿಗಳು ಕಂಡು ಬಂದರೆ ಈ ಪ್ರಮಾಣ ಮಹಿಳೆಯರಲ್ಲಿ ಶೇ.3ರಿಂದ ಶೇ.5ರಷ್ಟಿದೆ.

ಗಾಂಜಾ ಹಾವಳಿ: ಇತ್ತೀಚಿನ ವರ್ಷಗಳಲ್ಲಿ ಮದ್ಯದ ಜತೆಗೆ ತಂಬಾಕು ಹಾಗೂ ಗಾಂಜಾದಂತಹ ಮಾದಕ ವಸ್ತುಗಳ ಸೇವನೆಯ ಪ್ರಮಾಣವೂ ಹೆಚ್ಚುತ್ತಿದೆ. ಜಗತ್ತಿನಾದ್ಯಂತ ನೂರು ಕೋಟಿ ಜನ ತಂಬಾಕು ಸೇವಿಸುತ್ತಿದ್ದು ಇದರಿಂದಾಗಿ ಪ್ರತಿ ವರ್ಷ 30 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ದುಷ್ಪರಿಣಾಮದ ಪ್ರಮಾಣ ಇಷ್ಟೊಂದು ಗಂಭೀರವಾಗಿದ್ದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ದುಷ್ಪರಿಣಾಮಕ್ಕೆ ಒಳಗಾದವರಲ್ಲಿ ಕೇವಲ ಶೇ. 35ರಷ್ಟು ಜನ ಮಾತ್ರ ಚಿಕಿತ್ಸೆ ಪಡೆಯಲು ಮುಂದಾಗುತ್ತಾರೆ. ಇದರ ಬಗ್ಗೆ ಇನ್ನಷ್ಟು ಜಾಗೃತಿ ಮತ್ತು ತಿಳಿವಳಿಕೆ ಮೂಡಿಸುವ ಅಗತ್ಯವಿದೆ.

ಕಳೆದ ಒಂದು ದಶಕದಲ್ಲಿ ಇಂಟರ್​ನೆಟ್ ಗೀಳು ಹೆಚ್ಚುತ್ತಿದ್ದು ಅದರಿಂದ ಕೂಡ ಸಮಸ್ಯೆಗಳು ಉಲ್ಬಣಿಸುತ್ತಿವೆ. ಕಳೆದ ಕೆಲ ವರ್ಷಗಳ ಹಿಂದೆ ನಡೆಸಿದ ಅಧ್ಯಯನದ ಪ್ರಕಾರ 16ರಿಂದ 18 ವರ್ಷದೊಳಗಿನ ಯುವಕರಲ್ಲಿ ಶೇ. 25ರಷ್ಟು ಜನರ ಇಂಟರ್​ನೆಟ್ ಬಳಕೆ ಮಿತಿ ಮೀರಿದೆ. ಅವರೆಲ್ಲ ಆನ್​ಲೈನ್ ಗೇಮಿಂಗ್, ಸೆಕ್ಸ್​ಟಿಂಗ್ ಮತ್ತು ಆನ್​ಲೈನ್ ಶಾಪಿಂಗ್​ನಲ್ಲಿ ಸದಾ ಕಾಲ ನಿರತರಾಗಿರುತ್ತಾರೆ ಎನ್ನುತ್ತದೆ ಅಧ್ಯಯನ ವರದಿ.

ಮಾದಕ ವ್ಯಸನ ಎಂಬುದು ಜಗತ್ತಿನೆಲ್ಲೆಡೆ ಆರೋಗ್ಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಅಪಘಾತ, ಆತ್ಮಹತ್ಯೆ, ಲೈಂಗಿಕ ದೌರ್ಜನ್ಯ ಮತ್ತು ಕೊಲೆಗಳು ಮಾದಕವ್ಯಸನಿಗಳಿಂದಲೇ ಹೆಚ್ಚು ಎಂಬುದು ದೃಢಪಟ್ಟಿದೆ.

ವ್ಯಸನಕ್ಕೆ ಏನು ಕಾರಣ?: ವ್ಯಸನಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಅನುವಂಶೀಯತೆ ಕೂಡ ಒಂದು ಎನ್ನಲಾಗುತ್ತಿದೆ. ಕೆಟ್ಟ ಕೌಟುಂಬಿಕ ವಾತಾವರಣ, ದಂಪತಿಗಳ ನಡುವೆ ವೈಮನಸ್ಸು, ಮಕ್ಕಳು ಮತ್ತು ತಂದೆ ತಾಯಿಗಳ ನಡುವೆ ಇರುವ ಸಂವಹನ ಕೊರತೆ, ದೈಹಿಕ ಸಮಸ್ಯೆಗಳು, ಮಕ್ಕಳನ್ನು ಬೆಳೆಸುವ ರೀತಿಯಲ್ಲಿನ ದೋಷಗಳು ಇತ್ಯಾದಿಗಳಿಂದ ಒತ್ತಡ ಹೆಚ್ಚಾಗಿ ವ್ಯಕ್ತಿ ನೆಮ್ಮದಿಯ ಹುಡುಕಾಟದಲ್ಲಿ ಮಾದಕವ್ಯಸನಿಯಾಗುವ ಸಂಭವವಿರುತ್ತದೆ.

ಇವತ್ತಿನ ದಿನಗಳಲ್ಲಿ ಹದಿಹರೆಯದ ಮಕ್ಕಳಲ್ಲಿ ಕುತೂಹಲಕ್ಕಾಗಿ ಈ ವ್ಯಸನ ಪ್ರಾರಂಭವಾಗುತ್ತದೆ. ಕಾಲೇಜು, ಹಾಸ್ಟೆಲ್, ಸ್ನೇಹಿತರ ಮನೆ ಮುಂತಾದೆಡೆ ವಿದ್ಯಾರ್ಥಿಗಳು ಈ ವ್ಯಸನ ಪ್ರಾರಂಭಿಸುತ್ತಾರೆ. ಮುಕ್ತ ಆರ್ಥಿಕ ಹಾಗೂ ಸಾಮಾಜಿಕ ವಾತಾವರಣದಿಂದಾಗಿ ಜನರ ಮನೋಧರ್ಮವೂ ಬದಲಾವಣೆಯಾಗಿದೆ. ಹಾಗಾಗಿ ಮದ್ಯಸೇವನೆ ಪ್ರಾರಂಭಿಸುವ ಸಾಮಾನ್ಯ ವಯಸ್ಸು ಸುಮಾರು 20 ವರ್ಷಕ್ಕಿಂತ ಕಡಿಮೆಗೆ ಇಳಿದಿದೆ. ಇವತ್ತಿನ ಪಾಲಕರ ಅತಿಯಾದ ಸಲುಗೆ, ಮಕ್ಕಳಿಗೆ ದೊರೆತಿರುವ ಅತಿಯಾದ ಆರ್ಥಿಕ ಸ್ವಾತಂತ್ರ್ಯ, ಪಾಲಕರ ನಿಯಂತ್ರಣ ಇಲ್ಲದಿರುವಿಕೆ, ಇವೆಲ್ಲದರಿಂದ ಹದಿಹರೆಯದ ಮಕ್ಕಳಲ್ಲಿ ಈ ದುಶ್ಚಟ ಅತಿ ವ್ಯಾಪಕವಾಗಿ ಹೆಚ್ಚುತ್ತಿದೆ.

ಕಾರ್ಯಕ್ಷೇತ್ರದ ಒತ್ತಡ: ಅತಿಯಾದ ಕೆಲಸದ ಒತ್ತಡ, ಕೆಲಸದ ಸಮಯದಲ್ಲಿ ಏರು ಪೇರು, ಗುರಿ ಮುಟ್ಟಲೇಬೇಕಾದ ಒತ್ತಡ, ಒಳ್ಳೆಯ ವಾತಾವರಣ ಇಲ್ಲದಿರುವದು, ಸಹೋದ್ಯೋಗಿಗಳ ಅಸಹಕಾರ, ಇತ್ಯಾದಿಗಳಿಂದ ವ್ಯಕ್ತಿಯು ಆತಂಕ, ಒತ್ತಡದಿಂದ ಬಳಲುತ್ತಾನೆ. ಇದರಿಂದ ಹೊರಬರಲು ಮದ್ಯ ಸೇವನೆ ಸುಲಭದ ದಾರಿಯೆಂದು ತಿಳಿದು ವ್ಯಸನಕ್ಕೆ ಗುರಿಯಾಗುತ್ತಾನೆ.

ವ್ಯಸನಿಗಳಿಗೆ ಅನೇಕ ಸಲ ಮಾನಸಿಕ ಕಾಯಿಲೆಗಳ ಲಕ್ಷಣಗಳು ಪ್ರಾರಂಭವಾಗುತ್ತವೆ. ಮುಖ್ಯವಾಗಿ ಮನಸ್ಸಿನ ಸ್ಥಿತಿಗೆ ಸಂಬಂಧಿಸಿದ ಕಾಯಿಲೆಗಳು, ಚಿತ್ತವೈಕಲ್ಯ, ಆತಂಕ (ಸಾಮಾಜಿಕ ಭಯ, ಸಾಮಾಜಿಕ ವ್ಯಕ್ತಿತ್ವದೋಷ ಇತ್ಯಾದಿ) ಬಾಲ್ಯದಲ್ಲಿ ಬರುವ ಮಾನಸಿಕ ಕಾಯಿಲೆಗಳು, ಇಂಥವು ವ್ಯಸನಿಗಳಲ್ಲೇ ಹೆಚ್ಚು ಕಂಡುಬರುತ್ತವೆ. ಇದರಿಂದ ಶೇ. 30-40 ಜನರಿಗೆ ಖಿನ್ನತೆ ಆವರಿಸಿದರೆ ಹಲವರು ಆತ್ಮಹತ್ಯೆಗೆ ಮುಂದಾಗುತ್ತಾರೆ.

ಜೈವಿಕ ರಾಸಾಯನಿಕ ಕ್ರಿಯೆಗಳು

ನಮ್ಮ ಮಿದುಳಿನಲ್ಲಿ ಜೈವಿಕ ರಾಸಾಯನಿಕ ಅಂಶಗಳನ್ನೊಳಗೊಂಡ ನರಕೋಶಗಳು ಕಾರ್ಯ ನಿರ್ವಹಿಸುತ್ತವೆ. ವ್ಯಕ್ತಿಯು ಮದ್ಯ ಸೇವಿಸಿದಾಗ ಅದು ಮನಸ್ಸಿಗೆ ಸುಖ ನೀಡುತ್ತದೆ. ಈ ಸುಖದ ಅನುಭವ ಮಿದುಳಿಗೆ ಪ್ರಚೋದನೆಯ ಅಂಶವಾಗಿ ಪರಿವರ್ತನೆಯಾಗಿ ವ್ಯಸನದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮದ್ಯದ ಪ್ರಮಾಣ ರಕ್ತದಲ್ಲಿ ಕಡಿಮೆಯಾದರೆ ವ್ಯಕ್ತಿಗೆ ಚಡಪಡಿಕೆ ಶುರುವಾಗುತ್ತದೆ. ಇದರಿಂದ ವ್ಯಕ್ತಿಯು ಪದೇಪದೆ ವ್ಯಸನಕ್ಕೆ ದಾಸನಾಗಲು ಇಚ್ಚಿಸುತ್ತಾನೆ. ಈ ರೀತಿ ಧನಾತ್ಮಕ ಮತ್ತು ನಕಾರಾತ್ಮಕ ಅಂಶಗಳ ಘರ್ಷಣೆಯಿಂದ ವ್ಯಕ್ತಿಗಳಲ್ಲಿ ವ್ಯಸನವು ಮುಂದುವರಿಯುತ್ತಾ ಹೋಗುತ್ತದೆ. ವ್ಯಸನಿಗಳಿಗೆ ಅದರ ದುಷ್ಪರಿಣಾಮದ ಅರಿವಿದ್ದರೂ ಈ ಸುಖದ ಭ್ರಮೆಯಲ್ಲಿ ಅವರು ಪದೇಪದೆ ಚಟಕ್ಕೆ ಶರಣಾಗುತ್ತಾರೆ.

ಏನು ಪರಿಹಾರ?

ಮಾದಕವಸ್ತುಗಳ ವಿಷ ವರ್ತಲದಿಂದ ಹೊರಬರಲು ಮೊದಲು ಮಾಡಬೇಕಾಗಿದ್ದು ಎಂದರೆ ತಮಗೆ ಚಟ ಇರುವುದನ್ನು ಒಪ್ಪಿಕೊಳ್ಳುವುದು ಮತ್ತು ವೈದ್ಯರ ಸಹಾಯ ಪಡೆಯುವುದು. ಕುಟುಂಬದ ಸದಸ್ಯರು ಅಥವಾ ವೈದ್ಯರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡರೆ ಮತ್ತು ಅದರಿಂದ ಹೊರ ಬರುವ ನಿಟ್ಟಿನಲ್ಲಿ ದೃಢ ಸಂಕಲ್ಪ ಮಾಡಿದರೆ ವ್ಯಸನಮುಕ್ತಿ ಕಷ್ಟವೇನಲ್ಲ. ವೈದ್ಯರ ಬಳಿ ಏನನ್ನೂ ಮುಚ್ಚಿಡದೆ ಮುಕ್ತವಾಗಿ ರ್ಚಚಿಸಿದರೆ ಪರಿಹಾರ ಸಿಗುತ್ತದೆ. ಹೊಸ ಜೀವನಕ್ಕೆ ದಾರಿ ಸಿಗುತ್ತದೆ. ಡಿಟಾಕ್ಸಿಫಿಕೇಶನ್ ವಿಧಾನದಿಂದ ಆರಂಭಗೊಳ್ಳುವ ಚಿಕಿತ್ಸೆ ನಿಗದಿತ ಸಮಯದವರೆಗೆ ಮುಂದುವರಿಯುತ್ತದೆ. ಈ ವೇಳೆ ಅವರಿಗೆ ಉಂಟಾಗಬಹುದಾದ ವಿಥ್​ಡ್ರಾವಲ್ ಸಿಂಪ್ಟಮ್್ಸ ನಿಭಾಯಿಸಲು ಔಷಧ ನೀಡಲಾಗುತ್ತದೆ. ಈ ಅವಧಿಯಲ್ಲಿ ಇಂದ್ರಿಯ ನಿಗ್ರಹವು ವ್ಯಸನದಿಂದ ಹೊರಬರಲು ಪೂರಕವಾಗುತ್ತದೆ.

ಪಾಲಕರ ಪಾತ್ರವೇನು?

ವ್ಯಸನಕ್ಕೆ ಜಾರುವ ಮುನ್ನವೇ ಮಕ್ಕಳಿಗೆ ಅವರ ಭವಿಷ್ಯ ಹಾಗೂ ಜವಾಬ್ದಾರಿಯ ಅರಿವು ಮೂಡಿಸುವಲ್ಲಿ ಪಾಲಕರ ಪಾತ್ರ ಮಹತ್ವದ್ದು. ನಮ್ಮ ಜೀವನದ ಯಾವುದೇ ಸಮಸ್ಯೆಗೆ ವ್ಯಸನಗಳ ಹಾದಿಯಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎನ್ನುವ ತಿಳಿವಳಿಕೆಯನ್ನು ಮಕ್ಕಳಿಗೆ ನೀಡಬೇಕು. ಇದಕ್ಕೆ ಪೂರಕವಾಗಿ ಮಕ್ಕಳು ಕೂಡ ಅಷ್ಟೇ ಸಕಾರಾತ್ಮಕವಾಗಿ ಈ ನಿಟ್ಟಿನಲ್ಲಿ ಸ್ಪಂದಿಸಿದರೆ ವ್ಯಸನಿಗಳಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವ್ಯಸನಮುಕ್ತ ಮತ್ತು ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ.

(ಲೇಖಕರು ಮನೋವೈದ್ಯರು ಧಾರವಾಡ)

Leave a Reply

Your email address will not be published. Required fields are marked *

Back To Top