ತಂಬಾಕಿಗೆ ಗುಡ್​ಬೈ

ಇಂದು ದೇಶವನ್ನು ಕಾಡುತ್ತಿರುವ ಆರೋಗ್ಯ ಸಂಬಂಧಿ ಪಿಡುಗುಗಳಲ್ಲಿ ಅತಿ ದೊಡ್ಡದೆಂದರೆ ತಂಬಾಕು ಸಮಸ್ಯೆ. ಭಾರತದಲ್ಲಿ ಪ್ರತಿ ವರ್ಷ ತಂಬಾಕಿನಿಂದ ಕ್ಯಾನ್ಸರ್​ಗೆ ಬಲಿಯಾಗುತ್ತಿರುವವರ ಸಂಖ್ಯೆ 10 ಲಕ್ಷ ಮೀರುತ್ತಿದೆ. ಯುವಜನತೆಯೇ ಇದರಲ್ಲಿ ಹೆಚ್ಚು ಸಂತ್ರಸ್ತರು. ಕೂಡಲೇ ಎಚ್ಚೆತ್ತುಕೊಂಡು ತಂಬಾಕಿನ ಚಟ ತೊರೆದುಬಿಡುವುದು ಜಾಣತನ.

| ಆರ್.ಬಿ. ಗುರುಬಸವರಾಜ ಹೊಳಗುಂದಿ

ಆರೋಗ್ಯಕ್ಕೆ ಅಪಾಯಕಾರಿ ಎಂದು ಗೊತ್ತಿದ್ದರೂ, ತಂಬಾಕು ಸೇವನೆ ವರ್ಷವರ್ಷವೂ ಅಧಿಕವಾಗುತ್ತಿರುವುದನ್ನು ಅಂಕಿ ಅಂಶಗಳೇ ಸಾರಿ ಸಾರಿ ಹೇಳುತ್ತಿವೆ. ಅದರಲ್ಲೂ ಯುವಜನತೆ ಮತ್ತು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಈ ಪಿಡುಗಿಗೆ ತುತ್ತಾಗುತ್ತಿರುವುದು ನಿಜಕ್ಕೂ ಆಘಾತಕಾರಿ. ಒಂದು ಸಮೀಕ್ಷೆಯ ಪ್ರಕಾರ 12ರಿಂದ 14ವರ್ಷದೊಳಗಿನ ವಯೋಮಾನದ ಶೇ. 21ರಷ್ಟು ಬಾಲಕರು ಮತ್ತು ಶೇ. 2ರಷ್ಟು ಬಾಲಕಿಯರು ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿದ್ದಾರೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳು ಮತ್ತು ಯುವಕರೇ ತಂಬಾಕು ಉತ್ಪನ್ನಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ ಎನ್ನುವುದು ಆಶ್ಚರ್ಯವಾದರೂ ಸತ್ಯ.

ಕಳೆದ ದಶಕದ ಅಂಕಿ-ಅಂಶಗಳನ್ನು ಗಮನಿಸಿದರೆ, ದಶಕದ ಪ್ರಾರಂಭಕ್ಕಿಂತ ಅಂತ್ಯದ ವೇಳೆಗೆ ತಂಬಾಕು ಸೇವಿಸುವವರ ಸಂಖ್ಯೆ ಹೆಚ್ಚಾಗಿರುವುದು ಕಂಡುಬರುತ್ತದೆ. ಇದೇ ಪರಿಸ್ಥಿತಿ ಮುಂದುವರೆದರೆ 2020 ರ ವೇಳೆಗೆ ತಂಬಾಕು ಸಂಬಂಧಿ ಕಾಯಿಲೆ ಮತ್ತು ಸಾವುಗಳ ಪ್ರಮಾಣ ಶೇಕಡಾ 8.9ರಷ್ಟು ಹೆಚ್ಚುವ ಭೀತಿ ಇದೆ. ತಂಬಾಕಿನ ಕ್ಯಾನ್ಸರ್​ಗೆ ಬಲಿಯಾಗುತ್ತಿರುವವರ ಪೈಕಿ ಪುರುಷರ ಸಂಖ್ಯೆಯೇ ಅಧಿಕ. ಅದರಲ್ಲೂ ಧೂಮಪಾನದಿಂದ ಕ್ಯಾನ್ಸರ್​ಗೆ ಈಡಾಗಿರುವವರ ಸಂಖ್ಯೆ ಹೆಚ್ಚು. ಶೇ. 56ರಷ್ಟು ಪುರುಷರು ಮತ್ತು ಶೇ. 44ರಷ್ಟು ಮಹಿಳೆಯರು ತಂಬಾಕು ಕ್ಯಾನ್ಸರ್​ಗೆ ಬಲಿಯಾಗುತ್ತಿದ್ದಾರೆ. ಶೇ. 82ರಷ್ಟು ಪ್ರಕರಣಗಳಲ್ಲಿ ಶ್ವಾಸಕೋಶದ ಕಾಯಿಲೆ, ಪುಪ್ಪುಸದ ಕ್ಯಾನ್ಸರ್​ಗೆ ತಂಬಾಕು ಕಾರಣ ಎಂಬುದು ಧೃಢಪಟ್ಟಿದೆ.

ಈಗಾಗಲೇ ನಮಗೆಲ್ಲಾ ತಿಳಿದಿರುವಂತೆ ತಂಬಾಕಿನಲ್ಲಿರುವ ನಿಕೋಟಿನ್ ಅತ್ಯಂತ ವಿಷಕಾರಿ ಎಂಬುದು ಸಾಬೀತಾಗಿದೆ. ನಿಕೋಟಿನ್ ಎಷ್ಟು ವಿಷಕಾರಿ ಎಂದರೆ, 6 ಮಿಲಿಗ್ರಾಂ ನಿಕೋಟಿನ್​ಅನ್ನು ನೇರವಾಗಿ ಒಂದು ನಾೕುಯ ಮೇಲೆ ಪ್ರಯೋಗಿಸಿದರೆ ಕೆಲವೇ ಸೆಕೆಂಡುಗಳಲ್ಲಿ ಅದು ಸಾಯುತ್ತದೆ. ಇಂತಹ ನಿಕೋಟಿನ್ ನಮ್ಮ ಬಾಯಿಗೆ ಪ್ರವೇಶಿಸಿದ 10 ಸೆಕೆಂಡುಗಳಲ್ಲಿ ಮೆದುಳಿಗೆ ಹೋಗಿ ಡೊಪಾಮಿನ್ ಎಂಬ ವಿಷವನ್ನು ಉತ್ಪಾದಿಸಿ ಮೆದುಳಿಗೆ ಬರುವ ರಕ್ತದ ಸುಗಮ ಸಂಚಾರಕ್ಕೆ ತಡೆಯೊಡ್ಡುತ್ತದೆ. ಕ್ರಮೇಣಇದು ಬಾಯಿಯ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ಧೂಮಪಾನಿಗಳು ಶ್ವಾಸಕೋಶದ ಕ್ಯಾನ್ಸರ್​ಗೆ ತುತ್ತಾಗುತ್ತಾರೆ. ಅಲ್ಲದೆ ಅನ್ನನಾಳದ, ಹೊಟ್ಟೆಯ, ಮೂತ್ರಪಿಂಡದ, ಮೂತ್ರಕೋಶದ, ಮೇದೋಜೀರಕ ಗ್ರಂಥಿಯ, ಗರ್ಭಕೋಶದ ಕ್ಯಾನ್ಸರ್​ಗೆ ಕಕ್ಷಿೂಡ ಕಾರಣವಾಗಬಹುದು. ನಿಕೋಟಿನ್ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹೃದಯಾಘಾತದ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ. ಗರ್ಭಿಣಿಯರ ಗರ್ಭದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.

ತಂಬಾಕನ್ನು ಹದಗೊಳಿಸಲು ಮತ್ತು ಸ್ವಾದಿಷ್ಟಗೊಳಿಸಲು 4 ಸಾವಿರಕ್ಕಿಂತ ಹೆಚ್ಚಿನ ರಾಸಾಯನಿಕಗಳನ್ನು ಬೆರೆಸುತ್ತಾರೆ. ಅದರಲ್ಲಿ 250ಕ್ಕೂ ಹೆಚ್ಚಿನ ರಾಸಾಯನಿಕಗಳು ವಿಷಕಾರಿ. 50ಕ್ಕೂ ಹೆಚ್ಚಿನ ರಾಸಾಯನಿಕಗಳು ಕ್ಯಾನ್ಸರ್​ಗೆ ಕಾರಣವಾಗುತ್ತವೆ. ಚರ್ಮ ಹದಮಾಡಲು ಬಳಸುವ ಅತಿ ತೀಕ್ಷ ್ಣ ರಾಸಾಯನಿಕಗಳನ್ನು ತಂಬಾಕು ಸಂಸ್ಕರಣೆಗೆ ಬಳಸುವುದರಿಂದ ಬಾಯಿಯ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ರಾಸಾಯನಿಕ ಬೆರೆಸದಿದ್ದಾಗಲೂ ನಿಕೋಟಿನ್​ನ ಪ್ರಮಾಣ ಪ್ರತಿ ಪೌಂಡಿಗೆ 22.8 ಗ್ರಾಂ ಇರುತ್ತದೆ. ಅಲ್ಲದೆ ಅದರಲ್ಲಿ ಕೊಲಿಡೀಸ್, ಅಮೋನಿಯಾ, ಪೈಯರಡೀನ್, ಕಾರ್ಬನ್ ಮೊನಾಕ್ಸೈಡ್​ಗಳೆಂಬ ಪ್ರತ್ಯೇಕ ವಿಷಕಾರಿ ಅಂಶಗಳಿವೆ. ಧೂಮಪಾನದೊಂದಿಗೆ ಹೊಗೆ ಮಾತ್ರ ದೇಹ ಸೇರುವುದಿಲ್ಲ. ಅದರ ಜೊತೆಗೆ ಅರ್ಸೆನಿಕ್, ಸೈನೈಡ್, ಫಾರ್ವಲೈಡ್ ಮುಂತಾದ ವಿಷಕಾರಿ ಪದಾರ್ಥಗಳೂ ಸೇರುತ್ತವೆ. ತಂಬಾಕು ವಿರೋಧಿ ಹೋರಾಟ ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯಿಂದ ಆಗುವ ಕೆಲಸವಲ್ಲ. ಇದಕ್ಕೆ ಸಾಮೂಹಿಕ ಪ್ರಯತ್ನ ಅಗತ್ಯ. ಇದಕ್ಕೆ ಪೂರಕವಾಗಿ ಸರ್ಕಾರದ ನೀತಿ ನಿಯಮಗಳು ಬದಲಾಗಬೇಕು. ಪ್ರತಿಯೊಬ್ಬರೂ ಅವುಗಳನ್ನು ಕಟ್ಟು ನಿಟ್ಟಾಗಿ ಪಾಲಿಸು ವಂತಾಗಬೇಕು. ಬನ್ನಿ! ಎಲ್ಲರೂ ಕೈ ಜೋಡಿಸಿ ತಂಬಾಕು ವಿರೋಧಿ ಶಿಕ್ಷಣವನ್ನು ಬಲ ಪಡಿಸೋಣ.

ತಂಬಾಕು ತ್ಯಜಿಸುವುದರಿಂದ ಆಗುವ ಲಾಭಗಳು

# ಒಸಡು, ಬಾಯಿ, ತುಟಿಯಲ್ಲಿನ ಕಲೆಗಳು ಮಾಯ

# ಒಸಡುಗಳಲ್ಲಿ ರಕ್ತ ಒಸರುವುದು ನಿಲ್ಲುತ್ತದೆ.

# ಕೆಂಪು ಹಲ್ಲುಗಳಿಂದ ಮುಕ್ತಿ

# ಸ್ವಸ್ಥ ಹಾಗೂ ಆರೋಗ್ಯಕರ ಬಾಯಿ

# ಆರೋಗ್ಯಪೂರ್ಣ ಹೊಳೆಯುವ ಕೆನ್ನೆಗಳು

# ಬಾಯಿಯ ದುರ್ಗಂಧ ನಿವಾರಣೆ

# ಸಾಮಾಜಿಕ ಮನ್ನಣೆ

# ಆಹಾರಕ್ಕೆ ರುಚಿ

# ಬೆರಳು, ಉಗುರು ಹಳದಿ ಮುಕ್ತ

# ಉದ್ಯೋಗಾವಕಾಶ ಹೆಚ್ಚಳ

# ಹಣದ ಉಳಿತಾಯ

ದುಷ್ಪರಿಣಾಮಗಳು

ತಂಬಾಕು ಸೇವನೆಯಿಂದ ಅನೇಕ ರೀತಿಯ ನಷ್ಟಗಳಾಗುತ್ತವೆ. ಮೊದಲನೆಯದು ಸಾಮಾಜಿಕ ಸ್ಥಾನಮಾನ, ಗೌರವಕ್ಕೆ ಕುಂದುಂಟಾಗುತ್ತದೆ. ಎರಡನೆಯದು ಆರೋಗ್ಯ ಹಾನಿಯುಂಟಾಗುತ್ತದೆ. ಮೂರನೆಯದು ಆರ್ಥಿಕ ನಷ್ಟವಾಗುತ್ತದೆ. ಹೇಗೆಂದರೆ, ಒಬ್ಬ ವ್ಯಕ್ತಿ ತಂಬಾಕು ಸೇವನೆಗಾಗಿ (ಬೀಡಿ/ಸಿಗರೇಟು/ಹುಕ್ಕಾ/ಗುಟ್ಕಾ/ಖೈನಿ/ಜರ್ದಾಪಾನ್ ಇತ್ಯಾದಿ) ದಿನಕ್ಕೆ 30ರಿಂದ 50 ರೂ. ಖರ್ಚು ಮಾಡುತ್ತ್ತಾನೆ ಎಂದುಕೊಂಡರೆ, ಒಂದು ವರ್ಷಕ್ಕೆ 14,600 ರೂ.ಗಳನ್ನು ಹಾಗೂ 10 ವರ್ಷಕ್ಕೆ 1,46,000 ರೂ.ಗಳನ್ನು ಖರ್ಚು ಮಾಡುತ್ತಾನೆ. ಇಷ್ಟೊಂದು ಮೊತ್ತವನ್ನು ತಂಬಾಕು ಸೇವನೆಗಾಗಿ ಖರ್ಚು ಮಾಡುವ ವೇಳೆಗೆ ಅವನ ಆರೋಗ್ಯ ಹದಗೆಟ್ಟಿರುತ್ತದೆ. ಆರೋಗ್ಯ ಸುಧಾರಣೆಗಾಗಿ ಲಕ್ಷ ಲಕ್ಷ ಖರ್ಚಾಗಬಹುದು. ಹೀಗೆ ತಂಬಾಕು ಆರ್ಥಿಕ ನಷ್ಟವನ್ನೂ ಉಂಟುಮಾಡುತ್ತದೆ.

ಹೊರ ಬರುವುದು ಹೇಗೆ?

ಬದ್ಧತೆಯಿಂದ ಕೂಡಿದ ಗಟ್ಟಿ ನಿರ್ಧಾರದಿಂದ ಎಂತಹ ಚಟವನ್ನಾದರೂ ಬಿಡಬಹುದು. ತಂಬಾಕು ತ್ಯಜಿಸುವ ದಿನಾಂಕವನ್ನು ನಿರ್ಧರಿಸಿ ಕ್ಯಾಲೆಂಡರ್​ನಲ್ಲಿ ಗುರುತಿಸಿಕೊಳ್ಳಿ. ಅದನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ತಿಳಿಸಿ. ನಿಮ್ಮ ಮನೆ, ವಾಹನ, ಮತ್ತು ಕೆಲಸದ ಸ್ಥಳ ಎಲ್ಲವೂ ತಂಬಾಕು ಮುಕ್ತವಾಗಲಿ. ತಂಬಾಕು ಸೇವಿಸುವ ಬಯಕೆಯಾದಾಗ ಅದರ ಬದಲು ಅಪಾಯಕಾರಿಯಲ್ಲದ ಬೇರೆ ಅಗಿಯುವ ವಸ್ತುಗಳು ಬಳಿಯಿರಲಿ. ಉದಾಹರಣೆಗೆ, ಚಾಕೋಲೇಟ್, ಚ್ಯೂಯಿಂಗ್ ಗಮ್ ಕ್ಯಾಂಡಿ, ಲವಂಗ, ಯಾಲಕ್ಕಿ ಇತ್ಯಾದಿ. ವಾಕಿಂಗ್, ವ್ಯಾಯಾಮ, ಸೃಜನಾತ್ಮಕ ಚಟುವಟಿಕೆ ಅಥವಾ ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಆಗಾಗ ನೀರು, ಜ್ಯೂಸ್ ಕುಡಿಯಿರಿ.

ಕಾರಣಗಳು

# ಕುಟುಂಬ ಮತ್ತು ಸುತ್ತಲಿನ ಪರಿಸರದಲ್ಲಿನ ಬಹುತೇಕ ಜನರು ತಂಬಾಕು ಉತ್ಪನ್ನಗಳನ್ನು ಬಳಸುತ್ತಿರುವುದು.

# ಸ್ನೇಹಿತರನ್ನು ಒಲಿಸಿಕೊಳ್ಳಲು/ಒತ್ತಾಯಕ್ಕಾಗಿ ಅಥವಾ ಅನುಕರಣೆಯಿಂದಾಗಿ ತಂಬಾಕು ಉತ್ಪನ್ನಗಳಿಗೆ ಬಲಿಯಾಗುತ್ತಿರುವುದು.

# ವಿರಾಮವೇಳೆ ಕಳೆಯಲು ಹಾಗೂ ಮನೋರಂಜನೆಗಾಗಿ. ದೃಶ್ಯ ಮಾಧ್ಯಮ ಹಾಗೂ ಚಲನಚಿತ್ರಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯನ್ನು ವೈಭವೀಕರಿಸಿ ತೋರಿಸುವುದು.

ಸೆಕೆಂಡ್ ಹ್ಯಾಂಡ್ ಧೂಮಪಾನಿ

ಧೂಮಪಾನಿಯು ಬೀಡಿ, ಸಿಗರೇಟ್, ಹುಕ್ಕಾ, ಪೈಪ್ ಇತ್ಯಾದಿಗಳಿಂದ ತಂಬಾಕು ಸೇವಿಸಿ ಬಿಟ್ಟ ಹೊಗೆಯನ್ನು ಪಕ್ಕದಲ್ಲಿರುವ ಇತರರು ಸೇವಿಸುತ್ತಾರೆ. ಸಾಮಾನ್ಯವಾಗಿ ಮನೆ, ಹೋಟೆಲ್, ರೆಸ್ಟೊರೆಂಟ್, ಬಸ್/ರೈಲು ನಿಲ್ದಾಣಗಳು ಇತ್ಯಾದಿ ಜನಸಾಂದ್ರತೆ ಇರುವ ಪ್ರದೇಶದಲ್ಲಿ ಇಂತಹ ಸೆಕೆಂಡ್ ಹ್ಯಾಂಡ್ ಧೂಮಪಾನಿಗಳಿರುತ್ತಾರೆ. ಇದರಲ್ಲಿ ಮಕ್ಕಳು, ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು, ವಯಸ್ಕರು, ಹಿರಿಯ ನಾಗರಿಕರೂ ಇರಬಹುದು. ಇವರು ನೇರವಾಗಿ ತಂಬಾಕನ್ನು ಸೇವಿಸದಿದ್ದರೂ ಧೂಮಪಾನಿಯ ಹೊಗೆಯಿಂದ ಇವರಲ್ಲೂ ದುಷ್ಟರಿಣಾಮಗಳು ಕಾಣಿಸಿ ಕೊಳ್ಳುತ್ತವೆ.

Leave a Reply

Your email address will not be published. Required fields are marked *