ಸ್ವಯಂ ಪ್ರೇರಣೆಯಿಂದ ಸಾವಳಗಿ ಬಂದ್

ಸಾವಳಗಿ: ಸಾವಳಗಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಗ್ರಾಮದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ಬಂದ್ ಆಚರಿಸಿದರು.

ಆಟೋ ಚಾಲಕರು, ಹೋಟೆಲ್ ಮಾಲೀಕರು, ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಿದರು.

ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಮಾತನಾಡಿ, ಸಂಸದ ಪಿ.ಸಿ. ಗದ್ದಿಗೌಡರ ಮತ್ತು ಟಿ.ಸಿ. ಹುಂಡೇಕಾರ, ವಾಸುದೇವ ವರದಿಯಲ್ಲಿ ಸಾವಳಗಿ ತಾಲೂಕಾಗಲು ಎಲ್ಲ ಅರ್ಹತೆ ಹೊಂದಿದೆ ಎಂದು ಶಿಫಾರಸು ಮಾಡಲಾಗಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ತಾಲೂಕಾಗುವ ಕನಸು ಹಿಂದೆ ಉಳಿಯುತ್ತ ಬರುತ್ತಿದೆ. ತಾಲೂಕು ಕನಸು ಈಡೇರಿದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಮುಖಂಡ ಎಲ್.ಎಸ್. ಪಾಟೀಲ ಮಾತನಾಡಿ, ತಾಲೂಕು ರಚನೆ ವಿಚಾರದಲ್ಲಿ ರಾಜಕೀಯ ಮಾಡದೆ ಪ್ರತಿಭಟನೆಗಳ ಮೂಲಕ ಮನವಿ ಸಲ್ಲಿಸೋಣ. ಇದರ ಹಿಂದೆ ಸಂಸದ, ಶಾಸಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಅವರು ಇಚ್ಛಾಶಕ್ತಿ ತೋರಿ ಮಾಡಿದ್ದೆ ಆದಲ್ಲಿ ಸಾವಳಗಿ ತಾಲೂಕು ಕನಸು ನನಸಾಗುತ್ತದೆ ಎಂದರು.

ತೆಲಸಂಗ ಜೆಡಿಎಸ್ ಮುಖಂಡ ಈರಣ್ಣ ಕುಮಠಳ್ಳಿ ಮಾತನಾಡಿ, 23 ಹಳ್ಳಿಗಳ ಹೋಬಳಿ ಎನಿಕೊಂಡಿರುವ ಸಾವಳಗಿ ತಾಲೂಕಾಗುವ ಎಲ್ಲ ಅರ್ಹತೆ ಹೊಂದಿದೆ. ಅಥಣಿ ತಾಲೂಕಿನ ಮತ್ತಷ್ಟು ಹಳ್ಳಿಗಳನ್ನು ಸೇರಿಸಿಕೊಂಡು ಸಾವಳಗಿಯನ್ನು ತಾಲೂಕು ಎಂದು ಸರ್ಕಾರ ಘೋಷಣೆ ಮಾಡಲೇಬೇಕು ಎಂದು ಆಗ್ರಹಿಸಿದರು.
ಬಾಪುಗೌಡ ಬುಲಗೌಡ, ಭೂಪಾಲ ಬಾಗೇವಾಡಿ, ತುಕಾರಾಮ ಬಾಪಕರ, ಮಾಹಾನಿಂಗ ಐನಾಪುರ, ಜಿಪಂ ಸದಸ್ಯ ಶಿವಾನಂದ ಪಾಟೀಲ, ತಾಪಂ ಸದಸ್ಯ ಬಸವರಾಜ ಮಾಳಿ, ಗ್ರಾಪಂ ಅಧ್ಯಕ್ಷ ಸುಭಾಷ ಪಾಟೋಳಿ ಇತರರಿದ್ದರು. ನಂತರ ಜಮಖಂಡಿ ತಹಸೀಲ್ದಾರ್ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಲಾಯಿತು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ತಾಲೂಕಗಳ ಪಟ್ಟಿಯಲ್ಲಿ ಸಾವಳಗಿ ಹೆಸರನ್ನು ಕೈ ಬಿಟ್ಟಿದ್ದರು. ಈಗ ಕುಮಾರಸ್ವಾಮಿ ಕೂಡ ಕೈ ಬಿಟ್ಟಿದ್ದಾರೆ. ಹೀಗಾಗಿ ಸಾವಳಗಿ ಲೆಕ್ಕಕ್ಕೆ ಇಲ್ಲದಂತಾಗಿದೆ. ಮುಂಬರುವ ಗ್ರಾಪಂ, ಲೋಕಸಭೆ ಚುನಾವಣೆಯನ್ನು ಸಂಪೂರ್ಣ ಬಹಿಷ್ಕಾರ ಮಾಡಲು ತೀರ್ಮಾನಿಸಿದ್ದೇವೆ.
ಎಲ್.ಎಸ್. ಪಾಟೀಲ, ಮುಖಂಡ