More

    ಕರೋನಾ ವೈರಸ್​ ಸೋಂಕು ಹರಡುವ ಈ ನೀರಸ ಸನ್ನಿವೇಶದಲ್ಲಿ, ವರ್ಕ್ ಫ್ರಂ ಹೋಮ್ ಏಕತಾನತೆಯಿಂದ ಹೊರಬರಲು ಏನ್ ಮಾಡ್ತೀರಿ..?

    ಕರೋನಾ ವೈರಸ್​ ಸೋಂಕು ಹರಡುವ ಈ ನೀರಸ ಸನ್ನಿವೇಶದಲ್ಲಿ, ವರ್ಕ್ ಫ್ರಂ ಹೋಮ್ ಏಕತಾನತೆಯಿಂದ ಹೊರಬರಲು ಏನ್ ಮಾಡ್ತೀರಿ..?ಸುಖವೋ, ಶೋಕವೋ, ಭಾವಜೀವಿಗಳ ಪಾಲಿಗೆ ಬದುಕೇ ಒಂದು ಕವಿತೆ.

    ಕವಿತೆಯ ಶಕ್ತಿಯೇ ಅಂಥದ್ದು. ಅದಕ್ಕೆ ನೋವನ್ನು ಕರಗಿಸುವ, ನಲಿವನ್ನು ಪಸರಿಸುವ ಸಾಮರ್ಥ್ಯವಿದೆ. ಕವಿತೆ ಎಂದರೆ ಮನಸ್ಸಿನ ಅಭಿವ್ಯಕ್ತಿ. ಅನುಭವದಿಂದ, ಅನುಭಾವದಿಂದ, ಸೃಜನಶೀಲತೆಯಿಂದ ಹುಟ್ಟುವಂಥದ್ದು. ಜಗತ್ತಿನಲ್ಲಿ ಬೇರೆಲ್ಲ ವಿದ್ಯೆಗಳನ್ನು ಕಲಿಸಬಹುದು. ಆದರೆ, ಕವಿತ್ವ ಮಾತ್ರ ಏಕಲವ್ಯ ವಿದ್ಯೆ. ಅದನ್ನು ಬೇರೆಯವರನ್ನು ಅನುಕರಿಸಿ, ಅನುಸರಿಸಿ ಕಲಿಯಲು ಸಾಧ್ಯವಿಲ್ಲ. ತರಗತಿಯಲ್ಲಿ ಕಲಿಸುವಂಥದ್ದಲ್ಲ ಕಾವ್ಯ. ಅದು ಅಂತರಂಗದಲ್ಲಿ ಸ್ಪುರಿಸಬೇಕು. ಭಾವನೆಗಳು ಒತ್ತೈಸಿ, ಮೇಳೈಸಿ, ಅರ್ಥೈಸಿ ಬರಬೇಕು.

    ಕವಿತೆ ಎನ್ನುವುದೊಂದು ಕಲೆ, ಜಾಣ್ಮೆ, ಹಿರಿಮೆ, ಪ್ರೌಢಿಮೆ. ಹೃದಯದಲ್ಲಿ ಎಲ್ಲರೂ ಕವಿಗಳಿರಬಹುದು. ಆದರೆ, ಎದೆಗುದಿಯ ಮಾತುಗಳನ್ನು, ಭಾವಗಳನ್ನು ಅಕ್ಷರರೂಪಕ್ಕಿಳಿಸುವ ಶಕ್ತಿ ಇರುವುದು ಕೆಲವರಿಗೆ ಮಾತ್ರ. ಇತಿಹಾಸ ವ್ಯಾಸ, ವಾಲ್ಮೀಕಿಯಿಂದ, ಕಾಳಿದಾಸ, ಬಾಣ, ಭವಭೂತಿಯವರೆಗೆ ಮಹಾಕವಿಗಳನ್ನು ಕಂಡಿದೆ. ರಾಜಾಶ್ರಯದಲ್ಲಿ ಅರಳಿದ, ಮೆರೆದ ಆಸ್ಥಾನ ಕವಿಗಳನ್ನು ಕಂಡಿದೆ. ಯುದ್ಧ ಮತ್ತು ಶಾಂತಿ ಕಾಲದ ಅಸಾಧಾರಣ ಕವಿಗಳನ್ನು ಕಂಡಿದೆ. ಒಂದೊಂದು ಯುಗದಲ್ಲೂ ಆಯಾ ಯುಗಮಾನದ ತಿರುಳನ್ನು ಮುಂದಿನ ಪೀಳಿಗೆಗೆ ಕಾವ್ಯಾತ್ಮಕವಾಗಿ ಬಣ್ಣಿಸಿದ ಮಹಾಮಹಾ ಕವಿಗಳು ಚರಿತ್ರೆಯ ಪುಟಗಳನ್ನು ಅಲಂಕರಿಸಿದ್ದಾರೆ.

    ಕಾವ್ಯದ ಪ್ರಯೋಜನವೇನು? ಕವಿತೆ ಯಾಕೆ ಬರೆಯಬೇಕು ಎಂಬ ಪ್ರಶ್ನೆಗಳು ಮುಂಚಿನಿಂದಲೂ ಅನೇಕರನ್ನು ಕಾಡಿದ್ದಿದೆ. ಅದಕ್ಕೆ ಉತ್ತರಗಳೂ ಭರ್ಜರಿಯಾಗೇ ಇವೆ. ‘ಕಾವ್ಯಂ ಯಶಸೇರ್ಥಕೃತೇ ವ್ಯವಹಾರವಿದೇ ಶಿವೇತರಕ್ಷತಯೇ/ಸದ್ಯಃ ಪರಿನಿರ್ವೃತಯೇ ಕಾಂತಾಸಂಮಿತತಯೋಪದೇಶುಜೇ’ ಎಂಬ ಮುಮ್ಮಟ ಕವಿಯ ಉತ್ತರ ಕವಿತ್ವವಂತೂ ಸಾಹಿತ್ಯದ ವಿದ್ಯಾರ್ಥಿಗಳಿಗೆ ಪರಿಚಿತ. ಅಂದರೆ, ಕಾವ್ಯವನ್ನು ಕೀರ್ತಿಗಾಗಿ, ಧನಾರ್ಜನೆಗಾಗಿ, ವ್ಯವಹಾರ ಜ್ಞಾನಕ್ಕಾಗಿ, ಅಮಂಗಳ ನಿವಾರಣೆಗಾಗಿ, ತತ್ಕಾಲದಲ್ಲೇ ಪರಮಾನಂದ ಪ್ರಾಪ್ತಿಗಾಗಿ, ಕಾಂತೆಯಂತೆ ಉಪದೇಶಿಸುವುದಕ್ಕಾಗಿ, ಇವೆಲ್ಲಕ್ಕಿಂತ ಮಿಗಿಲಾಗಿ ಬದುಕಿನಲ್ಲಿ ಬೇರಾವ ಅತೃಪ್ತಿಯನ್ನೂ ಉಳಿಸದಂಥ ರಸಾನುಭವಕ್ಕಾಗಿ ರಚಿಸಬೇಕು, ಓದಬೇಕು, ತಿಳಿಯಬೇಕು ಎಂಬ ವ್ಯಾಖ್ಯಾನ ಎಲ್ಲ ಕಾಲಕ್ಕೂ ಅನ್ವಯಿಸುವಂಥದ್ದು.

    ಕಾವ್ಯ ಓದುವುದು ಸುಲಭ. ಆದರೆ, ಬರೆಯುವುದು? ಎಲ್ಲರೂ ಕವಿಗಳಲ್ಲ. ಕಲಿತು ಕವಿಯಾಗಲೂ ಸಾಧ್ಯವಿಲ್ಲ. ಅಂತರಂಗದ ಮೃದಂಗದ ನಾದ ಭಾವಕೋಶದೊಳಗೆ ಗುಂಯ್ಗುಡಬೇಕು. ಭಾವನೆಗಳು ಸ್ಪುರಿಸಬೇಕು. ಆಲೋಚನೆಗಳು ಅಕ್ಷರರೂಪ ತಳೆಯಬೇಕು. ಅದು ಬರೆದವರಿಗೂ ಓದಿದವರಿಗೂ ರುಚಿಸಬೇಕು.

    ನೊಂದ ಕೊರಳಲಿ ನರಳು ನುಡಿಯಿದೆ / ಹಿಡಿದ ವೀಣೆಯ ತಂತಿ ಮಿಡಿದರೆ / ಹೊಮ್ಮುತಿದೆ ಬರಿ ರೋದನ (ಕುವೆಂಪು) ಎಂಬಂತೆ ಬರೆಯುವವನ ಕಷ್ಟ ಓದುಗನಿಗೆ ಇಷ್ಟವಾಗಬೇಕು. ಸಹೃದಯಿಗಳನ್ನು ಸೆಳೆಯುವ, ಮಿಡಿಯುವ, ತುಡಿಯುವ ಕಾವ್ಯವೆನ್ನುವುದು ಶಾಸ್ತ್ರ, ಅಲಂಕಾರ, ಆಭರಣ ಎಲ್ಲವೂ ಹೌದು.

    ಕವಿಯಾಗಬೇಕೆಂದು ಬರೆಯುವವರು ಬಹಳ, ನಿಜದ ಕವಿಗಳು ವಿರಳ. ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿ ಆಹ್ವಾನಿತರ ಸಾಲಿನಲ್ಲಿರುವ ಹೆಸರುಗಳನ್ನು ಕಂಡಾಗ ಇಷ್ಟೊಂದು ಕವಿಗಳಿರುವರೇ ಎಂಬ ಆಶ್ಚರ್ಯ. ಆದರೆ, ಕವಿತ್ವಕ್ಕೆ ಸಮರ್ಪಿಸಿಕೊಂಡ, ಕಾವ್ಯಕನ್ನಿಕೆಯನ್ನು ಒಲಿಸಿಕೊಂಡ ಭಾವಕೋವಿದರು ಕಡಿಮೆ. ಗೋಷ್ಠಿಗಳಲ್ಲಿ ವಾಚಿಸಲಾಗುವ ಹೆಚ್ಚಿನ ಕವಿತೆಗಳ ಸ್ವರೂಪಕ್ಕೆ ಇದೊಂದು ಉದಾಹರಣೆ-

    ಉದ್ದುದ್ದ ಬರೆದರೆ ಗದ್ಯ

    ಪದದ

    ಕೆಳಗೆ

    ಪದ

    ಬರೆದರೆ

    ಪದ್ಯ!

    ಕಾವ್ಯ-ಕವಿತೆ ಎಂದರೆ, ಅಲ್ಲೊಂದು ರಸಾಸ್ವಾದನೆ ಇರಬೇಕು, ಅನುಸಂಧಾನವಿರಬೇಕು, ಆಹ್ಲಾದವಿರಬೇಕು, ತಂಪುತನವಿರಬೇಕು, ಎಂಥ ನೋವನ್ನೂ, ಎದೆಭಾರವನ್ನೂ, ತಲೆಶೂಲೆಯನ್ನೂ ತಗ್ಗಿಸುವ, ಕುಗ್ಗಿಸುವ ಶಕ್ತಿ ಇರಬೇಕು. ಭಾವತೀವ್ರತೆ ಇರಬೇಕು, ಮನಸ್ಸನ್ನು ಕೆರಳಿಸುವುದಕ್ಕಿಂತ ಹೃದಯ ಅರಳಿಸುವಂಥ ಮೃದುತ್ವವಿರಬೇಕು. ಕಾವ್ಯ ಚಿಂತನೆಗೆ ಹಚ್ಚಬೇಕು. ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ’ ಎಂಬಂಥ ಅನಿವಾರ್ಯ ಅನುಸಂಧಾನ ಕವಿ ಹಾಗೂ ಕಾವ್ಯದ ನಡುವೆ ಇರಬೇಕು.

    ‘ನೀರು ಕುದಿಯಬೇಕು / ಎಂದರೆ / ನೀರು ತುಂಬಿದ ಪಾತ್ರೆಯೂ ಸುಡಬೇಕು / ನಾ ನೀರು/ ಅವ ಪಾತ್ರೆ/ ನೀರು ತುಂಬಿದ ಪಾತ್ರೆ ಸುಡಬೇಕೆಂದರೆ/ ಒಲೆದಂಡೆಯೂ ಕಾಯಬೇಕು / ನಾ ಪಾತ್ರೆ / ಅವ ಒಲೆ (ಅನುಪಮಾ ಎಚ್.ಎಸ್) ಕವಿತೆ ಎಂದರೆ ಪದಗಳ ವಿಂಗಡಣೆ, ಜೋಡಣೆ ಅಲ್ಲ. ಬದುಕಿನ ಸಾರ, ಸತ್ವ, ಸರ್ವಸ್ವವನ್ನೂ ಕೆಲವೇ ಪದಗಳಲ್ಲಿ ಹಿಡಿದಿಡುವ ಶಕ್ತಿ ಅದು. ಅಲ್ಲೊಂದು ತತ್ತ್ವವಿದೆ, ಜ್ಞಾನವಿದೆ, ದರ್ಶನವಿದೆ. ಚಿಂತನೆಯಿದೆ. ಕೊನೆಯಲ್ಲೊಂದು ಪ್ರಶ್ನೆಯಿದೆ. ಅದರ ಬೆನ್ನಲ್ಲೇ ಉತ್ತರವಿದೆ. ಜಗತ್ತಿನ ಸತ್ಯಗಳಿಗೆ ಕವಿತೆಗಳು ಬೆಳಕಿಂಡಿ.

    ಜನರಿಗೆ ಕವಿತೆ ಎಂದರೆ ಪ್ರೀತಿ. ಇದಕ್ಕೆ ಕಾರಣವೂ ಪ್ರೀತಿ! ಹೌದು, ಪ್ರೀತಿ, ಪ್ರೇಮ, ಪ್ರಣಯವನ್ನು ಕವಿತೆಗಳಷ್ಟು ಸಮರ್ಥವಾಗಿ ಅಭಿವ್ಯಕ್ತಿಸುವ ಇನ್ನೊಂದು ಮಾಧ್ಯಮ ಇಲ್ಲ. ಜಗತ್ತಿನ ಹೆಚ್ಚಿನ ಕವಿಗಳು ಆರಂಭದಲ್ಲಿ ಪ್ರೇಮಕವಿಗಳೇ. ಆನಂತರ ಅವರವರ ಅಭಿರುಚಿ, ಅಧ್ಯಯನ, ಪ್ರಬುದ್ಧತೆ ಪ್ರಕಾರ ಭಿನ್ನ ಕವಲುಗಳನ್ನು ತುಳಿಯುತ್ತಾರೆ. ‘ಹತ್ತಿರವಿದ್ದೂ ದೂರದವಳೋ/ ದೂರವಿದ್ದೂ ಹತ್ತಿರದವಳೋ / ಇನ್ನೂ ತಿಳಿದಿಲ್ಲ / ಆಗಲೇ ಹೊರಟಿರುವೆ ನೀ ಊರಿಗೆ…’ ಕಥೆ ಗಂಡಾದರೆ, ಕಾವ್ಯ ಹೆಣ್ಣು. ಕವಿತೆಗಳಿಗೆ ಅವಳೇ ಸ್ಪೂರ್ತಿ, ಪ್ರೇರಣೆ. ಮೊದಲ ನೋಟ, ಮೊದಲ ಮಾತು, ಹಾವಭಾವ, ಸರಸ ಸಲ್ಲಾಪ ಎಲ್ಲವೂ ಕಾವ್ಯಮಯವೇ. ಒಲಿದರೆ ಪ್ರೇಮ, ವಿರಹ, ವಿಪ್ರಲಂಭದ ಕಾವ್ಯಗಳು. ತಿರಸ್ಕರಿಸಿದರೆ ಭಗ್ನ, ಶೋಕಕವಿತೆಗಳು. ಕವಿತೆ ಬರೆಯುವವರಿಗೆ ಹೆಣ್ಣು ಒಲಿದರೂ, ಮುನಿದರೂ ಕಾವ್ಯದ ವಸ್ತುವೇ.

    ‘ನಿನ್ನ ಕುರಿತು / ಪದ್ಯ ಕಟ್ಟಲಾಗದಷ್ಟು ಹತ್ತಿರವಿರುವೆ / ಹೇಳು / ಮೆಲ್ಲಗೆ ದೂರ ಸರಿಯಲೇ?

    ನಿನ್ನ ಕುರಿತು / ಪದ್ಯ ಕಟ್ಟಲಾಗದಷ್ಟು ದೂರವಿರುವೆ / ಹೇಳು / ಮೆಲ್ಲನೆ ನಿನ್ನ ಸಮೀಪಿಸಲೇ?’ (ಕಾವ್ಯಾ ಕಡಮೆ ನಾಗರಕಟ್ಟೆ)

    ಕವಿತೆಯೆಂದೊಡನೆ ಅದು ಭಾವೋತ್ಕರ್ಷ, ಹೃದಯ ಕಂಪನದ ಸಂಭ್ರಮ ರೂಪಕ. ಅಲ್ಲಿ ಚಡಪಡಿಕೆಗಳು ಪದಗಳ ರೂಪದಲ್ಲಿ ನರ್ತಿಸುತ್ತವೆ. ಆಕರ್ಷಿಸುತ್ತವೆ. ಪ್ರಶ್ನೆಗಳಾಗುತ್ತವೆ. ಅನುನಯಿಸುತ್ತವೆ. ಕಲ್ಪನೆಯ ಶಕ್ತಿಯನ್ನು ವಿಸ್ತಾರಗೊಳಿಸುತ್ತವೆ. ಪ್ರಕೃತಿಯ ಪುಟ್ಟ ಪುಟ್ಟ ಸಂಗತಿಗಳೂ ವಿಸ್ಮಯವಾಗಿ ಕಾಣುತ್ತವೆ, ಕಾಡುತ್ತದೆ. ಸೃಷ್ಟಿಯನ್ನು ನಾವು ನೋಡುವ ಬಗೆ ಬದಲಾಗುತ್ತದೆ.

    ‘ನಿನ್ನೆಯ ನಾಲ್ಕು ಹನಿ ಮಳೆಗೆ / ಚಳಿಯ ಹೂವು ಬಿರಿದು/ ಸಣ್ಣಗೇ ಗಾಳಿಗೆ ಎಲೆ ಅಲುಗಿ / ಮೆಲ್ಲಗೇ ಮೈ ಸವರಿದಾಗ/ ನಿನ್ನ ಬೆಚ್ಚಗಿನ ಹೊಳೆಯಂಥ/ ಕಣ್ಣುಗಳದ್ದೇ ನೆನಪು ನನಗೆ’ (ರೇಣುಕಾ ನಿಡಗುಂದಿ) ಅನುಭವಗಳು ರೂಪಕಗಳಾಗುತ್ತವೆ. ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಅಲ್ಲೊಂದು ಹೊಸ ಕಾವ್ಯ ಸೃಷ್ಟಿಯಾಗಿರುತ್ತದೆ. ‘ದೀಪ ಹಚ್ಚುವ ಹೊತ್ತು / ಕಲ್ಯಾಣಿಯಲದ್ದಿ ತೊಳೆದ/ ಒದ್ದೆ ಪಾದದ ಗುರುತು’ (ಪ್ರಜ್ಞಾ ಮತ್ತಿಹಳ್ಳಿ) ನಿತ್ಯದ ದಿನಚರಿಯಲ್ಲೂ ನವೀನ ಕಲ್ಪನೆಗಳು ಮೊಳಕೆಯೊಡೆಯುತ್ತವೆ.

    ಹಾಗೆಂದು ಕವಿತೆ ಬರೆಯುವುದು ಅಷ್ಟು ಸುಲಭವೇ. ಅಹಂಕಾರವಿದ್ದಲ್ಲಿ ಕಾವ್ಯಸ್ಪುರಣವಿರದು. ಕಾವ್ಯ ಗಂಗೆಯ ಅವತರಣವೂ ಅಷ್ಟೇ. ಅದು ಪ್ರೀತಿಗೆ, ಮುಗ್ಧತೆಗೆ ಒಲಿಯುವ ಕಾಮಧೇನು. ಹಮ್ಮು, ಬಿಮ್ಮು, ದರ್ಪಗಳಿದ್ದಲ್ಲಿ ಕಾವ್ಯವಿರುವುದಿಲ್ಲ.

    ‘ಬರೆದಂತೆಲ್ಲಾ ಕಾವ್ಯ / ಲಜ್ಜೆಯಲ್ಲಿ ಅರಳುತ್ತದೆ/ ಒಲುಮೆಯಲಿ ಒಲಿದರೆ

    ಬರೆದಂತೆಲ್ಲಾ ಕಾವ್ಯ / ನಿಡುಸುಯ್ದು ಹೊರಳುತ್ತದೆ/ ತೃಣವೆಂದು ಬಗೆದರೆ

    ಶ್!! ಹಗುರ.. / ಜೋಪಾನ! / ಕಾವ್ಯದೊಳಗೆ ನಾಳೆಗಳಿವೆ/ ಮತ್ತು/ ಹೆಣ್ಣಿನೊಳಗೆ ಕಾವ್ಯವಿದೆ’ (ದೀಪಾ ಗಿರೀಶ್). ಕಾವ್ಯಗಳು ನಾಳೆಗಳನ್ನು ಪ್ರತಿಫಲಿಸುವ ಕನ್ನಡಿ, ತೋರಿಸುವ ದಿಕ್ಸೂಚಿ, ಮುನ್ನಡೆಸುವ ದಾರಿದೀಪ ಎಂದು ಗುರುತಿಸುವುದರಲ್ಲೇ ಸಾರ್ಥಕತೆ ಇದೆ. ಹೆಣ್ಣಿನೊಳಗೆ ಕಾವ್ಯ, ಕಾವ್ಯದೊಳಗೆ ಸ್ತ್ರೀತ್ವದ ಸ್ನಿಗ್ಧತೆ ಅವಿನಾಭಾವ, ಬಿಡಿಸಲಾಗದಂಥದ್ದು.

    ನೋವನ್ನು, ಕಣ್ಣೀರನ್ನು ಕವಿತೆಯಷ್ಟು ಸಮರ್ಥವಾಗಿ ಬಿಂಬಿಸುವ ಶಕ್ತಿ ಬೇರೊಂದಕ್ಕಿಲ್ಲ. ಕವಿತೆಗಳು ಪದವಾಗಿ, ಭಾವವಾಗಿ, ಹಾಡಾಗಿ, ಅಂತರಂಗದ ಸಖಿಯಾಗಿ ದುಃಖ ಹಂಚಿಕೊಳ್ಳುತ್ತವೆ. ಸಮಾಧಾನಿಸುತ್ತದೆ. ಸಾವಿರ ಮಾತುಗಳಲ್ಲಿ ಹೇಳಲಾದ ನೋವುಗಳನ್ನು ಎರಡೇ ಸಾಲಿನಲ್ಲಿ ಹಿಡಿದಿಡುತ್ತದೆ. ‘ನಗೆ ಮಲ್ಲಿಗೆಯ ಗಿಡದಲ್ಲಿ / ಹುದುಗಿದೆ ನೋವ ಮೊಗ್ಗು/ ಮೆಲ್ಲಗರಳಿ ಘಮ ಬೀರಿ/ ಅವನ ಸುತ್ತ ಪರಿಮಳಿಸಿ/ ನಿಲ್ಲುವಾಗ.. / ಅವನೋ ತಣ್ಣೀರಡಿ ನಿಂತ ಬಂಡೆ / ಗೌರಿ ದುಃಖ ಶಿವನಿಗೂ ಬೇಡವಂತೆ…’ (ವಿದ್ಯಾರಶ್ಮಿ ಪೆಲ್ಲತಡ್ಕ)

    ಇಂಥ ಕವಿತೆಗಳಿಗಿರುವ ಶಕ್ತಿ ಅಪಾರ. ಇಲ್ಲಿ ಕಾವ್ಯವಿದೆ, ಕಲ್ಪನೆಯಿದೆ, ರೂಪಕವಿದೆ, ದುಃಖವಿದೆ, ಮನಸ್ಸಿನ ದುಗುಡವಿದೆ, ಕೊನೆಗೊಂದು ಸಮಾಧಾನವಿದೆ. ಇದೇ ಬದುಕೆಂಬ ತಿಳಿವಳಿಕೆಯಿದೆ. ‘ಕಟ್ಟುವುದಾದರೂ ಯಾವ ಮನೆ / ಈಗ ಕವನವೇ ನನ್ನ ಮನೆ / ದಿನವೂ ಅಂಡಲೆಯುವೆ ಮರುಭೂಮಿಯಲ್ಲಿ/ ನನ್ನ ರಕ್ತಕ್ಕೆ ಮದರಂಗಿ ವಾಸನೆ / ಸೂರ್ಯನ ಜತೆಗಿನ ನಂಟನ್ನು/ ಕಳಚಿಕೊಳ್ಳಲಾಗದ / ಹೂಗಳಂತೆ’ (ಸಾರಾ ಶಗುಫ್ತ-ಕನ್ನಡಕ್ಕೆ ಹಸನ್ ನಯೀಂ ಸುರಕೋಡ) ಬದುಕಿನ ವಿಕಟ ಸತ್ಯಗಳನ್ನು ಸಾಹಿತ್ಯವಾಗಿಸುವ ಶಕ್ತಿಯಿದೆ. ಕಾವ್ಯವೆಂದರೆ ಪ್ರೀತಿ ಮಾತ್ರವಲ್ಲ, ನೋವು ಮಾತ್ರವಲ್ಲ, ಅಲ್ಲಿ ವಿಡಂಬನೆಯೂ ಇದೆ. ರವಿ ಕಾಣದ್ದನ್ನು ಕಾಣುವ ಕೌತುಕತೆಯಿದೆ. ಹೊಸ ಹೊಳಹುಗಳನ್ನು ಸೃಷ್ಟಿಸುವ ಉತ್ಸಾಹವಿದೆ. ವಾಚ್ಯದ ಅರ್ಥಗಳನ್ನು ಮೀರಿದ ಸೂಚ್ಯಾರ್ಥ, ಲಕ್ಷ್ಯಾರ್ಥಗಳನ್ನು ಧ್ವನಿಸುವ ಸಾಧ್ಯತೆ ಇದೆ. ‘ಗೋರಿಗಳಿಗೆಲ್ಲ ಜೀವಕೊಟ್ಟು/ ಸತ್ತವರನೆಲ್ಲ ಎಳೆದು ತಂದು / ಮಣ್ಣಾದನಲ್ಲ ಇತಿಹಾಸಕಾರ / ಹೆಣ್ಣಿನ ಮುಖದಲ್ಲಿ ಚಂದ್ರನ ಕಂಡು / ಚಂದ್ರನಲ್ಲಿ ಹೆಣ್ಣೊಂದ ಕಂಡು / ತನ್ನನ್ನೇ ಕಾಣದಾದ ಕವಿಪುಂಗವ’ (ವಸು ಮಳಲಿ).

    ಕವಿತೆಗಳು ಹೇಗೆಂದರೆ, ಬರೆಯುವವರಿಗೆ ಕೆಲವು ಅರ್ಥ. ಓದುಗರಿಗೆ ನಾನಾ ಅರ್ಥ. ಅದು ಅವರವರ ಭಾವಕ್ಕೆ, ವ್ಯಾಪ್ತಿಗೆ ಬಿಟ್ಟಿದ್ದು. ಎಲ್ಲವನ್ನೂ ಹೇಳಿದ ಮೇಲೂ ಹೇಳದೆ ಉಳಿಯುವಂಥದ್ದು, ಅರ್ಥೈಸದೆ ಉಳಿಸುವಂಥದ್ದು ಸಾವಿರ. ಕವಿತೆಗಳೆನ್ನುವುದು ಬದುಕೆಂಬ ಖಾಲಿ ಹಾಳೆಯಂತೆ. ನಾವೇನು ಬರೆದುಕೊಂಡರೂ ಅದು ನಮ್ಮದೇ ಬದುಕಿನ ಕಾವ್ಯ.

    ಬದುಕೆನ್ನುವುದೇ ಹೀಗೆ. ಯಾರೂ ಯೋಚಿಸಿರದಂಥ ಬಗೆ. ದಿಢೀರನೆ ಪ್ರತ್ಯಕ್ಷವಾದ ಕರೊನಾ ವೈರಸ್ ಅನೇಕರ ಪಾಲಿಗೆ ಏಕಾಕಿತನದ ದರ್ಶನ ಮಾಡಿಸುತ್ತಿದೆ. ಇದ್ದಕ್ಕಿದ್ದಂತೆ ವೀಕೆಂಡ್​ಗಳು ಸಪ್ಪೆಯಾಗಿವೆ. ರಸ್ತೆಗಳು ಖಾಲಿಯಾಗಿವೆ, ಮಾಲ್, ಮಲ್ಟಿಪ್ಲೆಕ್ಸ್​ಗಳು ಮುಚ್ಚಿವೆ. ಇಂಥ ಅಯೋಮಯ, ನೀರಸ ಸನ್ನಿವೇಶದಲ್ಲಿ, ವರ್ಕ್ ಫ್ರಂ ಹೋಮ್ ಏಕತಾನತೆಯಿಂದ ಹೊರಬರಲು, ನಾಲ್ಕುಗೋಡೆಗಳ ನಡುವೆ ಮನೋಲ್ಲಾಸ ಕಂಡುಕೊಳ್ಳಲು ಕವಿತೆಗಳ ಓದಿಗಿಂತ ಸೊಗಸಾದ ಆಯ್ಕೆ ಬೇರೇನಿದೆ? ಕೊಂಡು, ತಂದು ಓದದೇ ಎತ್ತಿಟ್ಟ ಪುಸ್ತಕಗಳನ್ನು ಶೆಲ್ಪುಗಳಿಂದ ತೆಗೆದು ಪುಟ ತಿರುಗಿಸುವ ಸಮಯ ಬಂದಿದೆ. ಏನಂತೀರಿ?

    ಕವಿತೆ ಕವಿತೆ / ನೀನೇಕೆ/ ಪದಗಳಲಿ ಅವಿತೆ?

    (ಲೇಖಕರು: ವಿಜಯವಾಣಿ ಡೆಪ್ಯೂಟಿ ಎಡಿಟರ್)​

    ಶಿವಾಜಿ ಸಾಮ್ರಾಜ್ಯದ ಮಹಾಪರಾಕ್ರಮಿ ತಾನಾಜಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts